ನಕಲಿ ಆಹಾರ, ಔಷಧಗಳ ವಿರುದ್ಧ ಜನಜಾಗೃತಿ ಅಭಿಯಾನ
Tumkurnews.in
ತುಮಕೂರು: ಹಾಲಪ್ಪ ಪ್ರತಿಷ್ಠಾನ ತುಮಕೂರು ವತಿಯಿಂದ ಭಾರತೀಯ ವೈದ್ಯಕೀಯ ಸಂಘ (ಐಎಂಎ), ಬೀದಿಬದಿ ವ್ಯಾಪಾರಿಗಳ ಸಂಘ, ಔಷಧ ವ್ಯಾಪಾರಿಗಳ ಸಂಘ ಹಾಗೂ ಇತರ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ನಕಲಿ ಮತ್ತು ಕಲಬೆರಕೆ ಆಹಾರ ಹಾಗೂ ಔಷಧಗಳ ಕುರಿತು ಜನಜಾಗೃತಿ ಅಭಿಯಾನವನ್ನು ನಗರದ ಐಎಂಎ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಅಭಿಯಾನದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ ಹಾಲಪ್ಪ, ಔಷಧ ಮತ್ತು ಆಹಾರಕ್ಕೆ ನೇರ ಸಂಬಂಧವಿದೆ. ಕಲಬೆರಕೆಯಿಲ್ಲದ, ರುಚಿಕರ ಹಾಗೂ ಶುಚಿಯಾದ ಆಹಾರ ಸೇವನೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಕಲಬೆರಕೆ ಅಥವಾ ಅಶುಚಿಯಾದ ಆಹಾರ ಸೇವನೆಯಿಂದ ಅನಾರೋಗ್ಯ ಉಂಟಾಗಿ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಕಳಪೆ ಗುಣಮಟ್ಟದ ಅಥವಾ ಕಲಬೆರಕೆ ಔಷಧಗಳಿಂದ ಮತ್ತಷ್ಟು ತೊಂದರೆ ಎದುರಾಗುವ ಸಾಧ್ಯತೆಯಿದೆ. ಹೀಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಅಭಿಯಾನ ಆಯೋಜಿಸಲಾಗಿದೆ ಎಂದರು.
ಔಷಧ ನಿಯಂತ್ರಣ ಮತ್ತು ಆಹಾರ ಸುರಕ್ಷತಾ ಇಲಾಖೆಗಳ ಅಧಿಕಾರಿಗಳ ಜತೆಗೆ ಅಕ್ಷರ ದಾಸೋಹ ಅಧಿಕಾರಿಗಳೂ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಅಭಿಯಾನವನ್ನು ತಾಲ್ಲೂಕು ಹಾಗೂ ಹೋಬಳಿ ಮಟ್ಟಕ್ಕೂ ವಿಸ್ತರಿಸುವ ಗುರಿಯಿದೆ. ಜನರಿಗೆ ಶುಚಿಯಾದ, ಗುಣಮಟ್ಟದ, ಕಲಬೆರಕೆಯಿಲ್ಲದ ಪೌಷ್ಟಿಕ ಆಹಾರ ಹಾಗೂ ಸುರಕ್ಷಿತ ಔಷಧಗಳು ದೊರೆಯಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಇದು ಯಾರ ವಿರುದ್ಧವೂ ನಡೆಸುತ್ತಿರುವ ಹೋರಾಟವಲ್ಲ; ಬದಲಿಗೆ ಜನರಲ್ಲಿ ಜಾಗೃತಿ ಮೂಡಿಸುವ ಅಭಿಯಾನವಾಗಿದೆ ಎಂದು ತಿಳಿಸಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸುಧಾಕರ್ ಮಾತನಾಡಿ, ಜಿಲ್ಲೆಯಲ್ಲಿ 10ರಿಂದ 1,500 ಮಕ್ಕಳಿರುವ ಶಾಲೆಗಳಲ್ಲಿ ಬೆಳಗ್ಗೆ ಕ್ಷೀರಭಾಗ್ಯ ಯೋಜನೆಯಡಿ ಹಾಲು, ಮಧ್ಯಾಹ್ನ ಬಿಸಿಯೂಟ ಹಾಗೂ ಗಣಿಬಾಧಿತ ಪ್ರದೇಶಗಳಲ್ಲಿ ಸಂಜೆ ದ್ವಿದಳ ಧಾನ್ಯಗಳಿಂದ ತಯಾರಿಸಿದ ಆಹಾರವನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಕೆಲವು ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ, ಉಳಿದಂತೆ ಸುರಕ್ಷಿತವಾಗಿ ಬಿಸಿಯೂಟ ವಿತರಿಸಲಾಗುತ್ತಿದೆ ಎಂದರು.
ಬಿಸಿಯೂಟ ತಯಾರಕರಲ್ಲಿ ಶೇ. 70ರಷ್ಟು ಸಿಬ್ಬಂದಿ ವಿದ್ಯಾವಂತರಾಗಿದ್ದು, ಶೇ. 30ರಷ್ಟು ಸಿಬ್ಬಂದಿ ಔಪಚಾರಿಕ ಶಿಕ್ಷಣ ಪಡೆದಿಲ್ಲ. ಆದರೂ ಆಹಾರ ತಯಾರಿಕೆ ಮತ್ತು ವಿತರಣೆಯಲ್ಲಿ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಮಕ್ಕಳಿಗೆ ಗುಣಮಟ್ಟದ ಪೌಷ್ಟಿಕ ಆಹಾರ ಒದಗಿಸಲು ಸಿಬ್ಬಂದಿಗೆ ಕಾಲಕಾಲಕ್ಕೆ ತರಬೇತಿ ನೀಡಲಾಗುತ್ತಿದೆ. ಇದರ ಜತೆಗೆ ಕೇಂದ್ರೀಕೃತ ಅಡುಗೆಮನೆ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಔಷಧ ನಿಯಂತ್ರಣಾಧಿಕಾರಿ ಚಂದ್ರಕಲಾ ಶಿಲ್ಪ ಮಾತನಾಡಿ, ಔಷಧಗಳ ಕಲಬೆರಕೆ ಮತ್ತು ಕಳಪೆ ಗುಣಮಟ್ಟದಿಂದ ಜನರು ಹಲವು ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಕಳಪೆ ಗುಣಮಟ್ಟದ ಔಷಧಗಳಿಂದ ಕಾಯಿಲೆ ಗುಣವಾಗುವುದು ವಿಳಂಬವಾಗಬಹುದು. ಕಲಬೆರಕೆ ಔಷಧಗಳಿಂದ ಅಡ್ಡಪರಿಣಾಮಗಳು ಉಂಟಾಗುವ ಸಾಧ್ಯತೆಯೂ ಇದೆ. ಆದ್ದರಿಂದ ಜನರು ಜಾಗೃತರಾಗಿರಬೇಕು ಎಂದರು.
ಅಧಿಕೃತ ಪೂರೈಕೆದಾರರಿಂದ ಬಂದ ಔಷಧಗಳನ್ನು ಮಾತ್ರ ಖರೀದಿಸಬೇಕು. ವೈದ್ಯರ ಸಲಹೆಯಂತೆ ಔಷಧಗಳನ್ನು ಬಳಸಬೇಕು. ಕಡಿಮೆ ಬೆಲೆ ಅಥವಾ ರಿಯಾಯಿತಿಯ ಆಮಿಷಕ್ಕೆ ಒಳಗಾಗಬಾರದು. ಸಾಧ್ಯವಾದಷ್ಟು ಆನ್ಲೈನ್ನಲ್ಲಿ ಔಷಧ ಖರೀದಿಸುವುದನ್ನು ತಪ್ಪಿಸಬೇಕು ಎಂದು ಸಲಹೆ ನೀಡಿದರು.
ಆಹಾರ ಸುರಕ್ಷತಾ ಅಧಿಕಾರಿ ಹರೀಶ್ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಸುಮಾರು 8,000ಕ್ಕೂ ಹೆಚ್ಚು ಹೋಟೆಲ್ಗಳು ಮತ್ತು ಉಪಾಹಾರ ಮಂದಿರಗಳಿದ್ದರೂ, ಕೇವಲ 1,700 ಮಾತ್ರ ನೋಂದಣಿಯಾಗಿವೆ. ನೋಂದಣಿ ಮಾಡಿಕೊಂಡ ಸಂಸ್ಥೆಗಳ ವಿರುದ್ಧವೇ ನಿಯಮಾನುಸಾರ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಹೋಟೆಲ್ಗಳು ಮತ್ತು ಉಪಾಹಾರ ಮಂದಿರಗಳಲ್ಲಿ ದೊರೆಯುವ ಆಹಾರದ ಗುಣಮಟ್ಟದ ಬಗ್ಗೆ ಗ್ರಾಹಕರು ಸ್ವಯಂ ಜಾಗೃತಿ ಹೊಂದಿರಬೇಕು. ಕಡಿಮೆ ಬೆಲೆಗೆ ಸಿಗುತ್ತದೆ ಎಂಬ ಕಾರಣಕ್ಕೆ ರಸ್ತೆಬದಿಯಲ್ಲಿ ಸುರಕ್ಷತೆಯಿಲ್ಲದ ಆಹಾರ ಸೇವಿಸುವುದು ಸೂಕ್ತವಲ್ಲ. ಕೃತಕ ಬಣ್ಣಗಳು ಹಾಗೂ ಕಳಪೆ ಕಚ್ಚಾ ವಸ್ತುಗಳ ಬಳಕೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಆಹಾರ ಸುರಕ್ಷತೆ ಮತ್ತು ಶುಚಿತ್ವಕ್ಕೆ ಮನೆಗಳಲ್ಲಿಯೂ ಹೋಟೆಲ್ಗಳಲ್ಲಿಯೂ ಆದ್ಯತೆ ನೀಡಬೇಕು. ಸಾಧ್ಯವಾದಷ್ಟು ಜಂಕ್ ಫುಡ್ ಸೇವನೆಯನ್ನು ಕಡಿಮೆ ಮಾಡಬೇಕು ಎಂದು ಹೇಳಿದರು.
ಬೀದಿಬದಿಯಲ್ಲಿ ಮಾರಾಟವಾಗುವ ಬೇಳೆ, ಬೆಲ್ಲ ಸೇರಿದಂತೆ ಇತರ ಆಹಾರ ಪದಾರ್ಥಗಳನ್ನು ಖರೀದಿಸುವಾಗ ಎಚ್ಚರಿಕೆ ವಹಿಸಬೇಕು. ಸಾಧ್ಯವಾದಷ್ಟು ಅಧಿಕೃತ ಅಂಗಡಿಗಳು ಮತ್ತು ದಿನಸಿ ಮಳಿಗೆಗಳಿಂದಲೇ ಖರೀದಿಸಬೇಕು. ಕಲಬೆರಕೆ ಅಥವಾ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳ ಮಾರಾಟ ಕಂಡುಬಂದರೆ ಇಲಾಖೆಯ ಕ್ಯೂಆರ್ ಕೋಡ್ ವ್ಯವಸ್ಥೆಯ ಮೂಲಕ ದೂರು ಸಲ್ಲಿಸಬಹುದು ಎಂದು ಸಲಹೆ ನೀಡಿದರು.
ಔಷಧ ವ್ಯಾಪಾರಿಗಳ ಪರವಾಗಿ ಮಾತನಾಡಿದ ಪಂಡಿತ್ ಜವಾಹರ್, ನೀರು, ಆಹಾರ ಮತ್ತು ಔಷಧಗಳ ಕಲಬೆರಕೆಯಿಂದ ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು ಎಂದರು.
ಮೆಡಿಕಲ್ ರೆಪ್ರೆಸೆಂಟೇಟಿವ್ಗಳು ಅಥವಾ ಔಷಧ ಅಂಗಡಿಯವರು ಶಿಫಾರಸು ಮಾಡುವ ಔಷಧಗಳನ್ನು ವೈದ್ಯರ ಸಲಹೆಯಿಲ್ಲದೆ ಬಳಸಬಾರದು. ಔಷಧದ ಉತ್ಪಾದನಾ ದಿನಾಂಕ ಮತ್ತು ಅವಧಿ ಮುಕ್ತಾಯದ ದಿನಾಂಕವನ್ನು ಪರಿಶೀಲಿಸಬೇಕು. ಔಷಧದ ಗುಣಮಟ್ಟದ ಬಗ್ಗೆಯೂ ಅರಿವು ಹೊಂದಿರಬೇಕು. ಪ್ರತಿಯೊಬ್ಬರೂ ಎಚ್ಚರಿಕೆ ವಹಿಸುವ ಮೂಲಕ ಆರೋಗ್ಯವಂತ ಹಾಗೂ ಸದೃಢ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.
ಐಎಂಎ ಅಧ್ಯಕ್ಷ ಡಾ. ಲೋಕೇಶ್ ಬಾಬು ಮಾತನಾಡಿ, ನಕಲಿ ವೈದ್ಯರು ಮತ್ತು ನಕಲಿ ಔಷಧಗಳ ನಡುವೆ ಸಂಬಂಧವಿದ್ದು, ಇದು ದೊಡ್ಡ ಜಾಲವಾಗಿ ಬೆಳೆಯುವ ಅಪಾಯವಿದೆ. ಅಧಿಕೃತ ವೈದ್ಯರು ನಕಲಿ ಔಷಧಗಳನ್ನು ಶಿಫಾರಸು ಮಾಡುವ ಸಾಧ್ಯತೆ ಕಡಿಮೆ. ಸರ್ಕಾರದ ನಿಯಮದಂತೆ ಪ್ರತಿಯೊಂದು ಆಸ್ಪತ್ರೆಯಲ್ಲೂ ಅ
