ಕನ್ನಡದ ಬಗ್ಗೆ ಪ್ರೀತಿ, ಅಭಿಮಾನವಿರಲಿ: ಕೋರಿ ಮಂಜುನಾಥ್

ಜಿಲ್ಲಾ ಸುದ್ದಿ ತಾಲ್ಲೂಕು ತುಮಕೂರು ನಗರ ಪ್ರಮುಖ ಸುದ್ದಿ

ಕನ್ನಡದ ಬಗ್ಗೆ ಪ್ರೀತಿ, ಅಭಿಮಾನವಿರಲಿ: ಕೋರಿ ಮಂಜುನಾಥ್

ರೇಣುಕಾ ವಿದ್ಯಾಪೀಠದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Tumkurnews.in

ತುಮಕೂರು: ಇತ್ತೀಚಿನ ದಿನಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಹಾಗೂ ಕನ್ನಡ ಭಾಷೆಯ ಬಳಕೆಯ ಬಗ್ಗೆ ಅಸಡ್ಡೆ ಹೆಚ್ಚಾಗುತ್ತಿದೆ. ಇದರಿಂದ ಕನ್ನಡ ಭಾಷೆಯ ಬೆಳವಣಿಗೆಗೆ ಧಕ್ಕೆಯಾಗಲಿದೆ. ಕನ್ನಡ ಕಲಿಕೆ ಮತ್ತು ಬಳಕೆ ಹೆಚ್ಚಾಗಬೇಕು. ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ ಎಂದು ನಗರ ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್ ಹೇಳಿದರು.

ಸಮಾಜದ ರೇಣುಕಾ ವಿದ್ಯಾಪೀಠ ಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ, ಧ್ವಜವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಮಾತೃಭಾಷೆ ಕನ್ನಡವನ್ನು ಅಭಿಮಾನದಿಂದ ಬಳಸಬೇಕು. ಕನ್ನಡಿಗರ ತನುಮನದಲ್ಲಿ ಕನ್ನಡಪ್ರೇಮ ತುಂಬಬೇಕು. ಪೋಷಕರು ಹಾಗೂ ಶಿಕ್ಷಕರು ಮಕ್ಕಳಲ್ಲಿ ಕನ್ನಡಾಭಿಮಾನ ಬೆಳೆಸಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಚಾರ್ಯ ಕೆ.ಎಸ್. ಜಗದೀಶ್ ಅವರು, ಜಿ.ಎಸ್. ಶಿವರುದ್ರಪ್ಪ ಅವರ ‘ಪ್ರೀತಿ ಇಲ್ಲದ ಮೇಲೆ ಹೂ ಅರಳೀತು ಹೇಗೆ’ ಎಂಬ ಮಾತನ್ನು ಉಲ್ಲೇಖಿಸಿ, ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಗೆ ತನ್ನದೇ ಆದ ಸಾಂಸ್ಕೃತಿಕ ಹಿರಿಮೆ ಹಾಗೂ ಪರಂಪರೆ ಇದೆ. ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ಅನೇಕ ಸಾಹಿತಿಗಳು ಹಾಗೂ ಕಲಾವಿದರು ಕನ್ನಡದ ಘನತೆಯನ್ನು ಸಾರಿದ್ದಾರೆ. ಇಂತಹ ಶ್ರೀಮಂತ ಭಾಷೆಯ ಮಹತ್ವವನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಟಿ.ಆರ್. ಲೋಕೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ನಾಡು ಹಾಗೂ ಭಾಷೆಯ ಬೆಳವಣಿಗೆಗೆ ಕೊಡುಗೆ ನೀಡಿದ ಮಹನೀಯರನ್ನು ರಾಜ್ಯೋತ್ಸವ ಸಂದರ್ಭದಲ್ಲಿ ಗೌರವದಿಂದ ಸ್ಮರಿಸಬೇಕು ಎಂದರು.

ಸಂಸ್ಥೆಯ ಕಾರ್ಯದರ್ಶಿ ಟಿ.ಜೆ. ಗಿರೀಶ್, ನಿರ್ದೇಶಕರಾದ ಎಂ.ಬಿ. ಸದಾಶಿವಯ್ಯ ಸೇರಿದಂತೆ ಇತರೆ ನಿರ್ದೇಶಕರು, ಆಡಳಿತ ಮಂಡಳಿ ಪದಾಧಿಕಾರಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *