ಸಂಪಾದಕ ಮಂಜುನಾಥ್ ಗೌಡರಿಗೆ ನೀಡಿದ ಪೊಲೀಸ್ ನೋಟಿಸ್ ಹಿಂಪಡೆಯಲು ಮನವಿ
Tumkurnews.in
ತುಮಕೂರು: ನಗರದ ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತಕ್ಕೆ ‘ತುಮಕೂರು ಸ್ಕ್ವೇರ್’ ಎಂದು ಹೆಸರು ಬದಲಾಯಿಸುವ ಜಿಲ್ಲಾಡಳಿತದ ನಿರ್ಧಾರದ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಪ್ರಕಟಿಸಿದ್ದ ಟಿಎಂ ಫಸ್ಟ್ ನ್ಯೂಸ್ ಡಿಜಿಟಲ್ ಮಾಧ್ಯಮದ ಸಂಪಾದಕ ಪಿ.ಎನ್. ಮಂಜುನಾಥ್ ಗೌಡ ಅವರಿಗೆ ಪೊಲೀಸ್ ಇಲಾಖೆ ನೋಟಿಸ್ ನೀಡಿರುವುದನ್ನು ವಿರೋಧಿಸಿ, ನೋಟಿಸ್ ಹಿಂಪಡೆಯುವಂತೆ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಅವರಿಗೆ ಮನವಿ ಸಲ್ಲಿಸಿದರು.
ಸಾರ್ವಜನಿಕ ವಿಚಾರಗಳ ಕುರಿತು ಜನಾಭಿಪ್ರಾಯ ಸಂಗ್ರಹಿಸುವುದು ಮಾಧ್ಯಮಗಳ ಪ್ರಮುಖ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಪತ್ರಕರ್ತ ಮಂಜುನಾಥ್ ಗೌಡ ಅವರಿಗೆ ನೀಡಿರುವ ನೋಟಿಸ್ ಕುರಿತು ಸಂಘಟನೆಗಳ ಪ್ರತಿನಿಧಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನ ಸೆಳೆದು, ನೋಟಿಸ್ ಹಿಂಪಡೆಯುವಂತೆ ಮನವಿ ಮಾಡಿದರು.
ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಪತ್ರಕರ್ತರು ಮತ್ತು ಪೊಲೀಸರು ಸಾರ್ವಜನಿಕವಾಗಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಇಂತಹ ಸನ್ನಿವೇಶಗಳು ಎದುರಾಗುತ್ತವೆ. ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ವಿಷಯದ ಕುರಿತು ಮಾಹಿತಿ ಪಡೆಯುವ ಉದ್ದೇಶದಿಂದ ನೋಟಿಸ್ ನೀಡಲಾಗಿದೆ. ಪ್ರಕರಣವನ್ನು ಹಿಂಪಡೆಯುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಎಸ್. ಕೃಷ್ಣಮೂರ್ತಿ, ಜಿಲ್ಲಾಧ್ಯಕ್ಷ ಸಿ. ಕರುಣಾಕರ್, ಜಂಟಿ ಕಾರ್ಯದರ್ಶಿ ಸಿ. ರಂಗನಾಥ್, ಜಿಲ್ಲಾ ಉಪಾಧ್ಯಕ್ಷ ಪಿ.ಎಸ್. ಮಲ್ಲಿಕಾರ್ಜುನಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎನ್. ಮಂಜುನಾಥ್ ಗೌಡ, ಸಂಘಟನಾ ಕಾರ್ಯದರ್ಶಿ ಸಿ.ಎನ್. ಮಹೇಶ್ ಕುಮಾರ್, ಕೆಯುಡಬ್ಲ್ಯುಜೆ ರಾಜ್ಯ ಸಮಿತಿ ಸದಸ್ಯ ಚಿ.ನಿ. ಪುರುಷೋತ್ತಮ್, ಜಿಲ್ಲಾಧ್ಯಕ್ಷ ಎಲ್. ಯೋಗೀಶ್, ಪ್ರಧಾನ ಕಾರ್ಯದರ್ಶಿ ಟಿ.ಇ. ರಘುರಾಮ್, ಉಪಾಧ್ಯಕ್ಷ ಜಯಣ್ಣ, ನಿರ್ದೇಶಕರಾದ ಜಗನ್ನಾಥ ಕಾಳೇನಹಳ್ಳಿ, ಜಯಣ್ಣ ಬೆಳೆಗೆರೆ, ಸುರೇಶ್ ವತ್ಸ, ಪತ್ರಕರ್ತರಾದ ಶ್ರೀಹರ್ಷ, ಕುಚ್ಚಂಗಿ ಪ್ರಸನ್ನ, ಎಸ್. ಹರೀಶ್ ಆಚಾರ್ಯ, ವಾಗೀಶ್, ಸಂತೋಷ್ ಎಂ.ಕೆ., ರಾಕೇಶ್ ಗುಳೇದ್, ಗಜೇಂದ್ರ, ಸಂತೋಷ್, ಸಿ.ಎಚ್. ರವಿಕುಮಾರ್, ಗೂಳೂರು ಸುರೇಶ್, ಸಿದ್ದರಾಮು ಹೆಬ್ಬಾಕ, ಪರಮೇಶ್ ಹಾಗೂ ಹರೀಶ್, ಮಂಜುನಾಥ ತಾಳಮಕ್ಕಿ ಸೇರಿದಂತೆ ಸಂಘಟನೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
