ಚಿರತೆ ಸೆರೆಗೆ ಅಡ್ಡಿ, ಅಧಿಕಾರಿ ಮೇಲೆ ಹಲ್ಲೆ; ಗ್ರಾಮಸ್ಥರ ವಿರುದ್ಧ ದೂರು ದಾಖಲು
Tumkurnews.in
ತುಮಕೂರು: ತಾಲ್ಲೂಕಿನ ತಿಮ್ಮಸಂದ್ರ ಗ್ರಾಮದಲ್ಲಿ ಚಿರತೆ ಸೆರೆ ಕಾರ್ಯಾಚರಣೆ ವೇಳೆ ಅಧಿಕಾರಿಯೋರ್ವರ ಮೇಲೆ ಗ್ರಾಮಸ್ಥರಿಂದ ಹಲ್ಲೆ ನಡೆದಿದೆ ಎಂದು ದೂರು ದಾಖಲಾಗಿದೆ.
ತುಮಕೂರು ವಿಶ್ವವಿದ್ಯಾಲಯದ ಜ್ಞಾನಸಿರಿ ಕ್ಯಾಂಪಸ್ ಸಮೀಪದ ತಿಮ್ಮಸಂದ್ರದ ಬಳಿ ಗುರುವಾರ ಚಿರತೆಯೊಂದು ಕಾಣಿಸಿಕೊಂಡಿತ್ತು. ಸ್ಥಳೀಯರ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದು, ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಕೈಗೊಂಡಿದ್ದರು.
ಈ ವೇಳೆ ಗ್ರಾಮಸ್ಥರ ಗಲಾಟೆಯಿಂದ ಹೆದರಿದ ಚಿರತೆಯು ತೆಂಗಿನ ಮರ ಏರಿ ರಕ್ಷಣೆ ಪಡೆದುಕೊಂಡಿತ್ತು. ಹಲವು ಹೊತ್ತಿನ ಬಳಿಕ ಮರದಿಂದ ಇಳಿದು ಅರಣ್ಯಾಧಿಕಾರಿಗಳ ಸೆರೆಗೆ ಸಿಗದೇ ತಪ್ಪಿಸಿಕೊಂಡು ಓಡಿ ಹೋಗಿತ್ತು. ಈ ವೇಳೆ ಗ್ರಾಮದ ಕೆಲವರು ಚಿರತೆ ಸೆರೆಗೆ ಬಂದಿದ್ದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಅಧಿಕಾರಿಯೋರ್ವರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ.
ಗ್ರಾಮಸ್ಥರ ವಿರುದ್ಧ ದೂರು:
ತಿಮ್ಮಸಂದ್ರದ ಅಶ್ವತ್ಥ್ ಎಂಬುವವರ ತೋಟದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಅಧಿಕಾರಿಗಳು ಭೇಟಿ ನೀಡಿದ ವೇಳೆ ಅದು ತೆಂಗಿನ ಮರವೇರಿ ಕುಳಿತಿತ್ತು. ಅಧಿಕಾರಿಗಳು, ಸಿಬ್ಬಂದಿಯು ಚಿರತೆಯನ್ನು ಸೆರೆ ಹಿಡಿಯಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅದು ಮರದಿಂದ ಜಿಗಿದು ತಪ್ಪಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ‘ಗುಂಪುಗೂಡಿ ಜನರು ಚಿರತೆ ಕಾರ್ಯಾಚರಣೆಗೆ ಅಡ್ಡಿಪಡಿಸಿದ್ದಾರೆ. ಅವರ ಗಲಾಟೆಯಿಂದಾಗಿ ಚಿರತೆ ಓಡಿ ಹೋಗಿದೆ ಎಂದು’ ಬನ್ನೇರುಘಟ್ಟ ಜೈವಿಕ ಉದ್ಯಾನದ ಉಪ ನಿರ್ದೇಶಕ ಡಾ. ಎಚ್.ಎಸ್ ಪ್ರಯಾಗ್ ಅವರು ಹೆಬ್ಬೂರು ಠಾಣೆಗೆ ದೂರು ನೀಡಿದ್ದು, 15 ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಾಗಿದೆ.
