ಮೈಸೂರು ದಸರಾ ಮಾದರಿಯಲ್ಲೇ ಕಲ್ಪತರು ನಾಡು ತುಮಕೂರು

ಜಿಲ್ಲಾ ಸುದ್ದಿ ತಾಲ್ಲೂಕು ತುಮಕೂರು ನಗರ ಪ್ರಮುಖ ಸುದ್ದಿ

ವಿಶ್ವವಿಖ್ಯಾತ ಮೈಸೂರು ದಸರಾ ಮಾದರಿಯಲ್ಲೇ ಕಲ್ಪತರುನಾಡು ತುಮಕೂರು

tumkurnews.in

ತುಮಕೂರು:ವಿಶ್ವವಿಖ್ಯಾತ ಮೈಸೂರು ದಸರಾ ಮಾದರಿಯಲ್ಲೇ ಕಲ್ಪತರುನಾಡು ತುಮಕೂರಿನಲ್ಲಿ ೧೧ ದಿನಗಳ ಕಾಲ ವೈಭವೋಪೇತವಾಗಿ ಹಮ್ಮಿಕೊಂಡಿದ್ದ ತುಮಕೂರು ದಸರಾ ಅಂಗವಾಗಿ ಜಂಬೂಸವಾರಿ ಅತ್ಯಂತ ಅದ್ದೂರಿಯಾಗಿ ನಡೆಯಿತು.
ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ನೇತೃತ್ವದಲ್ಲಿ ೧೧ ದಿನಗಳ ಕಾಲ ಅದ್ದೂರಿಯಾಗಿ ತುಮಕೂರು ದಸರಾ ಉತ್ಸವ ನಡೆದಿದ್ದು, ವಿಜಯದಶಮಿಯ ದಿನವಾದ ಇಂದು ಮೈಸೂರು ಮಾದರಿಯಲ್ಲೇ ಅಂಬಾರಿ ಹೊತ್ತ ಆನೆಯೊಂದಿಗೆ ಜಂಬೂ ಸವಾರಿ ವೈಭವಯುತವಾಗಿ ನಡೆಯಿತು.
ನಗರದ ಟೌನ್‌ಹಾಲ್ ವೃತ್ತದಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಮಧ್ಯಾಹ್ನ ನಂದಿಧ್ವಜಕ್ಕೆ ಹಾಗೂ ಅಂಬಾರಿಯಲ್ಲಿ ಕೂರಿಸಿದ್ದ ಚಾಮುಂಡೇಶ್ವರಿ ತಾಯಿಗೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸುವ ಮೂಲಕ ಜಂಬೂಸವಾರಿ ಮೆರವಣಿಗೆಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು.

ಟೌನ್‌ಹಾಲ್ ವೃತ್ತದಿಂದ ಆರಂಭವಾದ ಜಂಬೂಸವಾರಿ ಮೆರವಣಿಗೆಯಲ್ಲಿ ಮಡಿಕೇರಿಯ ಲಕ್ಷ್ಮೀ ಚಾಮುಂಡೇಶ್ವರಿ ದೇವಿ ಕೂರಿಸಿದ್ದ ಅಂಬಾರಿ ಹೊತ್ತು ಹೆಜ್ಜೆ ಹಾಕಿದರೆ, ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಲಕ್ಷ್ಮೀ ಹಾಗೂ ತುಮಕೂರಿನ ಕರಿಬಸವೇಶ್ವರ ಮಠದ ಲಕ್ಷ್ಮೀ ಆನೆಗಳು ಅಂಬಾರಿ ಹೊತ್ತಿದ್ದ ಲಕ್ಷ್ಮೀ ನ ಅಕ್ಕಪಕ್ಕದಲ್ಲಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ನಗರದ ಸುಮಾರು ೫೦ಕ್ಕೂ ಅಧಿಕ ದೇವಾಲಯಗಳ ಉತ್ಸವ ಮೂರ್ತಿಗಳು ಜಂಬೂಸವಾರಿಯಲ್ಲಿ ಪಾಲ್ಗೊಂಡು ಮೆರವಣಿಗೆಯಲ್ಲಿ ಮೆರಗನ್ನು ಮತ್ತಷ್ಟು ಹೆಚ್ಚಿಸಿದವು. ಇದರೊಂದಿಗೆ ಎತ್ತಿನ ಗಾಡಿಗಳು, ಪೊಲೀಸ್ ಕುದುರೆಗಳು ಪಾಲ್ಗೊಂಡಿದ್ದ ನೋಡುಗರ ಗಮನ ಸೆಳೆಯಿತು.
ಟೌನ್‌ಹಾಲ್ ವೃತ್ತದಿಂದ ಆರಂಭವಾದ ಜಂಬೂಸವಾರಿಯಲ್ಲಿ ಭಾಗವಹಿಸಿದ್ದ ಚಂಡೇವಾದ್ಯ, ಯಕ್ಷಗಾನ, ಕಥಕ್ಕಳಿ, ವೀರಗಾಸೆ, ನಂದಿಧ್ವಜ, ಹುಲಿ ವೇಷ, ಶಿವಪಾರ್ವತಿ, ಪೂಜಾ ಕುಣಿತ, ಸೋಮನ ಕುಣಿತ, ಚಿಟ್ಟಿಮೇಳ, ನಾಸಿಕ್ ಡೋಲು, ಗೊರವರ ಕುಣಿತ, ಚಂಡೇವಾದ್ಯ, ಗಾರುಡಿಗೊಂಬೆ, ಕೀಲು ಕುದುರೆ, ಕಂಸಾಳೆ, ಕೋಲಾಟ, ಅರೇವಾದ್ಯ ಸೇರಿದಂತೆ ಸುಮಾರು ೨೫ಕ್ಕೂ ಹೆಚ್ಚು ಕಲಾ ತಂಡಗಳ ಪ್ರದರ್ಶನ ರಸ್ತೆಯ ಇಕ್ಕೆಲಗಳಲ್ಲಿ ಅಪಾರ ಸಂಖ್ಯೆಯಲ್ಲಿ ಕಿಕ್ಕಿರಿದು ಸೇರಿದ್ದ ಜನರನ್ನು ಆಕರ್ಷಿಸಿತು. ಜತೆಗೆ ಕಲ್ಪತರುನಾಡಿನಲ್ಲ ಸಾಂಸ್ಕೃತಿಕ ವೈಭವವನ್ನು ಮೇಳೈಸಿದೆ.

ಸುಡು ಬಿಸಿಲನ್ನು ಲೆಕ್ಕಿಸದೇ ಜಂಬೂಸವಾರಿ ಮೆರವಣಿಗೆಯಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸೇರಿದಂತೆ ಜಿಲ್ಲಾಡಳಿತ ಅಧಿಕಾರಿಗಳು, ಜನಪ್ರತಿನಿಧಿಗಳು ಹೆಜ್ಜೆ ಹಾಕಿದ್ದು ಕಂಡು ಬಂತು.

ಜಂಬೂ ಸವಾರಿಯಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಶಾಸಕರಾದ ಟಿ.ಬಿ. ಜಯಚಂದ್ರ, ಜ್ಯೋತಿಗಣೇಶ್, ಕನ್ನಿಕಾ ಪರಮೇಶ್ವರ್, ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿ.ಪಂ. ಸಿಇಓ ಅಶ್ವಿಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ಅಡಿಷನಲ್ ಎಸ್ಪಿಗಳಾದ ಗೋಪಾಲ್, ಪುರುಷೋತ್ತಮ್, ಮಹಾನಗರ ಪಾಲಿಕೆ ಆಯುಕ್ತೆ ಶುಭ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಡಾ. ಸಿದ್ದರಾಮಣ್ಣ, ತಹಶೀಲ್ದಾರ್ ರಾಜೇಶ್ವರಿ ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *