ರೋಟರಿಯಿಂದ ಹಿರಿಯ ನಾಗರಿಕರ ದಿನಾಚರಣೆ
Tumkurnews.in
ತುಮಕೂರು: ರೋಟರಿ ತುಮಕೂರು ವತಿಯಿಂದ ನಗರದ ರೋಟರಿ ಬಾಲಭವನದಲ್ಲಿ ಹಿರಿಯ ನಾಗರಿಕರ ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷೆ ಭಾಗಲಕ್ಷ್ಮಿ ನಾಗರಾಜ್, ಹಿರಿಯರು ಕಿರಿಯರಿಗೆ ಮಾರ್ಗದರ್ಶನ ನೀಡುವ ಗುರುಗಳಿದ್ದಂತೆ. ಆದ್ದರಿಂದ ನಾವೆಲ್ಲರೂ ಹಿರಿಯರನ್ನು ಗೌರವದಿಂದ ಕಾಣಬೇಕು ಹಾಗೂ ಕಾಳಜಿಯಿಂದ ನೋಡಿಕೊಳ್ಳಬೇಕು ಎಂದರು.
ರೋಟರಿ ತುಮಕೂರಿನ ಪೂರ್ವಾಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ರೋಟರಿ ಸದಸ್ಯರೆಲ್ಲರೂ ಒಂದು ಕುಟುಂಬದಂತೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಸದಸ್ಯರೆಲ್ಲರೂ ಸ್ವಯಂಪ್ರೇರಿತರಾಗಿ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರಿನ ಹಿರಿಯ ವ್ಯಂಗ್ಯಚಿತ್ರ ಕಲಾವಿದ ಶ್ರೀಧರ್ ಕೋಮರವಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಲಾವಿದ ಶ್ರೀಧರ್ ಅವರು ಸ್ಥಳದಲ್ಲೇ ವ್ಯಂಗ್ಯಚಿತ್ರಗಳನ್ನು ರಚಿಸಿ ಗಮನ ಸೆಳೆದರು. ಅಲ್ಲದೆ, ವ್ಯಂಗ್ಯಚಿತ್ರ ರಚನೆಯ ಕುರಿತು ಮಾರ್ಗದರ್ಶನ ನೀಡಿದರು. ವ್ಯಂಗ್ಯಚಿತ್ರ ಕಲೆಯು ಜನರ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಸಂತೋಷವನ್ನು ನೀಡುತ್ತದೆ ಎಂದರು.
ಹಿರಿಯ ನಾಗರಿಕರಿಗೆ ಮನರಂಜನಾ ಆಟಗಳನ್ನು ಆಡಿಸಿ, ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಚಂದ್ರಕಲಾ ಎಸ್., ಸಹಾಯಕ ಗವರ್ನರ್ ಸಿ. ನಾಗರಾಜ್, ಯಶಪಾಲ್, ನಾಗೇಶ್ ಕುಮಾರ್, ರಾಧಾ, ಹೇಮ ಮಲ್ಲಿಕ್, ಮಲ್ಲೇಶಯ್ಯ, ಶಿವಕುಮಾರಸ್ವಾಮಿ, ರಘು ಸೇರಿದಂತೆ ಹಲವು ಸದಸ್ಯರು ಭಾಗವಹಿಸಿದ್ದರು.
ಕೈದಿಗಳಿಗೆ ಕನ್ನಡಕ ವಿತರಣೆ
ನಗರದ ಕಾರಾಗೃಹದಲ್ಲಿರುವ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಓದಲು ಕೈದಿಗಳಿಗೆ ಅನುಕೂಲವಾಗುವಂತೆ ರೋಟರಿ ಚಾರ್ಟರ್ ಟ್ರಸ್ಟ್ ವತಿಯಿಂದ ಸುಮಾರು 31 ಕನ್ನಡಕಗಳನ್ನು ವಿತರಿಸಲಾಯಿತು. ಕಾರಾಗೃಹದ ಸಿಬ್ಬಂದಿಗಳಾದ ರಾಮಕೃಷ್ಣ ಮತ್ತು ರಮೇಶ್ ಅವರು ಕನ್ನಡಕಗಳನ್ನು ಸ್ವೀಕರಿಸಿದರು.
