ರಾಜ್ಯೋತ್ಸವ ಸಂಭ್ರಮವು ನಿತ್ಯೋತ್ಸವವಾಗಬೇಕು: ಸಚಿವ ಕೃಷ್ಣ ಬೈರೇಗೌಡ
ಕನ್ನಡ ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸಲು ಎಲ್ಲರೂ ಕೈಜೋಡಿಸಬೇಕು: ಸಚಿವರ ಕರೆ
Tumkurnews.in
ತುಮಕೂರು : ಕರ್ನಾಟಕ ಏಕೀಕರಣಗೊಂಡ ನವೆಂಬರ್ 1ರ ಕನ್ನಡ ರಾಜ್ಯೋತ್ಸವದ ಸಂಭ್ರಮ ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗದೆ ನಿತ್ಯೋತ್ಸವವಾಗಬೇಕು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತದ ವತಿಯಿಂದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಇತಿಹಾಸದಲ್ಲಿ ವಿವಿಧ ರಾಜಸಂಸ್ಥಾನಗಳಿಗೆ ಸೇರಿದ್ದರೂ ಕನ್ನಡ ನಾಡು ಸಾವಿರಾರು ವರ್ಷಗಳಿಂದ ತನ್ನದೇ ಆದ ಭೌಗೋಳಿಕ, ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ಹಿನ್ನೆಲೆಯನ್ನು ಹೊಂದಿದೆ. ಅಮೋಘವರ್ಷನ ಕವಿರಾಜಮಾರ್ಗ ಕೃತಿಯ ಮೂಲಕ ಸ್ಪಷ್ಟ ರೂಪ ಪಡೆದ ಕನ್ನಡ ಭಾಷೆ ಹಂತ ಹಂತವಾಗಿ ಸಮೃದ್ಧ ಸಾಹಿತ್ಯದೊಂದಿಗೆ ಬೆಳೆದು, ಪ್ರಪಂಚದ ಪ್ರಮುಖ ಸಾಂಸ್ಕೃತಿಕ ಘಟಕಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ ಎಂದು ತಿಳಿಸಿದರು.
ಸಾವಿರಾರು ವರ್ಷಗಳಿಂದ ಬೇರೆ ಬೇರೆ ಸಂಸ್ಥಾನಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ನಾಡು, ಬ್ರಿಟಿಷರ ಆಳ್ವಿಕೆಯಲ್ಲಿಯೂ ಒಂದಾಗಿ ಬದುಕಲು ಸಾಧ್ಯವಾಗಿರಲಿಲ್ಲ. ಕನ್ನಡಿಗರನ್ನು ಒಂದುಗೂಡಿಸಬೇಕೆಂಬ ಆಶಯ ಬಹುದಿನಗಳ ಪ್ರಯತ್ನವಾಗಿಯೇ ಉಳಿದಿತ್ತು. ಕನ್ನಡಿಗರ ಒಗ್ಗಟ್ಟಿನ ಆಶಯಕ್ಕೆ ಮನ್ನಣೆ ನೀಡಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರು ದೇಶದಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆಗೆ ಒಲವು ತೋರಿದ ಹಿನ್ನೆಲೆಯಲ್ಲಿ 1956ರ ನವೆಂಬರ್ 1ರಂದು ವಿಶಾಲ ಮೈಸೂರು ರಾಜ್ಯ ನಿರ್ಮಾಣವಾಯಿತು. ಆ ಮೂಲಕ ಸಾವಿರಾರು ವರ್ಷಗಳ ಕನ್ನಡಿಗರ ಒಗ್ಗಟ್ಟಿನ ಕನಸು ನನಸಾಯಿತು. ಈ ದಿನವನ್ನು ನಾವಿಂದು ಸಂಭ್ರಮದಿಂದ ಆಚರಿಸುತ್ತಿದ್ದು, ಇದಕ್ಕೆ ಕಾರಣರಾದ ಎಲ್ಲ ಶ್ರಮಿಕರನ್ನು ಸ್ಮರಿಸಬೇಕು ಎಂದರು.
ನಂತರ 1973ರ ನವೆಂಬರ್ 1ರಂದು ವಿಶಾಲ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಸ್ವಾತಂತ್ರ್ಯ ಹೋರಾಟ ಹಾಗೂ ಕರ್ನಾಟಕ ಏಕೀಕರಣದ ಜೊತೆಗೆ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ತುಮಕೂರು ಜಿಲ್ಲೆ ಪ್ರತಿಯೊಂದು ಹಂತದಲ್ಲಿಯೂ ನಿರಂತರ ಕೊಡುಗೆ ನೀಡುತ್ತಾ ಬಂದಿದೆ. ಕಲ್ಪತರು ನಾಡಾದ ಈ ಜಿಲ್ಲೆ ರೈತರಿಗೆ ಮಾತ್ರವಲ್ಲದೆ ಸಾಹಿತ್ಯ, ರಂಗಭೂಮಿ ಹಾಗೂ ಸಾಂಸ್ಕೃತಿಕ ಲೋಕಕ್ಕೂ ಮಹತ್ವದ ಕೊಡುಗೆ ನೀಡಿದೆ. ದೇಶ-ವಿದೇಶಗಳಲ್ಲಿ ಅಕ್ಷರ, ಅನ್ನ ಹಾಗೂ ಆಶ್ರಯ ದಾಸೋಹದ ಮೂಲಕ ಸೇವೆ ಸಲ್ಲಿಸಿದ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಯವರ ಆದರ್ಶಗಳು ವಿಶ್ವದಾದ್ಯಂತ ಜೀವಂತವಾಗಿವೆ. ಇದೇ ಜಿಲ್ಲೆಯ ಸಾಲುಮರದ ತಿಮ್ಮಕ್ಕ ಅವರ ಪರಿಸರ ಪ್ರೇಮ ಇತರರಿಗೆ ಸ್ಫೂರ್ತಿಯಾಗಿದೆ ಎಂದು ಹೇಳಿದರು.
ರಾಜ್ಯದ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸುವುದರ ಜೊತೆಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಪೂರಕವಾದ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಕೇಂದ್ರ ಸರ್ಕಾರದಿಂದ ದೇಶದಲ್ಲಿ ಬಲವಂತವಾಗಿ ಹಿಂದಿ ಭಾಷೆ ಹೇರಲು ಪ್ರಯತ್ನಿಸಲಾಗುತ್ತಿದೆ. ಸಂವಿಧಾನಬದ್ಧವಾಗಿ ಪ್ರತಿಯೊಬ್ಬರಿಗೂ ತಮಗೆ ಬೇಕಾದ ಭಾಷೆಯನ್ನು ಮಾತನಾಡುವ ಸ್ವಾತಂತ್ರ್ಯವಿದೆ. ಅಧಿಕಾರವನ್ನು ಬಳಸಿಕೊಂಡು ಒಂದು ಭಾಷೆಯನ್ನು ತುಳಿದು ಮತ್ತೊಂದು ಭಾಷೆಯನ್ನು ಹೇರುವ ಪ್ರಯತ್ನವನ್ನು ನಾವು ಪ್ರತಿರೋಧಿಸಬೇಕು ಎಂದು ಆಗ್ರಹಿಸಿದರು.
ಕನ್ನಡ ನಾಡಿನ ನಾಡಗೀತೆಗೆ ಇರುವಂತೆ ಹಳದಿ-ಕೆಂಪು ಬಣ್ಣದ ಕನ್ನಡ ಬಾವುಟಕ್ಕೂ ಅಧಿಕೃತ ಸ್ಥಾನಮಾನ ದೊರೆಯಬೇಕು. ಕನ್ನಡ ಬಾವುಟಕ್ಕೆ ಅಧಿಕೃತ ಸ್ಥಾನಮಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆಗೆ ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ ದೊರೆಯಲಿದೆ ಎಂಬ ಭರವಸೆ ಇದೆ ಎಂದರು.
ಭಾರತ ಬಹುಭಾಷಾ ಸಂಸ್ಕೃತಿಗಳ ಒಕ್ಕೂಟವಾಗಿದೆ. ಯಾವುದೇ ಒಂದು ಭಾಷೆ, ಸಂಸ್ಕೃತಿ ಅಥವಾ ರೀತಿ-ನೀತಿಗೆ ಸೀಮಿತವಾಗಿಲ್ಲ. ಎಲ್ಲ ಭಾಷೆ ಮತ್ತು ಸಂಸ್ಕೃತಿಗಳಿಗೆ ಸಮಾನ ಗೌರವ ದೊರೆಯಬೇಕು. ಆಗ ಮಾತ್ರ ಭಾರತದ ಐಕ್ಯತೆ ಸುಭದ್ರವಾಗಿರುತ್ತದೆ. ಯಾವುದೇ ಭಾಷೆ ಅಥವಾ ಸಂಸ್ಕೃತಿಯನ್ನು ತುಳಿಯುವ ಕೆಲಸ ಮಾಡಿದರೆ ದೇಶದ ಐಕ್ಯತೆಗೆ ಧಕ್ಕೆಯುಂಟು ಮಾಡಿದಂತಾಗುತ್ತದೆ ಎಂಬುದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು.
ನಮ್ಮ ಮನೆ-ಮನ ಕನ್ನಡವಾಗಬೇಕು. ನಮ್ಮ ಆಲೋಚನೆಗಳೂ ಕನ್ನಡಮಯವಾಗಿರಬೇಕು. ಬರೆದಂತೆ ಓದುವ, ಓದಿದಂತೆ ಬರೆಯುವ ಅದ್ಭುತ ಭಾಷೆ ಕನ್ನಡ. ಹಿರಿಯ ತತ್ವಜ್ಞಾನಿ ವಿನೋಬಾ ಭಾವೆ ಅವರು ಕನ್ನಡ ಲಿಪಿಯನ್ನು ವಿಶ್ವ ಲಿಪಿಗಳ ರಾಣಿ ಎಂದು ಹೊಗಳಿರುವುದು ನಮ್ಮೆಲ್ಲರ ಹೆಮ್ಮೆ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ನಾವೆಲ್ಲರೂ ಒಗ್ಗೂಡಿ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕನ್ನಡ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದ ವಿವಿಧ ಕ್ಷೇತ್ರಗಳ ಜಿಲ್ಲಾ ಮಟ್ಟದ 71 ಹಾಗೂ ತಾಲ್ಲೂಕು ಮಟ್ಟದ 24 ಸಾಧಕರನ್ನು ಸನ್ಮಾನಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಇದಕ್ಕೂ ಮುನ್ನ ಬೆಳಗ್ಗೆ 7.45ಕ್ಕೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಿಂದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದವರೆಗೆ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳು ಹಾಗೂ ಜನಪದ ಕಲಾತಂಡಗಳೊಂದಿಗೆ ತಾಯಿ ಭುವನೇಶ್ವರಿಯ ಭಾವಚಿತ್ರವನ್ನು ಅಲಂಕೃತ ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ವಿ. ಅಶ್ವಿಜ, ಪಾಲಿಕೆ ಆಯುಕ್ತೆ ಶುಭ, ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ತಹಶೀಲ್ದಾರ್ ರಾಜೇಶ್ವರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ ಕು. ಮಿರ್ಜಿ, ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮಗಳು
ನಗರದ ಬಟವಾಡಿಯ ಸೇಂಟ್ ಮೇರಿಸ್ ಶಾಲೆಯ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ‘ಕನ್ನಡ ನಾಡಿನ ರನ್ನದ ರತುನ ಕೇಳೋ ಕತೆಯನ್ನ’, ಕ್ಯಾತ್ಸಂದ್ರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ‘ದೇಶಕ್ಕೆ ಯೋಧ ನಾಡಿಗೆ ರೈತ’, ಬಿ.ಹೆಚ್. ರಸ್ತೆಯ ಶ್ರೀ ಸಿದ್ಧಗಂಗಾ ಪ್ರೌಢಶಾಲೆಯ ‘ಜನುಮ ನೀಡುತ್ತಾಳೆ ನಮ್ಮ ತಾಯಿ’ ಹಾಗೂ ವಿಜಯ ಪಿಯು ಕಾಲೇಜಿನ ವಿದ್ಯಾರ್ಥಿಗಳ ‘ಹಚ್ಚೇವು ಕನ್ನಡ ದೀಪ’ ಹಾಡಿನ ನೃತ್ಯ ಪ್ರದರ್ಶನಗಳು ಒಂದಕ್ಕಿಂತ ಒಂದು ಗಮನ ಸೆಳೆದವು.
ಅಪ್ರತಿಮ ಇತಿಹಾಸ ಹೊಂದಿರುವ ಕನ್ನಡ ನಾಡಿನ ಹಿರಿಮೆ-ಗರಿಮೆಗಳನ್ನು ಸಾರುವ ನೃತ್ಯ ರೂಪಕದ ಮೂಲಕ ನಾಡಿನ ಸಾಹಿತಿಗಳು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಸ್ಮರಿಸಲಾಯಿತು.
ಪಥಸಂಚಲನದಲ್ಲಿ ಉತ್ತಮ ಪ್ರದರ್ಶನ: ಬಹುಮಾನ ವಿತರಣೆ
ಪಥಸಂಚಲನದಲ್ಲಿ ಉತ್ತಮ ಪ್ರದರ್ಶನ ನೀಡಿದ ಪೊಲೀಸ್ ವಿಭಾಗದಲ್ಲಿ 12ನೇ ಪಡೆ ಕೆಎಸ್ಆರ್ಪಿ ರಾಜ್ಯ ಮೀಸಲು ಪೊಲೀಸ್ ತಂಡ ಪ್ರಥಮ ಹಾಗೂ ಡಿಎಆರ್ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ತಂಡ ದ್ವಿತೀಯ ಬಹುಮಾನ ಪಡೆಯಿತು.
ಎನ್ಸಿಸಿ ವಿಭಾಗದಲ್ಲಿ ಸರ್ವೋದಯ ಕಾಲೇಜಿನ ಬಾಲಕರ ತಂಡ ಪ್ರಥಮ ಹಾಗೂ ಸಿದ್ಧಗಂಗಾ ಕಾಲೇಜಿನ ಬಾಲಕರ ತಂಡ ದ್ವಿತೀಯ ಬಹುಮಾನ ಗಳಿಸಿತು. ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗದಲ್ಲಿ ಆರ್ಯನ್ ಪ್ರೌಢಶಾಲೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತಂಡಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಸೇವಾದಳ ವಿಭಾಗದಲ್ಲಿ ಕನ್ನಿಕಾ ಆಂಗ್ಲಶಾಲೆ ಪ್ರಥಮ ಹಾಗೂ ಬಾಪೂಜಿ ಸಂಯುಕ್ತ ಪದವಿಪೂರ್ವ ಕಾಲೇಜು ದ್ವಿತೀಯ ಬಹುಮಾನ ಪಡೆದುಕೊಂಡವು.
