ಪಿ.ಆರ್.ಸಿ. ಕಾಯ್ದೆ ಮೂಲಕ ಅಕ್ರಮ ವಲಸಿಗರನ್ನು ಸಕ್ರಮಗೊಳಿಸಲು ರಾಜ್ಯ ಸರ್ಕಾರ ಹುನ್ನಾರ: ಶಾಸಕ ಜಿ.ಬಿ.ಜ್ಯೋತಿಗಣೇಶ್ ಆರೋಪ
Tumkur news
ತುಮಕೂರು: ರಾಜ್ಯಾದ್ಯಂತ ಶುರುವಾಗಿರುವ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ಕಾರ್ಯ ನಡೆಯುತ್ತಿದ್ದು, ಅಕ್ರಮ ವಲಸಿಗರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಮುಖ್ಯ ಉದ್ದೇಶವಾಗಿದ್ದು, ಈ ಪ್ರಕ್ರಿಯೆ ದೇಶದೆಲ್ಲೆಡೆ ಸುಸೂತ್ರವಾಗಿ ನಡೆಸಿದೆ. ಎಲ್ಲಾ ಜಾತಿ, ಧರ್ಮದ ಪ್ರತಿಯೊಬ್ಬ ಭಾರತೀಯರು ಮತದಾರರಾಗಲು ಅರ್ಹರು. ಅದಕ್ಕೆ ಯಾವುದೇ ಆಕ್ಷೇಪಣೆ ಇರುವುದಿಲ್ಲ.
ಆದರೆ ಅಕ್ರಮ ವಲಸಿಗರನ್ನು ಸಕ್ರಮಗೊಳಿಸಲು ಕರ್ನಾಟಕ ಸರ್ಕಾರವು ಕರ್ನಾಟಕ ಶಾಶ್ವತ ನಿವಾಸ ಪ್ರಮಾಣಪತ್ರ (ಪಿ.ಆರ್.ಸಿ) 2026 ಅಧಿಸೂಚನೆ ಹೊರಡಿಸಿದೆ. ಭಾರತದ ಸಂವಿಧಾನವು ದೇಶಾದ್ಯಂತ ಎಲ್ಲಾ ನಾಗರೀಕರಿಗೂ ಒಂದೇ ಪೌರತ್ವ ಕಲ್ಪಿಸುತ್ತದೆ. ಆದರೆ ಕರ್ನಾಟಕ ಸರ್ಕಾರವು ರಾಜ್ಯದಲ್ಲಿ 10 ವರ್ಷಗಳವರೆಗೆ ವಾಸವಿರುವ ನಾಗರೀಕರಿಗೆ ಶಾಶ್ವತ ನಿವಾಸ ಪ್ರಮಾಣಪತ್ರ ನೀಡಲು ಹೊರಟಿರುವುದು ಖಂಡನೀಯ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಶಾಶ್ವತ ನಿವಾಸಿಗಳು” ಎಂದು ನಿಗದಿಪಡಿಸಿದ ವ್ಯಕ್ತಿಗಳ ಪ್ರತ್ಯೇಕ ವರ್ಗವನ್ನು ರಚಿಸುವ ಪ್ರಯತ್ನ ಇದಾಗಿದೆ. ಈ ಮೂಲಕ ರಾಜ್ಯ ಸರ್ಕಾರವು ಸಂವಿಧಾನದ ಅಡಿಯಲ್ಲಿ ಯಾವುದೇ ಅನುಮತಿಯಿಲ್ಲದ ವಿಶಿಷ್ಟ ಕಾನೂನು ಮಾನ್ಯತೆಯನ್ನು ಪರಿಣಾಮಕಾರಿಯಾಗಿ ನೀಡುತ್ತಿದೆ. ರಾಷ್ಟ್ರೀಯ ಭದ್ರತೆಯ ದೃಷ್ಟಿಕೋನದಿಂದ ಅಧಿಸೂಚನೆಯು ಅತ್ಯಂತ ಆತಂಕಕಾರಿಯಾಗಿದೆ. ಶಾಶ್ವತ ನಿವಾಸ ಪ್ರಮಾಣಪತ್ರ ವಿತರಣೆಯ ರಾಜ್ಯ ಮಟ್ಟದ ಕಾರ್ಯವಿಧಾನವು ಕೇಂದ್ರದ ಏಕರೂಪದ ಚೌಕಟ್ಟನ್ನು ದುರ್ಬಲಗೊಳಿಸಲಿದೆ. ಸರಿಯಾದ ಪೌರತ್ವ ಪರಿಶೀಲನೆಯಿಲ್ಲದೆ ಅಂತಹ ಪ್ರಮಾಣಪತ್ರ ನೀಡುವುದರಿಂದ ಅಕ್ರಮ ವಲಸಿಗರು ರಾಜ್ಯಗಳಲ್ಲಿ ನೆಲೆಸಿ ಅಕ್ರಮ ಚಟುವಟಿಕೆಗಳಲ್ಲೂ ತೊಡಗುವ ಸಾಧ್ಯತೆ ಇದೆ.
ಶಾಶ್ವತ ನಿವಾಸ ಪ್ರಮಾಣಪತ್ರವು ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಗಂಭೀರ ಅಪಾಯವನ್ನು ಮತ್ತು ಬೆದರಿಕೆಗೆ ಕಾರಣ ಆಗಲಿದೆ. ಕರ್ನಾಟಕ ಶಾಶ್ವತ ನಿವಾಸ ಪ್ರಮಾಣಪತ್ರ (ಪಿಆರ್ಸಿ) 2026ರ ಸಾಂವಿಧಾನಿಕ ಸಿಂಧುತ್ವವನ್ನು ಪರಿಶೀಲಿಸಲು ಕೇಂದ್ರ ಗೃಹ ಸಚಿವಾಲಯವು ಸಮರ್ಥ ಅಧಿಕಾರಿಯನ್ನು ನೇಮಿಸಬೇಕಿದೆ. ಅಂತಹ ಪರಿಶೀಲನೆ ಆಗುವವರೆಗೆ ಅಧಿಸೂಚನೆಯ ಅನುಷ್ಠಾನವನ್ನು ಸ್ಥಗಿತಗೊಳಿಸುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶಿಸಬೇಕಾಗಿದೆ.
ಅಧಿಸೂಚನೆ ಹೊರಡಿಸಿದ ಸಾಂವಿಧಾನಿಕ ಮತ್ತು ಶಾಸನಬದ್ಧ ಪ್ರಾಧಿಕಾರದ ಕುರಿತು ರಾಜ್ಯ ಸರ್ಕಾರದಿಂದ ವಿವರವಾದ ವರದಿ ಪಡೆಯಬೇಕಿದೆ. ಸಮರ್ಥ ಕೇಂದ್ರ ಸಂಸ್ಥೆಗಳ ಮೂಲಕ ಭಾರತೀಯ ಪೌರತ್ವದ ಸಮಗ್ರ ಪರಿಶೀಲನೆಯಿಲ್ಲದೆ ಯಾವುದೇ ಶಾಶ್ವತ ನಿವಾಸ ಪ್ರಮಾಣಪತ್ರವನ್ನು ನೀಡಲಾಗುವುದಿಲ್ಲ ಎಂದು ಖಚಿತ ಪಡಿಸಿಕೊಳ್ಳಬೇಕಿದೆ. ಸಾಂವಿಧಾನಿಕ ಚೌಕಟ್ಟು, ರಾಷ್ಟ್ರೀಯ ಭದ್ರತೆ ಮತ್ತು ಭಾರತದ ಸಂವಿಧಾನದ ಅಡಿಯಲ್ಲಿ ಖಾತರಿಪಡಿಸಲಾದ ಸಮಾನತೆಯ ತತ್ವವನ್ನು ರಕ್ಷಿಸಲು ಅಗತ್ಯವಿರುವ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ದೂರಗಾಮಿ ಸಾಂವಿಧಾನಿಕ ಪರಿಣಾಮಗಳು ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಗಂಭೀರ ಕಾಳಜಿಗಳನ್ನು ಪರಿಗಣಿಸಬೇಕಾಗಿದೆ ಎಂದು ಶಾಸಕ ಜಿ.ಬಿ ಜ್ಯೋತಿಗಣೇಶ್ ಒತ್ತಾಯಿಸಿದ್ದಾರೆ.
What do you feel about this post?
Like
Love
Happy
Haha
Sad
