ಮಾತೃಭಾಷೆಯನ್ನು ತಾಯಿಯಂತೆ ಪ್ರೀತಿಸಿ ಬೆಳೆಸಿ: ಹೆಚ್. ನಿಂಗಪ್ಪ

ಜಿಲ್ಲಾ ಸುದ್ದಿ ತಾಲ್ಲೂಕು ತುಮಕೂರು ನಗರ ಪ್ರಮುಖ ಸುದ್ದಿ

ಮಾತೃಭಾಷೆಯನ್ನು ತಾಯಿಯಂತೆ ಪ್ರೀತಿಸಿ ಬೆಳೆಸಿ: ಹೆಚ್. ನಿಂಗಪ್ಪ

ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವ ಆಚರಣೆ

Tumkurnews.in

ತುಮಕೂರು: ಕನ್ನಡ ಎಂಬುದು ಕೇವಲ ಭಾಷೆಯಲ್ಲ, ಅದು ಈ ನೆಲದ ಸಂಸ್ಕೃತಿ, ಸಮೃದ್ಧ ಜ್ಞಾನ ಪರಂಪರೆ ಹಾಗೂ ಕನ್ನಡಿಗರ ಅಸ್ಮಿತೆಯಾಗಿದೆ. ಮಾತೃಭಾಷೆಯನ್ನು ತಾಯಿಯಂತೆ ಪ್ರೀತಿಸಿ ಬೆಳೆಸಬೇಕು ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹೆಚ್. ನಿಂಗಪ್ಪ ಹೇಳಿದರು.

ಭಾನುವಾರ ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ 71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಧ್ವಜಾರೋಹಣ ನೆರವೇರಿಸಿ, ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಕನ್ನಡಿಗರನ್ನು ಹಾಗೂ ಕನ್ನಡ ನೆಲವನ್ನು ಒಗ್ಗೂಡಿಸುವ ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ನಡೆಸಿದ ಮಹನೀಯರನ್ನು ಮತ್ತು ಅವರ ಕೊಡುಗೆಗಳನ್ನು ರಾಜ್ಯೋತ್ಸವದ ಸಂದರ್ಭದಲ್ಲಿ ಸ್ಮರಿಸಿ ಗೌರವಿಸಬೇಕು ಎಂದು ತಿಳಿಸಿದರು.

ಕನ್ನಡಿಗರಲ್ಲಿ ಪರಭಾಷಾ ವ್ಯಾಮೋಹ ಹೆಚ್ಚಾಗುತ್ತಿದೆ. ಬೇರೆ ಭಾಷೆಗಳನ್ನೂ ಕಲಿಯಲಿ, ಆದರೆ ಕನ್ನಡವನ್ನು ಮರೆಯದೆ ಬೆಳೆಸಿ ಉಳಿಸಬೇಕು. ಕನ್ನಡಕ್ಕೆ ದೊಡ್ಡ ಇತಿಹಾಸವಿದ್ದು, ತನ್ನದೇ ಆದ ಸಾಂಸ್ಕೃತಿಕ ಪರಂಪರೆಯ ಹಿರಿಮೆಯನ್ನು ಹೊಂದಿದೆ. ಅದನ್ನು ಹೊಸ ತಲೆಮಾರಿನವರಿಗೆ ಹೆಮ್ಮೆಯಿಂದ ಪರಿಚಯಿಸಬೇಕು. ಕನ್ನಡ ನೆಲ, ಜನ ಮತ್ತು ಭಾಷೆಯ ರಕ್ಷಣೆ ಮಾಡುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ ಎಂದು ಹೆಚ್. ನಿಂಗಪ್ಪ ಹೇಳಿದರು.

ವಿದೇಶ ಪ್ರವಾಸ ಮುಗಿಸಿ ಆಗಮಿಸಿದ ಜಿಲ್ಲಾ ಅಧ್ಯಕ್ಷ ಹೆಚ್. ನಿಂಗಪ್ಪ ಅವರನ್ನು ಕ್ರಿಶ್ಚಿಯನ್ ಸಮಾಜ ಘಟಕದ ಅಧ್ಯಕ್ಷ ದೇವನೂರು ಕುಮಾರ್ ಸನ್ಮಾನಿಸಿ ಗೌರವಿಸಿದರು. ರಾಜ್ಯೋತ್ಸವದ ಅಂಗವಾಗಿ ಸಿಹಿ ವಿತರಿಸಲಾಯಿತು.

ನಗರ ಅಧ್ಯಕ್ಷ ಟಿ.ಹೆಚ್. ಜಯರಾಮ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್. ನಾಗರಾಜ್, ನಗರ ಕಾರ್ಯಾಧ್ಯಕ್ಷ ಮೋಹನ್‌ಕುಮಾರ್, ರಾಜ್ಯ ಎಸ್.ಟಿ. ಘಟಕದ ಉಪಾಧ್ಯಕ್ಷ ಸೋಲಾರ್ ಕೃಷ್ಣಮೂರ್ತಿ, ಜಿಲ್ಲಾ ಕಾರ್ಯದರ್ಶಿ ತೋವಿನಕೆರೆ ಮಂಜುನಾಥ್, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಕೆಂಪರಾಜು, ಕಾರ್ಮಿಕರ ಘಟಕದ ಅಧ್ಯಕ್ಷ ಅಶ್ವತ್ಥ್ ಕುಮಾರ್, ನಗರ ಯುವ ಘಟಕದ ಅಧ್ಯಕ್ಷ ಪ್ರಮೋದ್‌ಗೌಡ, ನಗರಸಭೆ ಮಾಜಿ ಉಪಾಧ್ಯಕ್ಷ ಶ್ರೀನಿವಾಸ್‌ಪ್ರಸಾದ್, ಮಾಜಿ ಸದಸ್ಯರಾದ ಲಕ್ಷ್ಮೀನರಸಿಂಹರಾಜು, ಶ್ರೀನಿವಾಸ್, ಮುಖಂಡರಾದ ಗಂಗಣ್ಣ, ಟಿ.ಸಿ. ಪ್ರಭಾಕರ್, ಉಪ್ಪಾರಹಳ್ಳಿ ಕುಮಾರ್, ಭೈರೇಶ್, ಟಿ.ಎಸ್. ಗಟ್ಟಿ, ಗುರುಪ್ರಸಾದ್ ಬಳ್ಳುಕರಾಯ, ಮಂಡಿ ಚಂದ್ರಣ್ಣ, ಉಪ್ಪಾರಹಳ್ಳಿ ಮಂಜುನಾಥ್, ಯಶೋಧ, ರಾಧಾಗೌಡ, ರೇಖಾ, ಜಯಲಕ್ಷ್ಮಿ, ಶಕುಂತಲಾ, ಲಲಿತಾ ಬಾಯಿ, ಗಣೇಶ್, ಉಮೇಶ್‌ಕುಮಾರ್ ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *