ವೀರಶೈವ ಲಿಂಗಾಯತರಿಗೆ ಇತರೆ ಸಮುದಾಯಗಳ ಬೆಂಬಲ ಬೇಕು: ಶಾಸಕ ಜ್ಯೋತಿ ಗಣೇಶ್
Tumkurnews.in
ತುಮಕೂರು: ಮಠ ಮಾನ್ಯಗಳ ನೆರವಿನ ಫಲವಾಗಿ ವೀರಶೈವ ಲಿಂಗಾಯಿತ ಸಮುದಾಯ ಶೈಕ್ಷಣಿಕವಾಗಿ ಮುಂದುವರೆದಿದೆ. ಆದರೆ ರಾಜಕೀಯವಾಗಿ ಮುಂದುವರೆಯಬೇಕಾದರೆ ಇತರೆ ಸಮುದಾಯಗಳ ಬೆಂಬಲದ ಅಗತ್ಯವಿದೆ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ತುಮಕೂರು ಜಿಲ್ಲಾ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ದಿ ಸಂಘ(ರಿ)ವತಿಯಿಂದ ಆಯೋಜಿಸಿದ್ದ ಜಿಲ್ಲಾ ವೀರಶೈವ ಲಿಂಗಾಯಿತ ನೌಕರರ ಸಮಾವೇಶ ಮತ್ತು ಅಭಿನಂದನಾ ಸಮಾರಂಭ ಹಾಗೂ ಪ್ರತಿಭಾಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ಧರ್ಮಛತ್ರ, ಹಾಸ್ಟೆಲ್ಗಳು ಮತ್ತು ಮಠಗಳಲ್ಲಿ ಓದಿ ಸರಕಾರಿ ಉದ್ಯೋಗ ಪಡೆದು ಸಮಾಜದಲ್ಲಿ ವೀರಶೈವ ಲಿಂಗಾಯಿತ ಸಮಾಜ ತಮ್ಮ ಆಸ್ಥಿತ್ವವನ್ನು ಉಳಿಸಿಕೊಂಡಿದೆ. ಆದರೆ ರಾಜಕೀಯವಾಗಿ ಬೆಳೆಯಬೇಕಾದರೆ, ಅದರಲ್ಲಿಯೂ ವೀರಶೈವ ಲಿಂಗಾಯಿತರು ಕಡಿಮೆ ಸಂಖ್ಯೆಯಲ್ಲಿರುವ ಹಳೆ ಮೈಸೂರು ಭಾಗದಲ್ಲಿ ರಾಜಕೀಯ ಅಧಿಕಾರ ಸಿಗಬೇಕಾದರೆ ಓಬಿಸಿ, ಎಸ್ಸಿ,ಎಸ್ಟಿ ಸಮುದಾಯಗಳ ಜೊತೆಗೆ ಹೊಂದಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ ಎಂದರು.
ಸಿದ್ದಗಂಗಾ ಮಠದಲ್ಲಿ ಓದಿದ ವಿದ್ಯಾರ್ಥಿಗಳು ಪ್ರಪಂಚದ ಎಲ್ಲೆಡೆಯೂ ಇದ್ದಾರೆ.ಇದು ಸಮುದಾಯದ ಹೆಮ್ಮೆಯ ವಿಚಾರ. ರಾಜ್ಯದಲ್ಲಿ 50-60 ಶಾಸಕರಿದ್ದರು. ಬಹುತೇಕರು ಹೈದ್ರಾಬಾದ್ ಕರ್ನಾಟಕ ಮತ್ತು ಬಾಂಬ್ ಕರ್ನಾಟಕ ಭಾಗದವ ರಾಗಿದ್ದಾರೆ. ಹಳೆ ಮೈಸೂರು ಭಾಗದಲ್ಲಿ 4-5 ಜನ ಶಾಸಕರು ಮಾತ್ರ ವೀರಶೈವ ಲಿಂಗಾಯಿತರಿದ್ದಾರೆ. ನಮ್ಮ ಸಂಖ್ಯೆ ಹೆಚ್ಚಬೇಕೆಂದರೆ ಬೇರೆ ಸಮುದಾಯಗಳ ಜೊತೆಗೆ ಹೊಂದಾಣಿಕೆ ಅಗತ್ಯ. ಇಲ್ಲದಿದ್ದಲ್ಲಿ ರಾಜಕೀಯ ಆಸ್ಥಿತ್ವಕ್ಕೆ ಧಕ್ಕೆಯಾಗಲಿದೆ ಎಂದು ಶಾಸಕ ಜಿ.ಬಿ.ಜೋತಿಗಣೇಶ್ ಎಚ್ಚರಿಸಿದರು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಬಸವರಾಜು ಮಾತನಾಡಿ, ಕರ್ನಾಟಕದ ಅಭಿವೃದ್ದಿ ಪಥದಲ್ಲಿದ್ದರೆ, ಅದಕ್ಕೆ ಮಠ ಮಾನ್ಯಗಳ ಕೊಡುಗೆ ಆಪಾರ. ಮಠ ಮಾನ್ಯಗಳು ಜಾತಿ, ಧರ್ಮ ನೋಡದೆ ಎಲ್ಲಾ ವರ್ಗದ ಮಕ್ಕಳಿಗೆ ಶಿಕ್ಷಣ ನೀಡಿದ ಪರಿಣಾಮ ಇಂದು ಕರ್ನಾಟಕ ಜಿ.ಎಸ್.ಟಿ ಸಂಗ್ರಹಣೆಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಜಿಡಿಪಿ ಬೆಳವಣಿಗೆಯಲ್ಲಿ ಐದನೇ ಸ್ಥಾನದಲ್ಲಿದೆ.ನಮ್ಮ ಸರಕಾರಿ ನೌಕರರ ಸಂಘದಿಂದ ಅತಿ ಹೆಚ್ಚು ಅಂಕ ಪಡೆದ ಸರಕಾರಿ ನೌಕರರ ಮಕ್ಕಳಿಗೆ ಪ್ರತಿಭಾಪುರಸ್ಕಾರ ನೀಡುತ್ತಾ ಬಂದಿದ್ದು,ಈ ವರ್ಷ 3500 ಜನರಿಗೆ ಅರಮನೆ ಮೈದಾನದಲ್ಲಿ ಪ್ರತಿಭಾನ್ವಿತರನ್ನು ಅಭಿನಂದಿಸಲಾಗಿದೆ. ಇದಕ್ಕಾಗಿ ನಾಲ್ಕು ಕೋಟಿ ರೂ.ಗಳನ್ನು ಸಂಘದಲ್ಲಿ ಮೀಸಲಿರಿಸಲಾಗಿದೆ. ಮಕ್ಕಳು ಮತ್ತು ಪೋಷಕರು ಕೇವಲ ಅಂಕಗಳಿಗೆ ಮಹತ್ವ ನೀಡದೆ, ಮೌಲ್ಯಯುತ ಶಿಕ್ಷಣಕ್ಕೆ ಒತ್ತು ನೀಡಬೇಕು.ವೈದ್ಯಕೀಯ ಶಿಕ್ಷಣ, ಇಂಜಿನಿಯರಿಂಗ್, ಎಂ.ಬಿ.ಎ ಇನ್ನಿತರ ಸ್ನಾತಕೋತ್ತರ ಪದವಿ ಪಡೆದವರು ಭಯೋತ್ಪಾಧಕರಾಗಿರುವುದನ್ನು ನೋಡುತ್ತಿದ್ದೇವೆ. ಹಾಗಾಗಿ ಮೌಲ್ಯಯುತ ಶಿಕ್ಷಣಕ್ಕೆ ಒತ್ತು ನೀಡುವ ಅಗತ್ಯವಿದೆ ಎಂದರು.
ಪ್ರಸ್ತಾವಿಕ ನುಡಿಗಳನ್ನಾಡಿದ ತುಮಕೂರು ಜಿಲ್ಲಾ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ದಿ ಸಂಘದ ಪ್ರಧಾನ ಕಾರ್ಯದರ್ಶಿ ಜೋತಿಪ್ರಕಾಶ್.ಟಿ.ಜೆ., ಸರಕಾರಿ ಮತ್ತು ಖಾಸಗಿ ಕ್ಷೇತ್ರದ ನೌಕರರಿಗೆ ಒಂದು ಇತಿ ಮಿತಿ ಇದೆ.ಹಾಗಾಗಿ ನಮ್ಮ ವ್ಯಾಪ್ತಿಯೊಳಗೆ ಕಳೆದ 15 ವರ್ಷಗಳಿಂದಲೂ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ಕೊವೀಡ್ ಸಂದರ್ಭ ಹೊರತು ಪಡಿಸಿದರೆ ಉಳಿದ ವರ್ಷಗಳಲ್ಲಿ ಪ್ರತಿಭಾವಂತರನ್ನು ಗುರುತಿಸಿ ಅಭಿನಂದಿಸಿ ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ. ಮಠ ಮಾನ್ಯಗಳಿಗೆ, ಬಡ ಮಕ್ಕಳ ಓದಿಗೆ ಕೈಲಾದ ನೆರವು ನೀಡಲಾಗುತ್ತಿದೆ. ಸಮುದಾಯದ ಜನಪ್ರತಿನಿಧಿಗಳು ಈ ಕಾರ್ಯದಲ್ಲಿ ಕೈಜೋಡಿಸುವಂತೆ ಮನವಿ ಮಾಡಿದರು.
ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತನಾಡಿದ ಅಖಿಲ ಭಾರತ ವೀರಶೈವಲಿಂಗಾಯಿತ ಮಹಾಸಭಾ ಮಹಿಳಾ ರಾಷ್ಟ್ರೀಯ ಅಧ್ಯಕ್ಷೆ ವೀಣಾ ಕಾಶಪ್ಪ, ಸಮಾಜವನ್ನು ಅರ್ಥಿಕವಾಗಿ, ಸಮಾಜಿಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಮೇಲೆ ತರುವ ನಿಟ್ಟಿನಲ್ಲಿ ವೀರಶೈವ-ಲಿಂಗಾಯಿತ ಎಂಬ ಭಿನ್ನಮತ ಬದಿಗಿಟ್ಟು ಹಿರಿಯರ ಮಾರ್ಗದರ್ಶನದಂತೆ ಎಲ್ಲರೂ ಒಂದೇ ಎಂದು ಕೆಲಸ ಮಾಡಬೇಕಾಗಿದೆ. ಮುಂದೆ ಒಳ್ಳೆಯ ಗುರಿ, ಹಿಂದೆ ಒಳ್ಳೆಯ ಗುರು ಇಟ್ಟುಕೊಂಡು, ನಮ್ಮ ಉದ್ದಾತ ಉದ್ದೇಶ ಈಡೇರಿಸಲು ಪ್ರಯತ್ನಿಸಬೇಕಾಗಿದೆ. ಸಿದ್ದಾಂತ ಶಿಖಾಮಖಿ, ಇನ್ನಿತರ ಗ್ರಂಥಗಳ ಅಧ್ಯಯನ ಮತ್ತು ಮನನಕ್ಕೆ ನಮ್ಮ ಸಮುದಾಯದ ವಿದ್ಯಾರ್ಥಿಗಳು ಗಮನ ಹರಿಸಬೇಕಾಗಿದೆ ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಬೆಳ್ಳಾವೆಯ ಶ್ರೀಕಾರದೇಶ್ವರ ಮಠದ ಶ್ರೀಶ್ರೀವೀರಕಾರದ ಬಸವ ಸ್ವಾಮೀಜಿ ಆಶೀರ್ವಚನ ನೀಡಿ, ವೀರಶೈವ ಲಿಂಗಾಯಿತ ಸಮುದಾಯದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಇಂತಹ ಸಮಾರಂಭಗಳ ಮೂಲಕ ಅವರನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕು. ಕೇವಲ ಇಂಜಿನಿಯರಿಂಗ್, ಮೆಡಿಕಲ್ ಅಷ್ಟೇ ಅಲ್ಲ ಬೇರೆ ಬೇರೆ ಕ್ಷೇತ್ರಗಳ ಕಡೆಗೂ ಸಮುದಾಯದ ವಿದ್ಯಾರ್ಥಿಗಳು ಗಮನಹರಿಸಬೇಕು. ತಾವು ಒಳ್ಳೆಯ ಸ್ಥಾನಕ್ಕೆ ಹೋದಾಗ, ನಿಮ್ಮನ್ನು ಗುರುತಿಸಿ, ಗೌರವಿಸಿದ ಸಂಘ ಸಂಸ್ಥೆಗಳಿಗೆ ನಿಮ್ಮ ಕೈಲಾದ ಸಹಾಯ ಮಾಡುವಂತೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ಜಿಲ್ಲಾ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎಂ.ಬಿ.ಷಡಕ್ಷರಿ ವಹಿಸಿದ್ದರು. ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ್, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ತುಮಕೂರು ಜಿಲ್ಲಾ ಉಪಾಧ್ಯಕ್ಷ ಶಶಿ ಹುಲಿಕುಂಟೆ ಮಠ್, ಬೆಸ್ಕಾಂ ಇಇ ಅಮೀನ್, ವಿಜ್ಞಾನಿ ಈರಣ್ಣ ಅವರುಗಳು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಅಖಿಲ ಭಾರತ ವೀರಶೈವಲಿಂಗಾಯಿತ ಮಹಾಸಭಾ ತುಮಕೂರು ಜಿಲ್ಲಾ ಮಹಿಳಾಧ್ಯಕ್ಷೆ ಮಮತ ದಿವಾಕರ್, ಸಾಗರಹಳ್ಳಿ ನಟರಾಜು, ಡಾ.ಪ್ರಭಾ, ಬೆಸ್ಕಾಂ ಇಇ ಚೇತನ್, ಉದ್ಯಮಿಗಳಾದ ಡಾ.ದರ್ಶನ್ ಕೆ.ಎಲ್, ಹೆಚ್.ಕೆ.ರುದ್ರೇಶ್, ಕೊಪ್ಪಲ್ ನಾಗರಾಜು, ವಿವಿಧ ಸಂಘಗಳಿಗೆ ಆಯ್ಕೆಯಾಗಿರುವ ಉಮೇಶ್, ಸಿದ್ದಲಿಂಗಸ್ವಾಮಿ.ಎಸ್.ಪಿ, ಪಿ.ಜಿ.ತಿಮ್ಮೇಗೌಡ, ಹೆಚ್.ಎಂ.ರುದ್ರೇಶ್, ಜಿ.ವಿ.ಮೋಹನ್ಕುಮಾರ್, ಜಿಲ್ಲಾ ಘಟಕದ ಪದಾಧಿಕಾರಿಗಳಾದ ಹೆಚ್.ಜಯಶಂಕರ್, ಉಮೇಶ್, ಮಂಜುನಾಥ್ ಬಿ.ಎಸ್, ರೇಣುಕಾರಾಧ್ಯ, ಶುಭಮಣಿ ಸೇರಿದಂತೆ, ವಿವಿಧ ತಾಲೂಕು ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ತುಮಕೂರು: ಶಿರಾಗೇಟ್’ನಲ್ಲಿ 22 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ: ಶಾಸಕ ಜ್ಯೋತಿ ಗಣೇಶ್
