ಕನ್ನಡಿಗರಿಗೆ ಐಟಿ-ಬಿಟಿ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಾವಕಾಶ ಸಿಗಬೇಕು: ಸಚಿವ ಕೃಷ್ಣ ಬೈರೇಗೌಡ
ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಲು ಸರ್ಕಾರದ ಪ್ರಯತ್ನ: ಸಚಿವರ ಹೇಳಿಕೆ
Tumkurnews.in
ತುಮಕೂರು : ರಾಜ್ಯದ ಐಟಿ-ಬಿಟಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯಬೇಕು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಜಿಲ್ಲಾಡಳಿತದ ವತಿಯಿಂದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಐಟಿ-ಬಿಟಿ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷಿಕರಿಗೆ ಉದ್ಯೋಗದಲ್ಲಿ ಆದ್ಯತೆ ದೊರಕಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಜಿಎಸ್ಟಿ ವ್ಯವಸ್ಥೆಯಲ್ಲಿ ಬದಲಾವಣೆ ತಂದ ನಂತರ ರಾಜ್ಯದ ಆದಾಯ ಕಡಿತಗೊಂಡಿದೆ. ದೇಶದಲ್ಲೇ ಕರ್ನಾಟಕವು ಹೆಚ್ಚಿನ ಪ್ರಮಾಣದಲ್ಲಿ ಜಿಎಸ್ಟಿ ಪಾವತಿಸುವ ರಾಜ್ಯಗಳಲ್ಲಿ ಒಂದಾಗಿದೆ. ಬೆಂಗಳೂರು ನಗರವು ಅತಿ ಹೆಚ್ಚು ಆದಾಯ ತೆರಿಗೆ ಸಂಗ್ರಹವಾಗುವ ನಗರಗಳಲ್ಲಿ ಎರಡನೇ ಸ್ಥಾನದಲ್ಲಿದ್ದರೂ, ರಾಜ್ಯಕ್ಕೆ ದೊರೆಯುವ ತೆರಿಗೆಯ ಪಾಲು ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದು ಅಭಿಪ್ರಾಯಪಟ್ಟರು.
ಕೇಂದ್ರ ಸರ್ಕಾರವು ಅಭಿವೃದ್ಧಿಯಲ್ಲಿ ಹಿಂದುಳಿದ ರಾಜ್ಯಗಳಿಗೂ ಅಗತ್ಯ ನೆರವು ನೀಡಬೇಕು. ಆದರೆ, ಕರ್ನಾಟಕದಿಂದ ಸಂಗ್ರಹವಾಗುವ ತೆರಿಗೆ ಹಣದಲ್ಲಿ ರಾಜ್ಯಕ್ಕೆ ಸಮರ್ಪಕ ಪಾಲು ದೊರೆಯುವುದು ಅತ್ಯಗತ್ಯ. ಇತರ ರಾಜ್ಯಗಳ ಅಭಿವೃದ್ಧಿಗೆ ಕರ್ನಾಟಕದ ತೆರಿಗೆ ಹಣವನ್ನು ವ್ಯಯಿಸಲಾಗುತ್ತಿದೆ. ಹೆದ್ದಾರಿಗಳ ನಿರ್ಮಾಣ ಸೇರಿದಂತೆ ದೇಶದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯದ ತೆರಿಗೆ ಆದಾಯ ಬಳಕೆಯಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ಆರ್ಥಿಕವಾಗಿ ಬಲಿಷ್ಠವಾದರೆ ದೇಶದ ಆರ್ಥಿಕ ಬೆಳವಣಿಗೆಗೂ ಹೆಚ್ಚಿನ ಶಕ್ತಿ ದೊರೆಯುತ್ತದೆ. ಆದ್ದರಿಂದ ರಾಜ್ಯ ಪಾವತಿಸುವ ತೆರಿಗೆಗೆ ಅನುಗುಣವಾಗಿ ಹೆಚ್ಚಿನ ಪಾಲು ದೊರೆಯಬೇಕು. ಇದರಿಂದ ಕರ್ನಾಟಕಕ್ಕೆ ನ್ಯಾಯ ದೊರೆಯುವುದರ ಜೊತೆಗೆ ದೇಶದ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದರು.
ಭಾಷೆ ಮತ್ತು ಸಂಸ್ಕೃತಿಯ ಆಧಾರದಲ್ಲಿ ಜನರನ್ನು ವಿಭಜಿಸುವ ಬದಲು ಎಲ್ಲ ಭಾಷೆ ಹಾಗೂ ಸಂಸ್ಕೃತಿಗಳಿಗೆ ಸಮಾನ ಗೌರವ ನೀಡಬೇಕು. ಪರಸ್ಪರ ಗೌರವ ಮತ್ತು ಸಹಬಾಳ್ವೆಯಿಂದ ಮಾತ್ರ ಎಲ್ಲರೂ ಒಗ್ಗಟ್ಟಿನಿಂದ ಬದುಕಲು ಸಾಧ್ಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಚಿವ ಡಾ. ಜಿ. ಪರಮೇಶ್ವರ್ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಶೀಘ್ರ ಗುಣಮುಖರಾಗಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು.
ತಾಲ್ಲೂಕು ಮಟ್ಟದ 24 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ
ತುಮಕೂರು (ಕ.ವಾ.) ನ. 1: ಜಿಲ್ಲಾಡಳಿತದ ವತಿಯಿಂದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತುಮಕೂರು ತಾಲ್ಲೂಕು ಮಟ್ಟದ ವಿವಿಧ ಕ್ಷೇತ್ರಗಳ 24 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರಂಗಭೂಮಿ ಕ್ಷೇತ್ರದಲ್ಲಿ ರಾಮೇಗೌಡನಪಾಳ್ಯದ ಡಿ. ಬೀರಪ್ಪ, ಕೋರ ಗ್ರಾಮದ ಸೋಮಶೇಖರಯ್ಯ ಕೆ.ಸಿ. ಹಾಗೂ ಎಸ್.ಎನ್. ಪಾಳ್ಯದ ಸಿದ್ದರಾಜು ಎ.; ಮಾಧ್ಯಮ ಕ್ಷೇತ್ರದಲ್ಲಿ ಮೆಳೇಹಳ್ಳಿಯ ಎಂ.ಇ. ಕುಮಾರಸ್ವಾಮಿ, ಸತ್ಯಮಂಗಲದ ಸುನಿಲ್ ಕುಮಾರ್ ಎಸ್.ವಿ., ತಿಪ್ಪನಹಳ್ಳಿಯ ಟಿ.ಆರ್. ಮೋಹನ್ ಕುಮಾರ್ ಹಾಗೂ ಹೆಬ್ಬಾಕದ ಸಿದ್ದರಾಮು ಹೆಚ್.ಟಿ. ಪ್ರಶಸ್ತಿಗೆ ಭಾಜನರಾದರು.
ಕನ್ನಡಪರ ಸಂಘಟನೆ ಒಕ್ಕೂಟದಿಂದ ಜಯಪುರದ ಶಿವರಾಜ್, ಭಗತ್ ಕ್ರಾಂತ್ ಸೇನೆಯಿಂದ ಗೋಕುಲ ಬಡಾವಣೆಯ ಹೇಮಂತ್ ಎ.ಆರ್., ಜಯಕರ್ನಾಟಕ ಜನಪರ ವೇದಿಕೆಯಿಂದ ನಿರ್ವಾಣಿ ಲೇಔಟ್ನ ಅಖಿಲೇಶ್ ಎಲ್. ಹಾಗೂ ಕನ್ನಡ ರಕ್ಷಣಾ ವೇದಿಕೆಯಿಂದ ಸಿದ್ದೇಶ್ವರ ನಗರದ ಹೇಮಂತ್ ಕುಮಾರ್ ಎನ್. ಅವರನ್ನು ಗೌರವಿಸಲಾಯಿತು.
ಕ್ರೀಡಾ ಕ್ಷೇತ್ರದಲ್ಲಿ ಸರ್ವೋದಯ ಪಿ.ಯು. ಕಾಲೇಜಿನ ಕುಮಾರ ಲಿಹಾಲ್ ಮುಥು, ಮಾರುತಿನಗರದ ಕಾವ್ಯಶ್ರೀ ಹಾಗೂ ಚೌಡೇಶ್ವರಿನಗರದ ಈಜು ತರಬೇತುದಾರ ಆರ್.ಎಂ. ಶಿವಕುಮಾರ್; ಸಂಗೀತ ಕ್ಷೇತ್ರದಲ್ಲಿ ರಾಘವೇಂದ್ರ ಕಾಲೋನಿಯ ಡಾ. ಆರ್. ಗುರುಪ್ರಸಾದ್ ಹಾಗೂ ಎಂ.ಸಿ. ಕಾಲೋನಿಯ ರಾಘವೇಂದ್ರ ಹೆಚ್.; ಛಾಯಾಗ್ರಹಣ ಕ್ಷೇತ್ರದಲ್ಲಿ ಎಸ್.ಎಸ್. ಪುರಂನ ರವಿಕುಮಾರ್ ಸಿ.ಎನ್. ಪ್ರಶಸ್ತಿ ಪಡೆದರು.
ಶಿಕ್ಷಣ ಕ್ಷೇತ್ರದಲ್ಲಿ ಮೆಳೇಕೋಟೆಯ ವಿಶ್ವಭಾರತಿ ಪ್ರೌಢಶಾಲೆಯ ಎಂ.ಎಸ್. ಪರಮೇಶ್ವರಯ್ಯ, ಮನೆಮನೆಗೆ ಕನ್ನಡ ದಿನಪತ್ರಿಕೆ ಹಂಚುವ ಮೂಲಕ ಕನ್ನಡ ಸೇವೆ ಸಲ್ಲಿಸುತ್ತಿರುವ ಗುಡಿಪಾಳ್ಯದ ರಂಗಮುತ್ತಯ್ಯ ಎನ್.ಎಂ., ಸಮಾಜ ಸೇವೆಯಲ್ಲಿ ಭೋವಿಪಾಳ್ಯದ ಶಿವಕುಮಾರ್, ಚಿತ್ರಕಲೆಯಲ್ಲಿ ಬಿಟ್ಟಿನಕುರಿಕೆಯ ಕುಮಾರ ಲಿಖಿತ್, ಬೀದಿಬದಿ ವ್ಯಾಪಾರಿಗಳ ಸೇವೆ ಮತ್ತು ಸಂಘಟನೆಯಲ್ಲಿ ಮರಳೂರು ದಿಣ್ಣೆಯ ಎಂ. ಗೋಪಿ ಹಾಗೂ ಸಮಾಜಕಾರ್ಯ ಸಂಶೋಧಕ ಮತ್ತು ಕನ್ನಡ ಪುಸ್ತಕಗಳ ಲೇಖಕ, ಸಂಪಾದಕರಾಗಿ ಮಾರುತಿನಗರದ ಡಾ. ವೇಣುಗೋಪಾಲ ಜಿ.ಎಸ್. ಹಾಗೂ ಕಲಾ ಕ್ಷೇತ್ರದಲ್ಲಿ ಸುರೇಶ್ ಎಂ. ಅವರನ್ನು ಗಣ್ಯರು ಸ್ಮರಣಿಕೆ ನೀಡಿ ಸನ್ಮಾನಿಸಿದರು.
