ಇನ್ನರ್ ವೀಲ್ ಶಾಲಾ ವಿದ್ಯಾರ್ಥಿಗಳಿಗೆ ಚರ್ಚಾಸ್ಪರ್ಧೆ

ಜಿಲ್ಲಾ ಸುದ್ದಿ ತಾಲ್ಲೂಕು ತುಮಕೂರು ನಗರ ಪ್ರಮುಖ ಸುದ್ದಿ

ಇನ್ನರ್ ವೀಲ್ ಶಾಲಾ ವಿದ್ಯಾರ್ಥಿಗಳಿಗೆ ಚರ್ಚಾಸ್ಪರ್ಧೆ

Tumkurnews.in

ತುಮಕೂರು: ಕೃತಕ ಬುದ್ಧಿಮತ್ತೆ ಪೂರಕವೋ ಅಥವಾ ಮಾರಕವೋ ಎಂಬ ವಿಷಯದ ಕುರಿತು ಇನ್ನರ್ ವೀಲ್ ಕ್ಲಬ್ ತುಮಕೂರು ವತಿಯಿಂದ ಶನಿವಾರ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಅಂತರಶಾಲಾ ಚರ್ಚಾಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ನಗರದ ಅನನ್ಯ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕ್ಲಬ್‌ನ ಅಧ್ಯಕ್ಷೆ ರೇಖಾ ಶಿವಕುಮಾರ್, ಚರ್ಚಾಸ್ಪರ್ಧೆಯಿಂದ ವಿದ್ಯಾರ್ಥಿಗಳಲ್ಲಿ ತಾರ್ಕಿಕ ಚಿಂತನೆ, ಆತ್ಮವಿಶ್ವಾಸ, ಮಾತುಗಾರಿಕೆ ಹಾಗೂ ಪ್ರಶ್ನಿಸುವ ಮನೋಭಾವ ಬೆಳೆಯುತ್ತದೆ. ಭಾಷಣ ಕಲೆಯೂ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಸ್ನೇಹ ಮತ್ತು ಸೇವೆಯ ಆಶಯದೊಂದಿಗೆ ಹುಟ್ಟಿಕೊಂಡ ಇನ್ನರ್ ವೀಲ್ ಸಂಸ್ಥೆಯು ಇಂದು ನೂರಕ್ಕೂ ಹೆಚ್ಚು ದೇಶಗಳಲ್ಲಿ, 182 ಜಿಲ್ಲೆಗಳಲ್ಲಿ, 4,200 ಸಂಸ್ಥೆಗಳನ್ನು ಹೊಂದಿದ್ದು, 1,15,000 ಸದಸ್ಯರನ್ನು ಒಳಗೊಂಡಿದೆ. ಭಾರತದಲ್ಲಿ 20 ಜಿಲ್ಲೆಗಳಲ್ಲಿ 1,751 ಸಂಸ್ಥೆಗಳು ಹಾಗೂ 60,344 ಸದಸ್ಯರಿದ್ದಾರೆ. ನಮ್ಮ 319ನೇ ಜಿಲ್ಲೆಯಲ್ಲಿ 48 ಸಂಸ್ಥೆಗಳು ಮತ್ತು 2,204 ಸದಸ್ಯರಿದ್ದಾರೆ ಎಂದು ವಿವರಿಸಿದರು.

1968ರ ಜೂನ್‌ನಲ್ಲಿ ಆರಂಭವಾದ ತುಮಕೂರು ಇನ್ನರ್ ವೀಲ್ ಸಂಸ್ಥೆಯು ಮುಂದಿನ ವರ್ಷ 60ನೇ ವರ್ಷಕ್ಕೆ ಕಾಲಿಡಲಿದೆ. ಶಿಕ್ಷಣ, ಪರಿಸರ, ಜೀವನೋಪಾಯ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹಾಯ ಮಾಡುತ್ತಾ ಬಂದಿದೆ. ಪ್ರಪಂಚದ ಏಕೈಕ ಮಹಿಳಾ ಸಂಸ್ಥೆ ಇನ್ನರ್ ವೀಲ್ ಎಂದು ತಿಳಿಸಿದರು.

ನಿವೃತ್ತ ಪ್ರಾಧ್ಯಾಪಕ ಅಮೃತ ವೀರಭದ್ರಯ್ಯ ಅವರು ಚರ್ಚಾಸ್ಪರ್ಧೆಯ ತೀರ್ಪುಗಾರರಾಗಿದ್ದರು. ಅನನ್ಯ ಕಾಲೇಜಿನ ಸಂಸ್ಥೆಯ ನಿರ್ದೇಶಕ ಡಾ. ಹರೀಶ್ ಎಚ್. ಅತಿಥಿಯಾಗಿ ಭಾಗವಹಿಸಿದ್ದರು.

ಇನ್ನರ್ ವೀಲ್ ಸಂಸ್ಥೆಯ ಕಾರ್ಯದರ್ಶಿ ಮಂಜುಳಾ ವಿಜಯಶಂಕರ್, ನಿಕಟಪೂರ್ವ ಅಧ್ಯಕ್ಷೆ ಮಂಜುಳಾ ಲೋಕೇಶ್, ಸಂಚಾಲಕಿ ವೀಣಾ ಉಮಾಶಂಕರ್, ಐಎಸ್‌ಒ ಲತಾ ಮಹೇಶ್, ಸಂಸ್ಥೆಯ ಪತ್ರಿಕೆ ಸಂಪಾದಕಿ ಓ.ಕೆ. ವೀಣಾ, ಮುಖಂಡರಾದ ರೇಖಾ ಬಾಬು, ಸುಮಿತ್ರಾ ನಾಗರಾಜು, ರಾಜೇಶ್ವರಿ ರುದ್ರಪ್ಪ, ಮಂಜುಳಾ ಚಂದ್ರಪ್ಪ, ಮಮತಾ ಫಣೀಂದ್ರ, ಮಮತಾ ಪ್ರಸಾದ್ ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *