ಕುಂಚಿಟಿಗ ಪದವೀಧರರು ಎನ್ಡಿಎ ಅಭ್ಯರ್ಥಿ ಕೆ.ಎಂ.ಸುರೇಶ್ ಅವರನ್ನು ಬೆಂಬಲಿಸಲು ಚಿದಾನಂದಗೌಡ ಮನವಿ
tumkurnews.in
ತುಮಕೂರು: ಆಗ್ನೇಯ ಪದವಿಧರರ ಕ್ಷೇತ್ರ ಹಾಲಿ ಶಾಸಕರಾದ ಚಿದಾನಂದ.ಎಂ.ಗೌಡ ಅವರು ಎನ್.ಡಿ.ಎ ಅಭ್ಯರ್ಥಿ ಕೆ.ಎಂ.ಸುರೇಶ್ ಅವರ ಪರವಾಗಿ ಇಂದು ನಗರದ ಕುಂಚಿಟಿಗ ಭವನದಲ್ಲಿ ಸಮುದಾಯದ ಮುಖಂಡರ ಜೊತೆಗೆ ಸಭೆ ನಡೆಸಿದರು.
ಕುಂಚಿಟಿಗ ಭವನದಲ್ಲಿ ಜಿಲ್ಲಾ ಕುಂಚಿಟಿಗರ ಸಂಘದ ಜಿಲ್ಲಾಧ್ಯಕ್ಷರಾದ ನೇತಾಜಿ ಶ್ರೀಧರ್ ಅವರ ಸಮ್ಮುಖದಲ್ಲಿ ಸಮುದಾಯದ ಹಿರಿಯರು, ಪದವಿಧರರ ಜೊತೆ ಸಭೆ ನಡೆಸಿದ ಚಿದಾನಂದ ಎಂ.ಗೌಡ ಅವರು, ಎನ್.ಡಿ.ಎ ಅಭ್ಯರ್ಥಿಯಾಗಿರುವ ಕೆ.ಎಂ.ಸುರೇಶ ಅವರಿಗೆ ಮತ ನೀಡುವಂತೆ ಹಾಗು ಮುಖಂಡರು ತಮಗೆ ಗುರುತು ಪರಿಚಯ ಇರುವ ಪದವಿಧರರಿಗೆ ಎನ್.ಡಿ.ಎ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಶಿಫಾರಸ್ಸು ಮಾಡುವಂತೆ ಮನವಿ ಮಾಡಿದರು.
ಕಳೆದ ಆರು ವರ್ಷಗಳಿಂದ ನಾನು ಈ ಕ್ಷೇತ್ರವನ್ನು ಪ್ರತಿನಿಧಿಸಿ, ಪದವಿಧರರ ಕಷ್ಟ ಸುಖಃಗಳನ್ನು ಆಲಿಸಿ, ಅವರ ಸಮಸ್ಯೆಗಳಿಗೆ ಸಾಧ್ಯವಾದಷ್ಟು ಮಟ್ಟಿಗೆ ಸ್ಪಂದಿಸಿ ಕೆಲಸ ಮಾಡಿದ್ದೇನೆ. ಐದು ಜಿಲ್ಲೆ, ೩೬ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ೩೩ ತಾಲೂಕುಗಳನ್ನು ಒಳಗೊಂಡ ದೊಡ್ಡ ಕ್ಷೇತ್ರ, ನಾವು ಚುನಾವಣೆ ಎದುರಿಸುವ ಸಂದರ್ಭದಲ್ಲಿ ಒಂದು ಲಕ್ಷ ಮತದಾರರಿದ್ದರು. ಈಗ ಅದು ೧.೯೦ ಲಕ್ಷಕ್ಕೆ ಜಿಗಿದಿದೆ.ಹೆಚ್ಚು ಹೊಸ ಮತದಾರರು ನೊಂದಣಿಯಾಗಿದ್ದಾರೆ. ಕೇಂದ್ರದ ಸರಕಾರ ಹೊಸ ಶಿಕ್ಷಣ ನೀತಿ-೨೦೨೦ರ ಮೂಲಕ ಯುವಜನರನ್ನು ಕೇವಲ ಶಿಕ್ಷಣವಂತರನ್ನಾಗಿ ಮಾತ್ರ ಮಾಡದೆ, ಕೌಶಲ್ಯ ಭರಿತ ವಿದ್ಯಾವಂತರನ್ನು ರೂಪಿಸಲು ಮುಂದಾಗಿದೆ. ಸಾಕಷ್ಟು ಉದ್ಯೋಗವಕಾಶಗಳನ್ನು ಕಲ್ಪಿಸಿದೆ. ಯುವಜನರಿಗೆ ಹೆಚ್ಚಿನ ಅದ್ಯತೆಯನ್ನು ನೀಡಿ, ಯೋಜನೆಗಳನ್ನು ರೂಪಿಸಲಾಗುತ್ತಿದೆ. ಹಾಗಾಗಿ ಎನ್.ಡಿ.ಎ ಅಭ್ಯರ್ಥಿಯಾದ ಕೆ.ಎಂ.ಸುರೇಶ ಅವರನ್ನು ಗೆಲ್ಲಿಸುವುದರಿಂದ ಹೆಚ್ಚಿನ ಅನುಕೂಲ ಕ್ಷೇತ್ರದ ಜನರಿಗೆ ಆಗಲಿದೆ ಎಂದು ಚಿದಾನಂದಗೌಡ ತಿಳಿಸಿದರು.
ಎನ್.ಡಿ.ಎ ಅಭ್ಯರ್ಥಿ ಕೆ.ಎಂ.ಸುರೇಶ್ ಅವರು ಎನ್.ಡಿ.ಎ ಭಾಗವಾಗಿರುವ ಬಿಜೆಪಿ, ಜೆಡಿಎಸ್ನ ಒಮ್ಮತದ ಅಭ್ಯರ್ಥಿಯಾಗಿದ್ದಾರೆ. ಹಾಗಾಗಿ ಈ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಎಲ್ಲಾ ಎಂ.ಎಲ್.ಸಿಗಳು ಕೆ.ಎಂ.ಸುರೇಶ್ ಅವರ ಗೆಲುವಿಗೆ ಒಗ್ಗೂಡಿ ಕೆಲಸ ಮಾಡುತ್ತಿದ್ದೇವೆ. ನಮ್ಮೊಂದಿಗೆ ಈ ಕ್ಷೇತ್ರದಲ್ಲಿರುವ ಎನ್.ಡಿ.ಎ ಮೈತ್ರಿಕೂಟದ ಹಾಲಿ, ಮಾಜಿ ಎಂ.ಎಲ್.ಎ.ಗಳು ಬಿ.ವೈ.ವಿಜಯೇಂದ್ರ ಮತ್ತು ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಕುಂಚಿಟಿಗ ಸಮುದಾಯದ ಎಲ್ಲಾ ಪದವಿಧರ ಮತದಾರರು ಕೆ.ಎಂ.ಸುರೇಶ್ ಅವರಿಗೆ ಮತ ನೀಡುವಂತೆ ಮಾಡಬೇಕೆಂದು ಕುಂಚಿಟಿಗ ಮುಖಂಡರಲ್ಲಿ ಚಿದಾನಂದಗೌಡ ಮನವಿ ಮಾಡಿದರು.
ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ, ೨೦೨೦ರಿಂದಲೂ ಈ ಕ್ಷೇತ್ರವನ್ನು ಚಿದಾನಂದ.ಎಂ.ಗೌಡ ಅವರು ಪ್ರತಿನಿಧಿಸಿ ಕೆಲಸ ಮಾಡಿದ್ದಾರೆ. ಸರಳ, ಸಜ್ಜನರು, ಮಿತಭಾಷಿಗಳು, ಸೌಮ್ಯ ಸ್ವಭಾವದಿಂದಲೇ ಎಲ್ಲರ ಮನ ಗೆದ್ದಿದ್ದಾರೆ. ಸಮುದಾಯಕ್ಕೆ ಸಾಕಷ್ಟು ಸೇವೆ ಮಾಡಿದ್ದಾರೆ. ನಾನು ಸಹ ನನ್ನ ಕೈಲಾದ ಸಹಾಯ, ಸಹಕಾರವನ್ನು ಕುಂಚಿಟಿಗ ಸಮುದಾಯಕ್ಕೆ ನೀಡಿದ್ದೇನೆ. ಆಗ್ನೇಯ ಪದವಿಧರರ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿಯಾಗಿರುವ ಕೆ.ಎಂ.ಸುರೇಶ್ ಎನ್.ಡಿ.ಎ ಮೈತ್ರಿಕೂಟದ ಒಮ್ಮತದ ಅಭ್ಯರ್ಥಿಯಾಗಿದ್ದಾರೆ. ಹಾಗಾಗಿ ಅವರನ್ನು ಬೆಂಬಲಿಸುವಂತೆ ತಮ್ಮಲ್ಲಿ ಮನವಿ ಮಾಡುವುದಾಗಿ ತಿಳಿಸಿದರು.
ಮುಖಂಡರಾದ ಮಾದೇನಹಳ್ಳಿ ರಂಗನಾಥ್ ಮಾತನಾಡಿ, ಕುಂಚಿಟಿಗ ಸಮುದಾಯದ ಚಿದಾನಂದ ಎಂ.ಗೌಡ ಅವರು ೨೦೨೦ರಲ್ಲಿ ಚುನಾವಣೆಗೆ ಸ್ಪರ್ಧಿಸಿದಂತಹ ಸಂದರ್ಭದಲ್ಲಿ ಶಕ್ತಿ ಮೀರಿ ಕೆಲಸ ಮಾಡಿ ಅವರ ಗೆಲುವಿಗೆ ಶ್ರಮಿಸಿದ್ದೀರಿ, ಅದೇ ರೀತಿ ಎನ್.ಡಿ.ಎ ಅಭ್ಯರ್ಥಿಯಾಗಿರುವ ಕೆ.ಎಂ.ಸುರೇಶ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಈ ವೇಳೆ ಜಿಲ್ಲಾ ಕುಂಚಿಟಿಗ ಸಂಘದ ಜಿಲ್ಲಾಧ್ಯಕ್ಷರಾದ ನೇತಾಜಿ ಶ್ರೀಧರ್, ಮುಖಂಡರಾದ ಮಂಜುನಾಥ್, ವೀರನಾಗಪ್ಪ, ಬಿ.ವಿ.ಶಿವರಾಜು, ಜಗದೀಶ್ಗೌಡ, ಎಸ್.ವಿ.ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.
