ಅಂತಿಮ ಮತದಾರರ ಪಟ್ಟಿ ಪ್ರಕಟ: ಜಿಲ್ಲೆಯಲ್ಲಿ 20.94 ಲಕ್ಷ ಮತದಾರರು
Tumkurnews.in
ತುಮಕೂರು : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026 (SIR-2026) ಪ್ರಕ್ರಿಯೆಯಡಿ ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 27ರಂದು ಪ್ರಕಟಿಸಲಾಗಿದೆ. ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 20,94,762 ಮತದಾರರಿದ್ದಾರೆ ಎಂದು ಅಪರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಸಿ ಮಾತನಾಡಿದ ಅವರು, ಅಂತಿಮ ಮತದಾರರ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಜಿಲ್ಲೆಯ ಎಲ್ಲ ತಾಲ್ಲೂಕು ಕಚೇರಿಗಳು, ಉಪವಿಭಾಗಾಧಿಕಾರಿಗಳ ಕಚೇರಿಗಳು, ಜಿಲ್ಲಾಧಿಕಾರಿಗಳ ಕಚೇರಿಯ ಎನ್ಐಸಿ ವೆಬ್ಸೈಟ್ ಹಾಗೂ ಮುಖ್ಯ ಚುನಾವಣಾಧಿಕಾರಿಗಳ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ ಎಂದು ತಿಳಿಸಿದರು.
ಅಂತಿಮ ಮತದಾರರ ಪಟ್ಟಿಯಲ್ಲಿ ಯಾವುದೇ ನ್ಯೂನತೆಗಳಿದ್ದರೆ, ಹೆಸರು ಬಿಟ್ಟುಹೋಗಿದ್ದರೆ ಅಥವಾ ತಿದ್ದುಪಡಿ ಅಗತ್ಯವಿದ್ದರೆ ನಿರಂತರ ಪರಿಷ್ಕರಣೆ ಪ್ರಕ್ರಿಯೆಯಡಿ ನಿಗದಿತ ನಮೂನೆ-6, 7 ಮತ್ತು 8ರಲ್ಲಿ ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.
ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯಲ್ಲಿ 10,36,724 ಪುರುಷರು, 10,57,981 ಮಹಿಳೆಯರು ಹಾಗೂ 57 ತೃತೀಯ ಲಿಂಗಿ ಮತದಾರರು ಸೇರಿದಂತೆ ಒಟ್ಟು 20,94,762 ಮತದಾರರಿದ್ದಾರೆ. 18ರಿಂದ 19 ವರ್ಷದೊಳಗಿನ 15,754 ಪುರುಷರು, 14,543 ಮಹಿಳೆಯರು ಹಾಗೂ ನಾಲ್ವರು ತೃತೀಯ ಲಿಂಗಿ ಮತದಾರರು ಸೇರಿದಂತೆ ಒಟ್ಟು 30,301 ಯುವ ಮತದಾರರು ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ ಎಂದು ತಿಳಿಸಿದರು.
ನಮೂನೆ-7ರ ಅಡಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 7,248 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಈ ಪೈಕಿ 162 ಮಂದಿ ಮೃತಪಟ್ಟಿದ್ದು, 25 ಮಂದಿ ಗೈರುಹಾಜರಾಗಿದ್ದಾರೆ. ಈಗಾಗಲೇ ನೋಂದಣಿಯಾಗಿದ್ದ 63 ಹೆಸರುಗಳು, ಸ್ಥಳಾಂತರಗೊಂಡ 4,777 ಮತದಾರರ ಹೆಸರುಗಳು ಹಾಗೂ ಇತರ ಕಾರಣಗಳಿಂದ 2,221 ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯ ಮುದ್ರಿತ ಹಾಗೂ ಡಿಜಿಟಲ್ ಪ್ರತಿಗಳನ್ನು ವಿತರಿಸಲಾಯಿತು.
ಸಾರ್ವಜನಿಕರು ಸಂಬಂಧಪಟ್ಟ ಮತಗಟ್ಟೆಗಳಲ್ಲಿ ಪ್ರಕಟಿಸಿರುವ ಅಂತಿಮ ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಳ್ಳಬೇಕು. ಪಟ್ಟಿಯಲ್ಲಿ ಯಾವುದೇ ನ್ಯೂನತೆಗಳು ಕಂಡುಬಂದಲ್ಲಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ಆನ್ಲೈನ್ ಮೂಲಕ ಮತದಾರರ ಸೇವಾ ಪೋರ್ಟಲ್ ಅಥವಾ ವೋಟರ್ ಹೆಲ್ಪ್ಲೈನ್ ಆ್ಯಪ್ (VHA) ಮೂಲಕ ಹಾಗೂ ಆಫ್ಲೈನ್ನಲ್ಲಿ ಸಂಬಂಧಪಟ್ಟ ಮತಗಟ್ಟೆ ಮಟ್ಟದ ಅಧಿಕಾರಿ (BLO)ಗಳಿಗೆ ಸಲ್ಲಿಸಲು ಅವಕಾಶವಿದೆ. ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಚುನಾವಣಾ ಶಾಖೆಯ ನಾಗಭೂಷಣ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
