‘ಟೀಕೆ, ನಿಂದನೆ ನಿಲ್ಲಿಸಿ ನಾಡಿನ ಅಭಿವೃದ್ಧಿ ಕಡೆಗೆ ಗಮನಹರಿಸಿ’
Tumkurnews.in
ಸಿಎಂ ಡಿ.ಕೆ.ಶಿ., ಕೇಂದ್ರ ಸಚಿವ ಎಚ್ಡಿಕೆಗೆ ಜಿಲ್ಲಾ ಒಕ್ಕಲಿಗರ ಸಂಘ ಮನವಿ
ತುಮಕೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರು ನಾಡಿನ ಪ್ರತಿಷ್ಠಿತ ನಾಯಕರು. ಇಬ್ಬರೂ ನಾಯಕರಿಗೆ ರಾಜ್ಯಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳು ಹಾಗೂ ಬೆಂಬಲಿಗರಿದ್ದಾರೆ. ಒಕ್ಕಲಿಗ ಸಮುದಾಯದ ಈ ಇಬ್ಬರು ನಾಯಕರು ಪರಸ್ಪರ ಟೀಕೆ ಮಾಡಿಕೊಳ್ಳುವುದನ್ನು ನಿಲ್ಲಿಸಿ ರಾಜ್ಯದ ಅಭಿವೃದ್ಧಿಯ ಕಡೆಗೆ ಗಮನಹರಿಸಬೇಕು ಎಂದು ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಕೆ.ಬಿ. ಬೋರೇಗೌಡ ಮನವಿ ಮಾಡಿದರು.
ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರು ನಮ್ಮ ಸಮುದಾಯದವರು ಎಂಬುದು ನಮಗೆ ಹೆಮ್ಮೆಯ ವಿಚಾರ. ಆದರೆ, ಈ ಇಬ್ಬರು ನಾಯಕರು ಇತ್ತೀಚೆಗೆ ಪ್ರತಿನಿತ್ಯ ಪರಸ್ಪರ ಟೀಕೆ, ನಿಂದನೆ ಮಾಡಿಕೊಳ್ಳುತ್ತಿರುವುದು ಒಕ್ಕಲಿಗ ಸಮಾಜಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ತೀವ್ರ ನೋವು ತಂದಿದೆ. ಅವರ ಪಕ್ಷಗಳ ಕಾರ್ಯಕರ್ತರು ಹಾಗೂ ಒಕ್ಕಲಿಗ ಸಮಾಜದ ಬಾಂಧವರು ಮುಜುಗರಪಡುವಂತಾಗಿದೆ ಎಂದು ಹೇಳಿದರು.
ಈ ಇಬ್ಬರು ನಾಯಕರ ದಿನನಿತ್ಯದ ಜಗಳದಿಂದ ಒಕ್ಕಲಿಗ ಸಮಾಜದಲ್ಲಿ ಒಡಕು ಉಂಟಾಗುವ, ಸಮುದಾಯದಲ್ಲಿ ಗುಂಪುಗಾರಿಕೆ ಆರಂಭವಾಗಿ ಸಮಾಜದ ಐಕ್ಯತೆಗೆ ಧಕ್ಕೆಯಾಗುವ ಅಪಾಯವೂ ಎದುರಾಗಿದೆ ಎಂಬ ಆತಂಕ ವ್ಯಕ್ತವಾಗಿದೆ ಎಂದರು.
ಎಚ್.ಡಿ. ಕುಮಾರಸ್ವಾಮಿಯವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿದ್ದಾರೆ. ಈಗ ನಮ್ಮದೇ ಸಮುದಾಯದ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿದೆ. ಅವರ ನೇತೃತ್ವದ ಸರ್ಕಾರ ನೂರು ದಿನ ಪೂರೈಸಿದ್ದು, ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ಆದರೆ, ಈ ಇಬ್ಬರು ನಾಯಕರು ಪ್ರತಿದಿನ ಒಬ್ಬರಿಗೊಬ್ಬರು ಟೀಕೆ ಮಾಡಿಕೊಳ್ಳುತ್ತಾ ಪರಸ್ಪರ ತೇಜೋವಧೆ ಮಾಡಿಕೊಳ್ಳುತ್ತಿರುವುದನ್ನು ಒಕ್ಕಲಿಗ ಸಮಾಜ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಇದನ್ನು ಸಮುದಾಯದ ‘ಸೋದರ ಕಲಹ’ ಎಂದು ಲಘುವಾಗಿ ಪರಿಗಣಿಸುವಂತಿಲ್ಲ. ಈ ನಾಯಕರ ಕಿತ್ತಾಟದಿಂದ ಒಕ್ಕಲಿಗ ಸಮಾಜವೂ ನಿತ್ಯ ಮುಜುಗರ ಅನುಭವಿಸುವಂತಾಗಿದೆ ಎಂಬುದನ್ನು ಇವರು ಅರಿತುಕೊಳ್ಳಬೇಕು ಎಂದು ಬೋರೇಗೌಡರು ತಿಳಿಸಿದರು.
ಕುಮಾರಸ್ವಾಮಿಯವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಟೀಕೆ ಮಾಡುವುದನ್ನು ಬಿಟ್ಟು ರಾಜ್ಯದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅವಕಾಶ ನೀಡಬೇಕು. ಅಭಿವೃದ್ಧಿಪರ ಆಡಳಿತ ನಡೆಸಲು ಡಿ.ಕೆ. ಶಿವಕುಮಾರ್ ಅವರಿಗೆ ಸಲಹೆ ಹಾಗೂ ಸಹಕಾರ ನೀಡಬೇಕು ಎಂದರು.
ಹಾಗೆಯೇ, ಕೇಂದ್ರ ಕೈಗಾರಿಕಾ ಸಚಿವರಾಗಿರುವ ಕುಮಾರಸ್ವಾಮಿಯವರು ಕೇಂದ್ರದಿಂದ ಹೆಚ್ಚಿನ ಅನುದಾನ ತಂದು ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಪ್ರಯತ್ನಿಸಬೇಕು. ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಿ, ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶ ದೊರಕಿಸುವ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ಹೇಳಿದರು.
ಈ ಇಬ್ಬರೂ ನಾಯಕರು ಅನ್ನ ನೀಡುವ ರೈತ ಸಮುದಾಯದಿಂದ ಬಂದವರು. ರಾಜ್ಯದಲ್ಲಿ ತೀವ್ರ ಬರದಿಂದ ರೈತರು ಸಂಕಷ್ಟದಲ್ಲಿದ್ದಾರೆ. ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಈ ಇಬ್ಬರು ನಾಯಕರು ಒಂದಾಗಿ ಗಮನಹರಿಸಬೇಕು. ಈ ಮೂಲಕ ತಾವು ಕೃಷಿಕ ಒಕ್ಕಲಿಗ ಸಮುದಾಯದ ನಾಯಕರು ಎಂಬುದನ್ನು ಸಾಬೀತುಪಡಿಸಬೇಕು ಎಂದರು.
ಜನರ ಪರವಾಗಿ ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಕೆಲಸ ಮಾಡಿ ಯಾರು ಜನರ ವಿಶ್ವಾಸ ಗಳಿಸುತ್ತಾರೋ, ಅವರಿಗೆ ಜನರ ಆಶೀರ್ವಾದ ದೊರೆಯಲಿದೆ. ಇನ್ನಾದರೂ ಡಿ.ಕೆ. ಶಿವಕುಮಾರ್ ಹಾಗೂ ಎಚ್.ಡಿ. ಕುಮಾರಸ್ವಾಮಿಯವರು ಪರಸ್ಪರ ಟೀಕೆ ಹಾಗೂ ಆರೋಪ ಮಾಡುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರು.
ನಮ್ಮ ಸಮಾಜದ ಗುರುಗಳು ಈ ಇಬ್ಬರು ನಾಯಕರ ನಡುವೆ ಪ್ರವೇಶಿಸಿ, ಅವರ ಮನಸ್ತಾಪ ನಿವಾರಣೆಗೆ ಸಲಹೆ ನೀಡಬೇಕು ಎಂದು ತುಮಕೂರು ಜಿಲ್ಲಾ ಒಕ್ಕಲಿಗರ ಸಂಘದ ಪರವಾಗಿ ಬೋರೇಗೌಡರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕರಾದ ಸಿದ್ಧಲಿಂಗೇಗೌಡ, ಕೇಶವಮೂರ್ತಿ, ಬಿ.ಸಿ. ರಂಗಪ್ಪ ಹಾಗೂ ನಂಜಪ್ಪ ಹಾಜರಿದ್ದರು.
