ತುಮಕೂರು: ಜಂಬೂಸವಾರಿ ವೇಳೆ ಪಟಾಕಿ ಸಿಡಿಸಿದವರ ವಿರುದ್ಧ ಕೇಸ್ ದಾಖಲು
Tumkurnews.in
ತುಮಕೂರು: ತುಮಕೂರು ದಸರಾ ಪ್ರಯುಕ್ತ ಅ.21ರಂದು ನಗರದಲ್ಲಿ ಜಂಬೂ ಸವಾರಿ ನಡೆಯುತ್ತಿದ್ದ ವೇಳೆ ಪಟಾಕಿ ಸಿಡಿಸಿ, ಆತಂಕ ಸೃಷ್ಟಿಸಿದವರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಬಾರಿ ಹೊತ್ತ ಆನೆ ಮೆರವಣಿಗೆ ಭದ್ರಮ್ಮ ಛತ್ರದ ಬಳಿ ಸಾಗುತ್ತಿತ್ತು. ಅದೇ ಸಮಯದಲ್ಲಿ ಸಮೀಪದ ಶ್ರೀರಾಮ ಮಂದಿರದ ಬಳಿ ಕೆಲವು ವ್ಯಕ್ತಿಗಳು ಏಕಾಏಕಿ ಪಟಾಕಿ ಸಿಡಿಸಿದ್ದಾರೆ. ಇದರಿಂದ ಅಂಬಾರಿ ಹೊತ್ತ ಆನೆ, ಇತರೆ ಆನೆಗಳು ಕೆಲಕಾಲ ವಿಚಲಿತಗೊಂಡಿದ್ದವು. ಜಂಬೂ ಸವಾರಿ ವೀಕ್ಷಿಸುತ್ತಿದ್ದ ಜನರು ಕೂಡ ಆನೆಗಳು ಬೆದರಿದ್ದರಿಂದ ಕೆಲಕಾಲ ಗಾಬರಿಯಾಗಿದ್ದರು. ಇದು ಅಪಾಯಕ್ಕೆ ಆಹ್ವಾನ ನೀಡಿದಂತಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿ ಎಸ್.ಆರ್. ರಘು ಎಂಬುವರು ನೀಡಿದ ದೂರು ಆಧರಿಸಿದ ಪ್ರಕರಣ ದಾಖಲಿಸಲಾಗಿದೆ.
ದೂರಿನಲ್ಲೇನಿದೆ?: ಯಾರೋ ಏಕಾಏಕಿ ಪಟಾಕಿ ಸಿಡಿಸಿದ್ದರಿಂದ ಪಟಾಕಿ ಸದ್ದಿಗೆ ಮೆರವಣಿಗೆಯಲ್ಲಿದ್ದ ಆನೆಗಳು ಹಾಗೂ ನೆರೆದಿದ್ದ ಜನರು ಭಯಗೊಂಡಿದ್ದರು. ಆದ್ದರಿಂದ ಪಟಾಕಿ ಸಿಡಿಸಿ, ಅಪಾಯ ಉಂಟುಮಾಡಿದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಲಾಗಿದೆ.
