ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿ ತತ್ವ ದಾರಿದೀಪ
ಸಹಕಾರ ಸಪ್ತಾಹದ ಸಮಾರೋಪದಲ್ಲಿ ಶಾಸಕ ಜ್ಯೋತಿಗಣೇಶ್ ಅಭಿಮತ
Tumkurnews.in
ತುಮಕೂರು: ಸಹಕಾರ ತತ್ವವು ಕೇವಲ ಆರ್ಥಿಕ ಪ್ರಗತಿಗೆ ಮಾತ್ರ ಸೀಮಿತವಾಗಿಲ್ಲ, ಅದು ಸಮಾಜದ ಸರ್ವತೋಮುಖ ಅಭಿವೃದ್ಧಿಯ ದಾರಿದೀಪವಾಗಿದೆ. ಇಂದಿನ ಜಾಗತಿಕ ಸವಾಲುಗಳಾದ ಪರಿಸರ ಮಾಲಿನ್ಯವನ್ನು ತಡೆಗಟ್ಟಿ ಪ್ರಕೃತಿಯನ್ನು ಉಳಿಸುವುದು, ಸಮಾಜದ ಪ್ರತಿಯೊಂದು ಹಂತದಲ್ಲೂ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನೀಡಿ ಲಿಂಗ ಸಮಾನತೆಯನ್ನು ಸಾಧಿಸುವುದು ಹಾಗೂ ಪರಸ್ಪರ ಸಹಬಾಳ್ವೆಯ ಮೂಲಕ ವಿಶ್ವಶಾಂತಿಯನ್ನು ನೆಲೆಗೊಳಿಸುವುದರಲ್ಲಿ ಸಹಕಾರ ಸಂಘಗಳ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಹೇಳಿದರು.
ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಸ್ವಾಮಿ ವಿವೇಕಾನಂದ ಸಹಕಾರ ಸಂಘ ಹಾಗೂ ವಿವಿಧ ಸಹಕಾರ ಸಂಘಗಳ ಆಶ್ರಯದಲ್ಲಿ ಶುಕ್ರವಾರ ನಗರದ ಸ್ವಾಮಿ ವಿವೇಕಾನಂದ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ 73ನೇ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಇದೇ ವೇಳೆ ಶಾಸಕರು ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪರಿಸರ ಸಂರಕ್ಷಣೆ ಇಂದಿನ ಅನಿವಾರ್ಯ. ಪರಿಸರ ಇಲ್ಲವೆಂದರೆ ಭೂಮಿಯೇ ಇರುವುದಿಲ್ಲ. ಪರಿಸರದ ಸಮತೋಲನ ಕಾಪಾಡದಿದ್ದರೆ ಜೀವಸಂಕುಲಕ್ಕೆ ಉಳಿಗಾಲವಿಲ್ಲ. ಪರಿಸರ ಹಾಳಾಗದಂತೆ ಉಳಿಸಿ ಬೆಳೆಸಬೇಕು. ‘ಪರಿಸರ ಸಂರಕ್ಷಣೆ, ಲಿಂಗ ಸಮಾನತೆ ಮತ್ತು ವಿಶ್ವಶಾಂತಿಗಾಗಿ ಸಹಕಾರ ಸಂಸ್ಥೆಗಳು’ ಎಂಬ ಘೋಷವಾಕ್ಯದೊಂದಿಗೆ ಈ ವರ್ಷ ಸಹಕಾರ ಸಪ್ತಾಹ ಆಚರಿಸಲಾಗುತ್ತಿದೆ. ಪ್ರಸ್ತುತ ಎದುರಾಗಿರುವ ಈ ಸವಾಲುಗಳ ಬಗ್ಗೆ ಸಹಕಾರಿಗಳು ಜನರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.
ಶಾಂತಿಯ ವಾತಾವರಣವಿಲ್ಲದೆ ಇಂದು ಎಲ್ಲಾ ದೇಶಗಳು ಒಂದಲ್ಲೊಂದು ಸಮಸ್ಯೆ ಎದುರಿಸುತ್ತಿವೆ. ಮೂರನೇ ಮಹಾಯುದ್ಧದಂತಹ ವಾತಾವರಣ ಎಲ್ಲಾ ದೇಶಗಳಲ್ಲಿದೆ. ಯಾವುದೇ ಯುದ್ಧದಲ್ಲೂ ಗೆಲುವು ಇರುವುದಿಲ್ಲ. ಸೋತವರು, ಸತ್ತವರು ಮಾತ್ರ ಉಳಿಯುತ್ತಾರೆ. ಆದ್ದರಿಂದ ವಿಶ್ವಕ್ಕೆ ಶಾಂತಿ ಬರಬೇಕು ಎನ್ನುವುದೇ ಸಹಕಾರ ಸಂಸ್ಥೆಗಳ ಧ್ಯೇಯ. ಲಿಂಗ ಸಮಾನತೆ ಬರಬೇಕು. ಮಹಿಳೆಯರಿಗೆ ಮತದಾನದ ಹಕ್ಕು ತಡವಾಗಿ ಸಿಕ್ಕಿದೆ. ಎಲ್ಲಾ ಕಡೆಗಳಲ್ಲೂ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕು. ತುಮಕೂರು ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಬೃಹದಾಕಾರವಾಗಿ ಬೆಳೆಯುತ್ತಿದೆ. ಎಲ್ಲಾ ಸಮಾಜದವರೂ ಸಹಕಾರ ಸಂಘಗಳನ್ನು ಸ್ಥಾಪಿಸಿದ್ದಾರೆ. ಸಹಕಾರ ಕ್ಷೇತ್ರದ ಪಿತಾಮಹ ಕೆ.ಎನ್. ರಾಜಣ್ಣ ಅವರ ಮಾರ್ಗದರ್ಶನದಲ್ಲಿ ಇದೆಲ್ಲ ಸಾಧ್ಯವಾಗಿದೆ ಎಂದು ಶಾಸಕ ಜ್ಯೋತಿಗಣೇಶ್ ಹೇಳಿದರು.
ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜಿ. ವೆಂಕಟೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರ ಸಂಸ್ಥೆಗಳು ಲಾಭ ಮಾಡುವುದು ಒಂದು ಭಾಗವಾದರೆ ಸಮಾಜಕ್ಕೆ ಏನು ಕೊಡಬೇಕು, ಜನರಿಗೆ ಯಾವ ರೀತಿಯ ಸಹಾಯ ಮಾಡಬೇಕು ಎಂಬ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು. ಇಂದು ಸಹಕಾರ ಕ್ಷೇತ್ರ ವ್ಯಾಪಕವಾಗಿ ಬೆಳೆಯುತ್ತಿದೆ. ವಿಶೇಷವಾಗಿ ಯುವಜನರು ಸಹಕಾರ ಆಂದೋಲನದಲ್ಲಿ ಭಾಗಿಯಾಗಬೇಕು ಎಂದು ತಿಳಿಸಿದರು.
ಖಾಸಗಿಯವರ ದುಬಾರಿ ಬಡ್ಡಿಯ ಸಾಲದ ಶೋಷಣೆಯಿಂದ ಮುಕ್ತರಾಗಲು ಸಹಕಾರ ಸಂಘಗಳ ಸಾಲ ವ್ಯವಸ್ಥೆ ಅನುಕೂಲಕರವಾಗಿದೆ. ಜಿಲ್ಲೆಯಲ್ಲಿ 1500ಕ್ಕೂ ಹೆಚ್ಚು ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. 300ಕ್ಕೂ ಹೆಚ್ಚು ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ನಿತ್ಯ ಸುಮಾರು 11 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಇದರಿಂದ ರೈತರ ಆರ್ಥಿಕ ಚಟುವಟಿಕೆ ಹೆಚ್ಚಾಗಿ ಕುಟುಂಬ ನಿರ್ವಹಣೆ ಸುಲಭವಾಗುತ್ತಿದ್ದು, ಅವರಿಗೆ ಸಹಾಯವಾಗುತ್ತಿದೆ ಎಂದು ವೆಂಕಟೇಗೌಡರು ಹೇಳಿದರು.
ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರೂ ಆದ ಸ್ವಾಮಿ ವಿವೇಕಾನಂದ ಸಹಕಾರ ಸಂಘದ ಅಧ್ಯಕ್ಷ ಪಿ. ಮೂರ್ತಿ ಮಾತನಾಡಿ, ಇಂದು ನಾವು 73ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ‘ಪರಿಸರ ಸಂರಕ್ಷಣೆ, ಲಿಂಗ ಸಮಾನತೆ ಮತ್ತು ವಿಶ್ವಶಾಂತಿಗಾಗಿ ಸಹಕಾರ ಸಂಸ್ಥೆಗಳು’ ಎಂಬ ಧ್ಯೇಯವಾಕ್ಯದೊಂದಿಗೆ ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇವೆ ಎಂದರು.
ಈ ಮಹತ್ವದ ಉದ್ದೇಶವನ್ನು ಸಾಕಾರಗೊಳಿಸಲು ಮತ್ತು ಸಹಕಾರ ಚಳವಳಿಯನ್ನು ಮತ್ತಷ್ಟು ಬಲಪಡಿಸಲು ಸಹಕಾರ ಸಂಸ್ಥೆಗಳು ಶ್ರಮಿಸಬೇಕು. ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆಯ ಸಹಕಾರದಲ್ಲಿ ಎಲ್ಲಾ ಸಹಕಾರ ಸಂಘ-ಸಂಸ್ಥೆಗಳು ಈ ಆಶಯವನ್ನು ಸಾಕಾರಗೊಳಿಸಬೇಕು ಎಂದು ಕೋರಿದರು.
ನಗರಪಾಲಿಕೆ ಮಾಜಿ ಮೇಯರ್ ಬಿ.ಜಿ. ಕೃಷ್ಣಪ್ಪ ಮಾತನಾಡಿ, ಸಹಕಾರ ಆಂದೋಲನದಿಂದ ಹಲವಾರು ಜನರಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡುವ ಅವಕಾಶವಿರುತ್ತದೆ. ಸಹಕಾರ ಕ್ಷೇತ್ರದ ಹಿನ್ನೆಲೆಯಲ್ಲಿರುವವರಿಗೆ ರಾಜಕೀಯ ಶಕ್ತಿಯೂ ಬೆಳೆಯುತ್ತದೆ ಎಂದು ಹೇಳಿದರು.
ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಬಿ.ಸಿ. ಉಮೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಹನುಮಾನ್, ಸ್ವಾಮಿ ವಿವೇಕಾನಂದ ಸಹಕಾರ ಸಂಘದ ಉಪಾಧ್ಯಕ್ಷ ಬಿ.ಎಚ್. ನಂಜುಂಡಯ್ಯ, ನಿರ್ದೇಶಕರಾದ ಕೆ.ಎನ್. ಸರೋಜರಾಜು, ಪಿ. ನಾಗರಾಜು, ಸಿ. ರವಿಶಂಕರ್, ಎಚ್.ಎಸ್. ರಾಮಚಂದ್ರಪ್ಪ, ಎಸ್. ಶ್ರೀಹರ್ಷ, ಬಿ.ಎಸ್. ಹನುಮಂತರಾಯಪ್ಪ, ಎನ್. ನರಸಿಂಹರಾಜು, ಜೆ. ಸುಜಾತ, ಎಂ.ಎಸ್. ಕಾಂತರಾಜು, ಕೆ. ನಟರಾಜ್, ಡಿ. ಕಿರಣ್ ಕುಮಾರ್, ಬಿ.ಎನ್. ನಾಗರಾಜು, ಟಿ.ಸಿ. ಸುರೇಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಗಂಗಾಧರ್, ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ್ ಹಿರೇಮಠ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. ಈ ವೇಳೆ ಹಿರಿಯ ಸಹಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
