ವರಮಹಾಲಕ್ಷ್ಮಿ ಹಬ್ಬ: ಗಗನಕ್ಕೇರಿದ ಹೂವು, ಹಣ್ಣುಗಳ ಬೆಲೆ: ಖರೀದಿಗೆ ಮುಗಿ ಬಿದ್ದ ಜನತೆ

ತಾಲ್ಲೂಕು ತುಮಕೂರು ನಗರ ಪ್ರಮುಖ ಸುದ್ದಿ

ವರಮಹಾಲಕ್ಷ್ಮಿ ಹಬ್ಬ: ಗಗನಕ್ಕೇರಿದ ಹೂವು, ಹಣ್ಣುಗಳ ಬೆಲೆ: ಖರೀದಿಗೆ ಮುಗಿ ಬಿದ್ದ ಜನತೆ

Tumkur news
ತುಮಕೂರು: ವರಮಹಾಲಕ್ಷ್ಮಿ ಹಬ್ಬ ಆಚರಣೆಗೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭರದ ಸಿದ್ದತೆಗಳು ನಡೆದಿದ್ದು, ಈ ಬಾರಿ ಹಬ್ಬ ಬಲು ದುಬಾರಿಯಾಗಿದೆ.
ಮಳೆ ಕೊರತೆ ಹಿನ್ನೆಲೆಯಲ್ಲಿ ಈ ವರ್ಷ ಹೂವು, ಹಣ್ಣುಗಳು ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಈ ಬೆಲೆ ಏರಿಕೆ ನಡುವೆಯೂ ಹಬ್ಬಕ್ಕೆ ಅಗತ್ಯ ಇರುವ ಹೂವು, ಹಣ್ಣು, ಬಾಳೆಕಂದು ಸೇರಿದಂತೆ ಮಾರುಕಟ್ಟೆಗಳಲ್ಲಿ ಇತರೆ ಸಾಮಗ್ರಿಗಳ ಖರೀದಿಗೆ ಜನಸಾಮಾನ್ಯರು ಮುಗಿ ಬಿದ್ದಿದ್ದಾರೆ.
ನಗರದ ಹೊರವಲಯದ ಅಂತರಸನಹಳ್ಳಿಯಲ್ಲಿರುವ ಹೂವು, ಹಣ್ಣು, ತರಕಾರಿ ಮಾರುಕಟ್ಟೆಯಲ್ಲಿ ಮಹಿಳೆಯರು, ಮಕ್ಕಳು, ಯುವಕರು, ಯುವತಿಯರು, ವೃದ್ಧರೆನ್ನದೆ ಜನಜಂಗುಳಿಯೇ ನೆರೆದಿದ್ದು, ಹೂವು, ಹಣ್ಣು, ಬಳೆ, ಬಾಳೆಕಂದು, ಮಾವಿನ ಎಲೆ, ತಾವರೆ ಹೂವು, ಪೂಜಾ ಸಾಮಗ್ರಿಗಳು, ಅಲಂಕಾರಿಕ ವಸ್ತುಗಳು ಸೇರಿದಂತೆ ಇತರೆ ಸಾಮಗ್ರಿಗಳ ಖರೀದಿ ಭರಾಟೆ ಬಲು ಜೋರಾಗಿದೆ.
ಹಬ್ಬದ ನೆಪದಲ್ಲಿ ಎಲ್ಲ ವಸ್ತುಗಳು ಬೆಲೆ ಗಗನಕ್ಕೇರಿದ್ದು, ಸೇವಂತಿಗೆ ಹೂವು ಮಾರಿನ ಬೆಲೆ ೨೦೦ ರಿಂದ ೨೫೦ ರೂ., ಕನಕಾಂಬರ ೩೦೦ ರೂ., ಮಲ್ಲಿಗೆ ಹೂವಿನ ದಿಂಡು ೫೦೦ ರೂ., ಮಲ್ಲೆ ಹೂವು ೩೦೦ ರೂ., ಚಂಡುಹೂವು ೧೫೦ ರೂ., ತಾವರೆ ಹೂ ೧ಕ್ಕೆ ೫೦ ರಿಂದ ೮೦ ರೂ., ಬಿಡಿ ಹೂ ಕೆ.ಜಿ.ಗೆ ೪೦೦ ರೂ., ದುಂಡು ಮಲ್ಲಿಗೆ ಒಂದು ಹಾರ ೪೦೦ ರಿಂದ ೮೦೦ ರೂ.ವರೆಗೆ, ಸೇಬು ಕೆ.ಜಿ ಗೆ ೨೦೦ ರಿಂದ ೨೫೦ ರೂ., ದ್ರಾಕ್ಷಿ ೨೦೦ ರೂ., ಬಾಳೆ ಹಣ್ಣು ೧೨೦ ರೂ., ಮೂಸಂಬಿ ೧೫೦ ರೂ., ಕಿತ್ತಳೆ ೧೬೦ ರೂ., ದಾಳಿಂಬೆ ೨೦೦ ರಿಂದ ೨೫೦ ರೂ., ಸೀಬೆಹಣ್ಣು ೧೨೦ ರೂ., ಬಾಳೆಕಂದು ಜೋಡಿಗೆ ೬೦ ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ.
ಬೆಲೆ ಎಷ್ಟೇ ದುಪ್ಪಟಾದರೂ ಜನರು ಲೆಕ್ಕಿಸದೆ ವರಮಹಾಲಕ್ಷ್ಮೀ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲು ಸಿದ್ದತೆಯಲ್ಲಿ ತೊಡಗಿರುವುದು ಕಂಡು ಬರುತ್ತಿದೆ.

Leave a Reply

Your email address will not be published. Required fields are marked *