ಶಿರಾ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಂಗಸ್ವಾಮಿ ಮನೆ, ಕಚೇರಿ ಮೇಲೆ ಲೋಕಾ ದಾಳಿ: 2.20 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ
Tumkurnews.in
ತುಮಕೂರು: ಶಿರಾ ನಗರಾಭಿವೃದ್ಧಿ ಪ್ರಾಧೀಕಾರದ ಆಯುಕ್ತ ಬಿ.ಟಿ.ರಂಗಸ್ವಾಮಿ ಅವರ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ಶುಕ್ರವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದು, ಅಕ್ತಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ತುಮಕೂರು ನಗರದ ಜಯನಗರದಲ್ಲಿನ ರಾಯರಕೃಪಾ ಹೆಸರಿನ ನಿವಾಸ, ಹಿರಿಯೂರು ಹಾಗೂ ಬೆಂಗಳೂರಿನ ಎರಡು ಮನೆ ಹಾಗೂ ಶಿರಾದಲ್ಲಿನ ಕಚೇರಿಯಲ್ಲಿ ತಲಾ ೧೦ಕ್ಕೂ ಅಧಿಕ ಮಂದಿ ಲೋಕಾಯುಕ್ತ ಪೊಲೀಸರ ತಂಡ ಪರಿಶೀಲನೆ ನಡೆಸಿದೆ.
ಬಿ.ಟಿ.ರಂಗಸ್ವಾಮಿ ಈ ಹಿಂದೆ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ, ತುಮಕೂರು ಸ್ಮಾರ್ಟ್ ಸಿಟಿ ಪ್ರಾಜೆಕ್ಟ್ ಎಂಡಿಯಾಗಿ ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಯೋಜನಾ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಕಳೆದ ಎರಡು ವರ್ಷಗಳ ಹಿಂದಷ್ಟೇ ಶಿರಾ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ವರ್ಗಾವಣೆಯಾಗಿದ್ದರು. ಬೆಳಗ್ಗೆ 7.30ಕ್ಕೆ ಪರಿಶೀಲನೆ ಆರಂಭಿಸಿದ ಲೋಕಾಯುಕ್ತ ಪೊಲೀಸರು ಸಂಜೆವರೆಗೆ ಪರಿಶೀಲನೆ ನಡೆಸಿದ್ದಾರೆ.
ತುಮಕೂರು ಜಿಲ್ಲೆ ಶಿರಾ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಬಿ.ಟಿ.ರಂಗಸ್ವಾಮಿ ಆಸ್ತಿ ವಿವರದ ಪ್ರಕಟಣೆ ಹೊರಡಿಸಿದ ತುಮಕೂರು ಲೋಕಾಯುಕ್ತ ಅಧಿಕಾರಿಗಳು
5 ಸ್ಥಳಗಳಲ್ಲಿ ಶೋಧನೆ:
ಶಿರಾ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಬಿ.ಟಿ.ರಂಗಸ್ವಾಮಿ (ಶಿರಾ, ತುಮಕೂರು ಜಿಲ್ಲೆ) ಅವರು ತಮ್ಮ ಆದಾಯದ ಮೂಲಕ್ಕಿಂತ ಹೆಚ್ಚಿನ ಅಕ್ರಮ ಆಸ್ತಿ ಹೊಂದಿರುವ ಆರೋಪದ ಮೇರೆಗೆ ತುಮಕೂರು ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಅವರಿಗೆ ಸಂಬಂಧಿಸಿದ ಒಟ್ಟು 05 ಸ್ಥಳಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.
ಶೋಧನೆ ನಡೆಸಲಾದ ಸ್ಥಳಗಳು:
1. ಶ್ರೀ ಬಿ.ಟಿ.ರಂಗಸ್ವಾಮಿ ಅವರು ವಾಸವಿರುವ ತುಮಕೂರು ನಗರದ ಗೆದ್ದಲಹಳ್ಳಿ ಬಡಾವಣೆಯಲ್ಲಿರುವ ವಾಸದ ಮನೆ.
2. ಬೆಂಗಳೂರಿನ ಮಾದಾವರ ಬಳಿಯ ಅಂಚೆ ಪಾಳ್ಯದಲ್ಲಿ ಪತ್ನಿ ಹೆಸರಿನಲ್ಲಿರುವ ಮನೆ.
3. ಸ್ವಂತ ಊರಾದ ಚಳ್ಳಕೆರೆ ತಾಲ್ಲೂಕಿನ ಜಡೆಕುಂಟೆ ಗ್ರಾಮದಲ್ಲಿರುವ ಮನೆ.
4. ಪತ್ನಿಯ ತಂದೆಯವರು ವಾಸವಿರುವ ಹಿರಿಯೂರು ತಾಲ್ಲೂಕಿನ ಚಿಲ್ಲಹಳ್ಳಿ ಗ್ರಾಮದಲ್ಲಿರುವ ಮನೆ.
5. ಶ್ರೀ ಬಿ.ಟಿ.ರಂಗಸ್ವಾಮಿ ಅವರು ಕರ್ತವ್ಯ ನಿರ್ವಹಿಸುವ ಶಿರಾ ನಗರಾಭಿವೃದ್ಧಿ ಪ್ರಾಧಿಕಾರದ ಕಛೇರಿ.
ಪತ್ತೆಯಾದ ಆಸ್ತಿ ಮತ್ತು ಸ್ವತ್ತುಗಳ ವಿವರ:
ಸಿರಾಸ್ತಿ: ತುಮಕೂರು ಮತ್ತು ಬೆಂಗಳೂರಿನಲ್ಲಿ ತಲಾ ಒಂದೊಂದು ಮನೆ ಹಾಗೂ ಸ್ವಂತ ಊರಿನಲ್ಲಿ ಕೃಷಿ ಜಮೀನು ಹೊಂದಿರುವುದು ಕಂಡು ಬಂದಿರುತ್ತದೆ.
ಚಿನ್ನ ಮತ್ತು ಬೆಳ್ಳಿ ಆಭರಣಗಳು: ಒಟ್ಟು 240 ಗ್ರಾಂ ಚಿನ್ನದ ಒಡವೆಗಳು ಹಾಗೂ 1 ಕೆ.ಜಿ 629 ಗ್ರಾಂ ಬೆಳ್ಳಿ ಒಡವೆಗಳು ಪತ್ತೆಯಾಗಿವೆ.
ವಾಹನಗಳು: 03 ಕಾರುಗಳು ಹಾಗೂ 02 ಬೈಕ್‌ಗಳು ಪತ್ತೆಯಾಗಿವೆ.
ಪ್ರಾಥಮಿಕ ಪರಿಶೀಲನೆಯ ಪ್ರಕಾರ, ಶ್ರೀ ಬಿ.ಟಿ.ರಂಗಸ್ವಾಮಿ ಅವರು ತಮ್ಮ ಆದಾಯಕ್ಕಿಂತ ರೂ. 2.20 ಕೋಟಿ ರೂ. (ಎರಡು ಕೋಟಿ, ಇಪ್ಪತ್ತು ಲಕ್ಷ ರೂಪಾಯಿ) ಅಕ್ರಮ ಆಸ್ತಿಗಳನ್ನು ಹೊಂದಿರುವುದು ಕಂಡು ಬಂದಿದ್ದು. ಮುಂದಿನ ಶೋಧನಾ ಕಾರ್ಯ ಹಾಗೂ ತನಿಖೆ ಮುಂದುವರಿದಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
