ನೀಟ್(NEET) ರದ್ದು ಮಾಡುವಂತೆ; ಕಾಂಗ್ರೆಸ್ ಆಗ್ರಹ
‘ನೀಟ್ ಪರೀಕ್ಷೆ ನಡೆಯುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಜೇಬುಗಳಿಲ್ಲದ ಬಟ್ಟೆ ಧರಿಸಿ,ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳಿಲ್ಲದೆ, ಕುಡಿಯುವ ನೀರಿನ ಬಾಟಲಿಯನ್ನು ತೆಗೆದುಕೊಂಡು ಹೋಗದೆ ಕಷ್ಟಪಟ್ಟು ಪರೀಕ್ಷೆ ಬರೆದಿದ್ದಾರೆ. ಇಂತಹ ಸಂದರ್ಭದಲ್ಲಿ ಮರು ಪರೀಕ್ಷೆ ಎಂದರೆ ವಿದ್ಯಾರ್ಥಿಗಳ ಸ್ಥಿತಿ ಹೇಗಿರುತ್ತದೆ ಎಂಬುದನ್ನು ಮೊದಲು ಆಲೋಚಿಸಬೇಕು. ಸರಕಾರ ಪದೇ ಪದೇ ಇಂತಹ ಪ್ರಕರಣಗಳು ಮರುಕಳಿಸದಂತೆ ಕ್ರಮ ವಹಿಸಿ, ತಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು’.
– ಇಕ್ಬಾಲ್ ಅಹಮದ್, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ, ತುಮಕೂರು
Tumkur news
ತುಮಕೂರು: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವ ಮೂಲಕ ಕೇಂದ್ರ ಸರಕಾರ ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ನೀಟ್ ರದ್ದು ಮಾಡಿ, ಈ ಹಿಂದಿನಂತೆ ರಾಜ್ಯಗಳೇ ಸಿಇಟಿ ಪರೀಕ್ಷೆ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್ ಒತ್ತಾಯಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈದ್ಯನಾಗಲೇ ಬೇಕೆಂಬ ಹಂಬಲದಲ್ಲಿ ವಿದ್ಯಾರ್ಥಿಗಳು ಶ್ರಮ ಹಾಕಿ ಪರೀಕ್ಷೆ ಬರೆದಿದ್ದಾರೆ. ಆದರೆ ಪ್ರಶ್ನೆ ಪತ್ರಿಕೆ ಲೀಕ್ ಆಗುವಂತೆ ನಿರ್ಲಕ್ಷ ವಹಿಸಿ, ಪರೀಕ್ಷೆ ಬರೆದ 23 ಲಕ್ಷ ವಿಧ್ಯಾರ್ಥಿಗಳ ಭವಿಷ್ಯವನ್ನೇ ಕತ್ತಲೆಯಲ್ಲಿಟ್ಟಿದೆ ಎಂದು ಆರೋಪಿಸಿದರು.
ರಾಷ್ಟ್ರೀಯ ಟೆಸ್ಟ್ ಏಜೆನ್ಸಿಯ ಅಧ್ಯಕ್ಷ ಪ್ರದೀಪ ಕುಮಾರ್ ಜೋಷಿ, ಹಿಂದೆ ಮಧ್ಯ ಪ್ರದೇಶದಲ್ಲಿ ಇದ್ದಾಗಲೂ ಇದೇ ರೀತಿಯ ಕತ್ಯಗಳು ನಡೆದಿದ್ದವು. ಅಲ್ಲದೆ 2024ರಲ್ಲಿ ಇದೇ ರೀತಿಯ ಪ್ರಕರಣ ನಡೆದಾಗ, ಸುಪ್ರಿಂಕೋರ್ಟಿನ ಆದೇಶದಂತೆ ಪತ್ರಿಕೆ ಸೋರಿಕೆಯಾದ ಪಾಟ್ನಾದಲ್ಲಿ ಮಾತ್ರ ಮರು ಪರೀಕ್ಷೆ ನಡೆಸಲಾಗಿತ್ತು. ಆದರೆ ಈ ಬಾರಿ ಇಡೀ ದೇಶಕ್ಕೆ ಅನ್ವಯವಾಗುವಂತೆ ಮಾಡಿ, ಚೆನ್ನಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಆತ್ಮಹತ್ಯೆ ದಾರಿ ಹಿಡಿಯುವಂತೆ ಮಾಡಿದೆ. ಆದರೆ ಇದುವರೆಗೂ ಎನ್.ಟಿ.ಎ ಮುಖ್ಯಸ್ಥರ ವಿರುದ್ಧ ಕೇಂದ್ರ ಸರಕಾರ ಯಾವ ಕ್ರಮವನ್ನು ಕೈಗೊಂಡಿಲ್ಲ. ಪದೇ ಪದೇ ಈ ರೀತಿ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ, ರಾಷ್ಟ್ರದ ಅಭಿವೃದ್ದಿಗೂ ಮಾರಕವಾಗಲಿದೆ ಎಂದು ಇಕ್ಬಾಲ್ ಅಹಮದ್ ದೂರಿದರು.
