ಹಾಲಿನ ದರ ಏರಿಕೆ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ

ಜಿಲ್ಲಾ ಸುದ್ದಿ ತಾಲ್ಲೂಕು ತುಮಕೂರು ನಗರ ಪ್ರಮುಖ ಸುದ್ದಿ ರಾಜಕೀಯ

ಹಾಲಿನ ದರ ಏರಿಕೆ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ

ಹಾಲಿನ ಕ್ಯಾನ್ ಹೊತ್ತು ಸರ್ಕಾರದ ವಿರುದ್ಧ ಮಹಿಳೆಯರ ಆಕ್ರೋಶ

Tumkurnews.in

ತುಮಕೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಹಾಲಿನ ದರ ಏರಿಕೆ ಮಾಡಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಮಂಗಳವಾರ ನಗರದ ಬಿಜಿಎಸ್ ವೃತ್ತದಲ್ಲಿ ಹಾಲಿನ ಖಾಲಿ ಕ್ಯಾನ್‌ಗಳನ್ನು ಹೊತ್ತು ಪ್ರತಿಭಟನೆ ನಡೆಸಿ, ಏರಿಕೆ ಮಾಡಿರುವ ಹಾಲಿನ ದರವನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿದರು.

ಬಿಜೆಪಿ ಮಹಿಳಾ ಮೋರ್ಚಾ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಹಿಳಾ ಕಾರ್ಯಕರ್ತೆಯರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹಾಲಿನ ದರ ಏರಿಕೆಯಿಂದ ಸಾಮಾನ್ಯ ಕುಟುಂಬಗಳು, ಅದರಲ್ಲೂ ಮಕ್ಕಳಿಗೆ ನಿತ್ಯ ಹಾಲು ನೀಡುವ ತಾಯಂದಿರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಚೈತ್ರ ಮಂಜುನಾಥ್, ರಾಜ್ಯದ ಕಾಂಗ್ರೆಸ್ ಸರ್ಕಾರ 2023ರಿಂದ ನಾಲ್ಕು ಬಾರಿ ಹಾಲಿನ ದರ ಹೆಚ್ಚಳ ಮಾಡಿದೆ. ಇದರಿಂದ ಜನಸಾಮಾನ್ಯರ ಕುಟುಂಬಗಳ ಮೇಲೆ ಹೆಚ್ಚುವರಿ ಹೊರೆ ಬಿದ್ದಿದೆ. ಮಕ್ಕಳಿಗೆ ನಿತ್ಯ ನೀಡುವ ಹಾಲಿನ ದರವೂ ಹೆಚ್ಚಳವಾಗಿರುವುದರಿಂದ ತಾಯಂದಿರಾಗಿ ನಾವು ಬೀದಿಗಿಳಿದು ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.

ಹಾಲು ಉತ್ಪಾದಕರಿಗೆ ನೀಡಬೇಕಾಗಿರುವ ಬಾಕಿ ಪ್ರೋತ್ಸಾಹಧನವನ್ನು ಪಾವತಿಸದ ಸರ್ಕಾರ, ಹಾಲಿನ ಬೆಲೆ ಹೆಚ್ಚಳ ಮಾಡುವ ಮೂಲಕ ರೈತರ ಕಣ್ಣೊರೆಸುವ ತಂತ್ರ ಅನುಸರಿಸಿ ಸಾಮಾನ್ಯ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಸರ್ಕಾರ ತನ್ನ ಬೊಕ್ಕಸದಿಂದಲೇ ಪ್ರೋತ್ಸಾಹಧನ ನೀಡಬೇಕೇ ಹೊರತು ಗ್ರಾಹಕರ ಮೇಲೆ ಹೊರೆ ಹೇರಬಾರದು. ಉಚಿತ ಯೋಜನೆಗಳನ್ನು ಜಾರಿಗೊಳಿಸುವ ಹೆಸರಿನಲ್ಲಿ ಜನರ ಜೇಬಿಗೆ ಕತ್ತರಿ ಹಾಕುವುದು ಎಷ್ಟು ಸಮಂಜಸ ಎಂದು ಚೈತ್ರ ಮಂಜುನಾಥ್ ಪ್ರಶ್ನಿಸಿದರು.

ಸರ್ಕಾರ ಕೂಡಲೇ ಹಾಲಿನ ದರ ಏರಿಕೆ ನಿರ್ಧಾರವನ್ನು ಹಿಂಪಡೆದು, ಹೆಚ್ಚಿಸಿರುವ ದರವನ್ನು ಇಳಿಸಬೇಕು. ಜನಸಾಮಾನ್ಯರಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮಹಿಳಾ ಮೋರ್ಚಾ ವತಿಯಿಂದ ಇನ್ನಷ್ಟು ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಬಿಜೆಪಿ ಹಿರಿಯ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೈ.ಹೆಚ್. ಹುಚ್ಚಯ್ಯ ಮಾತನಾಡಿ, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಬದಲಾಗಿ ದಿನಬಳಕೆಯ ವಸ್ತುಗಳು, ಹಾಲು ಸೇರಿದಂತೆ ವಿವಿಧ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಡವರ ಬದುಕು ದುಸ್ತರವಾಗಿದೆ. ಸರ್ಕಾರ ಜನರಿಗೆ ವಿಷಪ್ರಾಶನ ಮಾಡಿದಂತಾಗಿದೆ ಎಂದು ಟೀಕಿಸಿದರು.

ಪರಿಶಿಷ್ಟ ಪಂಗಡದ ಕಲ್ಯಾಣಕ್ಕಾಗಿ ಮೀಸಲಾಗಿದ್ದ 187 ಕೋಟಿ ರೂ.ಗಳನ್ನು ಚುನಾವಣೆಗೆ ಬಳಸಿಕೊಂಡು ಕಾಂಗ್ರೆಸ್ ಸರ್ಕಾರ ಆ ಸಮುದಾಯಕ್ಕೆ ಅನ್ಯಾಯ ಮಾಡಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಬರದ ಬೇಗೆಯಲ್ಲಿ ಜನ ತತ್ತರಿಸುತ್ತಿದ್ದರೂ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿಲ್ಲ. ಸರ್ಕಾರದ ಆಡಳಿತ ವೈಖರಿಗೆ ರಾಜ್ಯದ ಜನರು ಬೇಸತ್ತಿದ್ದಾರೆ. ಸಚಿವ ಸಂಪುಟವನ್ನು ಕೂಡಲೇ ವಿಸರ್ಜಿಸಿ ಚುನಾವಣೆಗೆ ಹೋಗಲಿ ಎಂದು ವೈ.ಹೆಚ್. ಹುಚ್ಚಯ್ಯ ಒತ್ತಾಯಿಸಿದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಭೈರಣ್ಣ, ಕಾರ್ಯದರ್ಶಿ ಕೆ. ವೇದಮೂರ್ತಿ, ಖಜಾಂಚಿ ಗಣೇಶ್‌ಪ್ರಸಾದ್, ಮಹಿಳಾ ಮೋರ್ಚಾ ನಗರ ಅಧ್ಯಕ್ಷೆ ಬಿ.ಹೆಚ್. ವಸಂತ, ನಗರ ಅಧ್ಯಕ್ಷ ಧನುಷ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸತ್ಯಮಂಗಲ ಜಗದೀಶ್, ಮುಖಂಡರಾದ ಬನಶಂಕರಿ ಬಾಬು, ಹನುಮಂತರಾಜು, ಬಂಬೂ ಮೋಹನ್, ರೇಖಾ ಶಿವಕುಮಾರ್, ತಾರಾದೇವಿ, ಡಾ. ಫರ್ಜಾನ ರಹಿಂಜೆ, ವೆಂಕಟೇಶಾಚಾರ್, ಕಲ್ಪನಾ ಪ್ರಸಾದ್, ಅಂಬುಜಾ, ಕವಿತಾ ರವಿಚಂದ್ರ, ಚೆನ್ನಮ್ಮ, ಗಾಯತ್ರಿ ಮಂಜುನಾಥ್, ವಿಜಯಲಕ್ಷ್ಮಿ, ನೇತ್ರಾವತಿ, ಪುಷ್ಪ ಪಾಲಾಕ್ಷಯ್ಯ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಸೂಚನೆ: ರಾಜಕೀಯ ಮುಖಂಡರ ಹೇಳಿಕೆಗಳನ್ನು ಅವರವರ ಅಭಿಪ್ರಾಯಗಳೆಂದು ಉಲ್ಲೇಖಿಸಿ, ಮೂಲ ವರದಿಯ ಆಶಯ ಮತ್ತು ವಿವರಗಳನ್ನು ಉಳಿಸಿಕೊಂಡು ಭಾಷಾ ತಿದ್ದುಪಡಿ ಮಾಡಲಾಗಿದೆ.

Leave a Reply

Your email address will not be published. Required fields are marked *