ಅರಾಜಕತೆ ಸೃಷ್ಟಿಸಿ ದೇಶದ ಅಧಿಕಾರ ಹಿಡಿಯಲು ಬಿಡುವುದಿಲ್ಲ: ಶೋಭಾ ಕರಂದ್ಲಾಜೆ ವಾಗ್ದಾಳಿ
Tumkurnews.in
ತುಮಕೂರು: ದೇಶದಲ್ಲಿ ಅರಾಜಕತೆ ಸೃಷ್ಟಿಸಿ ಅಧಿಕಾರ ಹಿಡಿಯ ಬಹುದು ಎಂದು ಕಾಂಗ್ರೆಸ್ ಒಕ್ಕೂಟ ಮಾಡುತ್ತಿರುವ ಪ್ರಯತ್ನ ಫಲಿಸುವುದಿಲ್ಲ, ಪ್ರಜಾತಂತ್ರಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವವರಿಗೆ ದೇಶದ ಜನ ಅಧಿಕಾರದ ಅವಕಾಶ ಕೊಡುವುದಿಲ್ಲ ಎಂದು ಕೇಂದ್ರ ಅತಿ ಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಐಆರ್ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆಂದು ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳ ನಾಯಕರ ವಿರುದ್ಧ ಹರಿಹಾಯ್ದರು. 1952ರಿಂದ ಇದೂವರೆಗೆ ದೇಶದಲ್ಲಿ 12 ಬಾರಿ ಎಸ್ಐಆರ್ ಮಾಡಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗಿದೆ. ವಾಜಪೇಯಿ ಹಾಗೂ ಮೋದಿಯವರ ಪ್ರಧಾನಿಯಾಗಿದ್ದ ಅವಧಿ ಬಿಟ್ಟರೆ ಹೆಚ್ಚು ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿತ್ತು. ಆಗ ಸರಿ ಇದ್ದ ಎಸ್ಐಆರ್ ಈಗ ಸರಿಯಿಲ್ಲ ಎಂದರೆ ಏನರ್ಥ? ಎಂದು ಪ್ರಶ್ನಿಸಿದರು.
ಮನೆಮನೆಗೂ ಹೋಗಿ ಮತದಾರರನ್ನು ಭೇಟಿ ಮಾಡಿ ಮತದಾರರ ಪಟ್ಟಿ ತಯಾರು ಮಾಡುವುದು ಎಸ್ಐಆರ್ನ ಕ್ರಮ. ತುಮಕೂರು ಜಿಲ್ಲೆಯ ಮತದಾರರ ಪಟ್ಟಿ ತಯಾರಿಸಲು ದೆಹಲಿ ಅಧಿಕಾರಿಗಳು ಬರುವುದಿಲ್ಲ. ಇಲ್ಲಿನ ಅಧಿಕಾರಿಗಳೇ ಮತದಾರರ ಪಟ್ಟಿ ತಯಾರು ಮಾಡಿ ಕೊಡುತ್ತಾರೆ. ಬಿಟ್ಟುಹೋದ, ಸೇರ್ಪಡೆ ಮಾಡಬೇಕಾದ ಮತದಾರರ ಹೆಸರನ್ನು ಸೂಕ್ತ ದಾಖಲಾತಿ ನೀಡಿ ಸೇರಿಸಬಹುದು. ದೇಶದ ಎಲ್ಲಾ ಅರ್ಹ ಮತದಾರರೂ ಮತಪಟ್ಟಿಯಲ್ಲಿ ಸೇರುವ ಹಕ್ಕು ಇದೆ. ಇದೂ ಗೊತ್ತಿದ್ದೂ ಎಸ್ಐಆರ್ ಬಗ್ಗೆ ವಿರೋಧ ಮಾಡುತ್ತಿರುವ ನಿಮ್ಮ ಉದ್ದೇಶವೇನು ಎಂದು ಕಾಂಗ್ರೆಸ್ ನಾಯಕರಿಗೆ ಕೇಳಿದರು.
ಮನೆಮನೆಗೆ ಹೋಗಿ ಎಸ್ಐಆರ್ ಪ್ರಕ್ರಿಯೆ ನಡೆಸಬೇಕು. ಆದರೆ ಮಸೀದಿಗಳಲ್ಲಿ, ಉರ್ದು ಶಾಲೆಗಳಲ್ಲಿ ಕುಳಿತು ಎಸ್ಐಆರ್ ಮಾಡುತ್ತಿರುವ ಬಗ್ಗೆ ಫೋಟೋ, ವಿಡಿಯೊ ಸಮೇತ ದೂರು ನೀಡಿದ್ದೆವು, ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಸತ್ತವರು, ಮತ್ತೊಂದು ಕಡೆ ಮತಪಟ್ಟಿಯಲ್ಲಿರುವವರ ಹೆಸರನ್ನು ಕೈಬಿಡಲಾಗುತ್ತದೆ. ಆದರೆ ಹೊರ ದೇಶಗಳಿಂದ ಅಕ್ರಮವಾಗಿ ಬಂದಿರುವವರು ಸಹಜವಾಗಿ ಮತದಾರರ ಮಟ್ಟಿ ಸೇರುವುದಿಲ್ಲ. ಪ್ರತಿ ಬೂತ್ನಲ್ಲೂ ರಾಜಕೀಯ ಪಕ್ಷಗಳ ಬಿಎಲ್ಓಗಳಿರುತ್ತಾರೆ, ಅರ್ಹ ಮತದಾರರಿದ್ದರೆ ಅವರನ್ನು ಗುರುತಿಸಿ ಮತದಾರರ ಪಟ್ಟಿಯಲ್ಲಿ ಸೇರಿಸಲು ಅವಕಾಶವಿದೆ. ಇಷ್ಟೆಲ್ಲಾ ಇದ್ದರೂ ಕಾಂಗ್ರೆಸ್ ನಾಯಕರು ಎಸ್ಐಆರ್ ಬಗ್ಗೆ ಗೊಂದಲ ಉಂಟು ಮಾಡಿ ಅರಾಜಕತೆ ಸೃಷ್ಟಿಸಲು ಹೊರಟಿರುವುದನ್ನು ದೇಶದ ಜನ ಗಮನಿಸುತ್ತಿದ್ದಾರೆ ಎಂದು ಹೇಳಿದರು.
ದೇಶದ್ರೋಹಿಗಳ ಹಾಗೂ ಸಿಜೆಪಿಯವರ ಜೊತೆ ಸೇರಿಕೊಂಡು ಬಂಗಾಲ, ಶ್ರೀಲಂಕ, ನೇಪಾಲ ರೀತಿಯಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಟಿ ದೇಶದ ಅಧಿಕಾರ ಹಿಡಿಯಬಹುದು ಎಂಬ ಪ್ರಯತ್ನದಲ್ಲಿರುವ ಕಾಂಗ್ರೆಸ್ ನಾಯಕರ ಧೋರಣೆ ಜನರಿಗೆ ಅರ್ಥವಾಗಿದೆ. ಯಾವುದೇ ಕಾರಣಕ್ಕೂ ಜನ ನಿಮಗೆ ಅಧಿಕಾರ ನೀಡುವುದಿಲ್ಲ, ದೇಶದ್ರೋಹಿಗಳ ಕೈಗೆ ದೇಶ ಹೋಗಲು ಭಾರತೀಯ ಜನತಾ ಪಕ್ಷವೂ ಬಿಡುವುದಿಲ್ಲ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ರಾಹುಲ್ ಗಾಂಧಿ ವಿದೇಶಗಳಿಗೆ ಹೋದಾಗಲೆಲ್ಲಾ ನಮ್ಮ ದೇಶವನ್ನು ಅವಹೇಳನ ಮಾಡುವುದನ್ನೇ ಮಾಡುತ್ತಿದ್ದಾರೆ. ದೇಶದ ಪ್ರಜಾಪ್ರಭುತ್ವ, ಪ್ರಧಾನ ಮಂತ್ರಿ, ನಮ್ಮ ಮಿಲಿಟರಿ, ಚುನಾವಣಾ ಆಯೋಗವನ್ನು ವಿದೇಶದಲ್ಲಿ ಟೀಕೆ ಮಾಡುತ್ತಾ ದೇಶವನ್ನು ಅಪಮಾನ ಮಾಡುತ್ತಿದ್ದಾರೆ. ಇಂತಹವರು ದೇಶದ ಪ್ರಜಾಪ್ರಭುತ್ವವನ್ನು, ದೇಶದ ಜನರನ್ನು ಕಾಪಾಡಲು ಸಾಧ್ಯವೆ? ಎಂದರು.
ಶಾಸಕ ಜಿ.ಬಿ. ಜ್ಯೋತಿಗಣೇಶ್, ವಿಧಾನ ಪರಿಷತ್ ಸದಸ್ಯ ಚಿದಾನಂದ ಗೌಡ, ಬಿಜೆಪಿ ರಾಜ್ಯ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್, ವೈ.ಹೆಚ್. ಹುಚ್ಚಯ್ಯ, ಜಿಲ್ಲಾ ವಕ್ತಾರ ಜೆ. ಜಗದೀಶ್ ಮೊದಲಾದವರು ಹಾಜರಿದ್ದರು.
