ಅಂತರಂಗದ ಶತ್ರು ನಾಶಕ್ಕೆ ಜ್ಞಾನವೇ ಆಯುಧ: ಮಲಯಶಾಂತಮುನಿ ಶ್ರೀ
ವೀರಶೈವ ಸಮಾಜದಿಂದ ವೈಭವದ ಶಮಿಪೂಜೆ, ದೇವರುಗಳ ಉತ್ಸವ
tumkurnews.in
ತುಮಕೂರು: ಭಾರತೀಯ ಸಂಸ್ಕೃತಿ ವಿಶ್ವದಲ್ಲೇ ವಿಶೇಷವಾದದ್ದು. ಹಲವು ಜಾತಿ-ಧರ್ಮ, ಹಲವು ಭಾಷೆ, ಹಲವು ಸಂಸ್ಕೃತಿ ಒಳಗೊಂಡ ಭಾರತದಲ್ಲಿ ಐಕ್ಯತೆ ಮೂಡಿಸುವುದು ಕಷ್ಟದ ಕೆಲಸ ಆದರೆ, ಕುವೆಂಪು ಹೇಳಿದಂತೆ ಸರ್ವಜನಾಂಗದ ಶಾಂತಿಯ ತೋಟದಂತೆ ನಾವು ಏಕತೆಯ ಪ್ರವೃತ್ತಿ ಬೆಳೆಸಿಕೊಂಡಾದ ಸಾಧ್ಯವಾಗುತ್ತದೆ ಎಂದು ಶಿವಗಂಗಾ ಕ್ಷೇತ್ರದ ಮೇಲಣಗವಿ ಸಂಸ್ಥಾನ ಮಠದ ಡಾ. ಮಲಯಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿಯಿಂದ ದಸರಾ ಮಹೋತ್ಸವದ ಅಂಗವಾಗಿ ಬುಧವಾರ ನಗರದ ರೇಣುಕಾ ವಿದ್ಯಾಪೀಠ ಆವರಣದ ಮಹಾನಮಿ ಮಂಟಪದಲ್ಲಿ ಹಮ್ಮಿಕೊಂಡಿದ್ದ ವಿಜಯದಶಮಿಯ ಶಮಿ ಪೂಜೆ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಸ್ವಾಮೀಜಿ, ವೈಯಕ್ತಿಕ ಪ್ರತಿಷ್ಠೆ ದೂರವಿರಿಸಿ ಸಮಾಜಕ್ಕೆ ಸಂಪೂರ್ಣ ತೊಡಗಿಸಿಕೊಂಡರೆ ಐಕ್ಯತೆ ಕಾಪಾಡಲು ಸಾಧ್ಯವಾಗುತ್ತದೆ ಎಂದರು.
ವಿಜಯನಗರ ಅರಸರ ಕಾಲದಲ್ಲಿ ತುಂಗಾನದಿ ದಡದಲ್ಲಿ ಆರಂಭವಾದ ದಸರಾ ಉತ್ಸವ ನಂತರ ಮೈಸೂರು ಅರಸರ ಕಾಲದಲ್ಲಿ ಕಾವೇರಿ ನದಿ ತೀರಕ್ಕೆ ಸ್ಥಳಾಂತರಗೊಂಡು ಅಂದಿನಿಂದ ಇಂದಿನವರೆಗೂ ದಸರಾವನ್ನು ನಾಡಹಬ್ಬವನ್ನಾಗಿ ಆಚರಿಸುತ್ತಿದ್ದೇವೆ, ಈ ಹಬ್ಬದ ಆಯುಧಪೂಜೆಗೆ ಹಿನ್ನೆಲೆ ಇದೆ. ರಾಜ್ಯ ಸಂರಕ್ಷಣೆಗೆ ಶತ್ರುಗಳನ್ನು ಕೊಲ್ಲಲು ಆಗಿನ ಮಹಾರಾಜರು ಆಯುಧ ಬಳಸುತ್ತಿದ್ದರು. ಈಗ ನಾವು ನಮ್ಮ ಅಂತರಂಗದ ಶತ್ರುಗಳನ್ನು ನಾಶ ಮಾಡಲು ಜ್ಞಾನವೆಂಬ ಆಯುಧ ಬಳಸಬೇಕು. ಅಂತರಂಗದ ಕೋಪ, ದ್ವೇಷ, ಮದ-ಮತ್ಸರ, ಅಸೂಯೆ ಗುಣಗಳ ಶತ್ರುಗಳ ಹರಣ ಮಾಡಬೇಕು. ಜಗತ್ತಿನ ಸಾಧಕರು ಶತ್ರುಗಳ ಮೇಲೆ ಸಮರ ಸಾರಿ ಸಾಧನೆ ಮಾಡಿಲ್ಲ, ಮಹಾತ್ಮರು, ಸಂತರು, ಶರಣರು ತಮ್ಮ ಜ್ಞಾನದ ಮೂಲಕ ಅಂತರಂಗದ ಶತ್ರುಗಳನ್ನು ನಾಶ ಮಾಡಿ ಸಾಧನೆ ಮಾಡಿದ್ದಾರೆ ಎಂದು ಡಾ. ಮಲಯಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರ ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್ ಮಾತನಾಡಿ, ರಾಜ್ಯ, ದೇಶ, ಜನರು ಸುಖ, ಸೌಖ್ಯದಿಂದ ಬಾಳಬೇಕು ಎನ್ನುವ ಕಾರಣಕ್ಕೆ ಶಮಿ ಪೂಜೆ ಮಾಡಲಾಗುತ್ತದೆ. ಈಗ ಎಲ್ಲೆಡೆ ಅಕ್ರಮ, ದೌರ್ಜನ್ಯ, ಕ್ರೌರ್ಯ ಹೆಚ್ಚಾಗುತ್ತಿದೆ. ಧರ್ಮಾಚರಣೆಯಲ್ಲಿ ರಾಜಕೀಯ ಬೆರೆತರೆ ನಾಗರೀಕ ಸಮಾಜ ದುಸ್ಥಿತಿಗೆ ಹೋಗುತ್ತದೆ ಎಂದರು.
ಮಠ, ದೇವಸ್ಥಾನ ಸೇರಿದಂತೆ ಧಾರ್ಮಿಕ ಕೇಂದ್ರ, ಧರ್ಮದ ಮೇಲೆ ಆಘಾತಕಾರಿ ಪ್ರಯತ್ನಗಳಾದಾಗ ಎಲ್ಲರೂ ಜಾತಿ ಮೀರಿ ಒಂದಾಗಬೇಕು. ಧರ್ಮವನ್ನು ಗೌರವಿಸಿ ಬೆಲೆ ಕೊಡಬೇಕು ಎಂದ ಕೋರಿ ಮಂಜುನಾಥ್, ವೀರಶೈವ ಸಮಾಜದಿಂದ ಪ್ರತಿವರ್ಷ ಶಮಿ ಪೂಜೆ ಆಚರಿಸಿಕೊಂಡು ಬರಲಾಗುತ್ತಿದೆ. ಸಮಾಜದ ಎಲ್ಲಾ ದೇವರುಗಳನ್ನು ಉತ್ಸವದ ಮೂಲಕ ಕರೆತಂದು ಒಂದೆಡೆ ಸೇರಿಸುವ ವಿಶೇಷ ಆಚರಣೆಯೂ ಇದಾಗಿದೆ ಎಂದು ಹೇಳಿದರು.
ಈ ವೇಳೆ ದೇಶದ ಶೆಟ್ಟರಾದ ಕೆ.ಎಸ್. ಚನ್ನಬಸಪ್ಪ ಅವರು ಶಮಿ ಪೂಜೆ ನೆರವೇರಿಸಿ ಬನ್ನಿ ಮರ ಕಡಿದು ಪೂಜೆ ಸಲ್ಲಿಸಿದರು.
ವೀರಶೈವ ಸಮಾಜಕ್ಕೆ ಸೇರಿದ ಕೋಡಿ ಬಸವೇಶ್ವರಸ್ವಾಮಿ, ಅರಳೇಪೇಟೆ ಬಸವೇಶ್ವರಸ್ವಾಮಿ, ಸುಂಕದಕಟ್ಟೆ ಬಸವೇಶ್ವರಸ್ವಾಮಿ, ಸಿದ್ಧಲಿಂಗೇಶ್ವರಸ್ವಾಮಿ, ಸಂಗಮೇಶ್ವರಸ್ವಾಮಿ, ಬೆಣ್ಣೆ ಬಸವೇಶ್ವರಸ್ವಾಮಿ, ಚಿನಿವಾರಕಟ್ಟೆ ಬಸವೇಶ್ವರಸ್ವಾಮಿ, ಕೋಟೆ ಮುದ್ದಬಸವೇಶ್ವರಸ್ವಾಮಿ ದೇವಸ್ಥಾನಗಳ ದೇವರುಗಳ ಉತ್ಸವವು ಪ್ರಮುಖ ರಸ್ತೆಗಳಲ್ಲಿ ಸಾಗಿ ಮಹಾನವಮಿ ಮಂಟಪ ಸೇರಿತು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಡಾ.ಎಸ್. ಪರಮೇಶ್, ವೀರಶೈವ ಸೌಹಾರ್ದ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೆ.ಜೆ. ರುದ್ರಪ್ಪ, ಬಸವೇಶ್ವರ ಕ್ರೆಡಿಟ್ ಕೋ-ಆಪರೇಟೀವ್ ಸೊಸೈಟಿ ಅಧ್ಯಕ್ಷ ಎಂ.ಎನ್. ಲೋಕೇಶ್, ಸ್ನೇಹಸಂಗಮ ಸೌಹಾರ್ದ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಎಸ್. ಮಂಜುನಾಥ್, ರೇಣುಕಾ ವಿದ್ಯಾಪೀಠ ಅಧ್ಯಕ್ಷ ಟಿ.ಆರ್. ಲೋಕೇಶ್, ಗುರುಕುಲ ವಿವಿದ್ಧೋಶ ಸಹಕಾರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಮೈತ್ರಿ ಸಂಘದ ಅಧ್ಯಕ್ಷೆ ಗಂಗಾ ಪರಮೇಶ್, ವೀರಶೈವ ಉಚಿತ ವೈದ್ಯಕೀಯ ಸೇವಾ ಕೇಂದ್ರ ಅಧ್ಯಕ್ಷ ಎಂ. ಅರ್ಜುನ್ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿದ್ದರು.
ನಗರ ವೀರಶೈವ ಸಮಾಜ ಸೇವಾ ಸಮಿತಿ ಉಪಾಧ್ಯಕ್ಷ ಟಿ.ಬಿ. ಹರೀಶ್, ಗೌರವ ಕಾರ್ಯದರ್ಶಿ ಟಿ.ಜೆ. ಸಿದ್ಧಲಿಂಗಸ್ವಾಮಿ, ಸಹ ಕಾರ್ಯದರ್ಶಿ ಆರ್.ಎಸ್. ಪ್ರಭು, ಖಜಾಂಚಿ ಜಿ.ಕೆ. ಸ್ವಾಮಿ ಹಾಗೂ ನಿರ್ದೇಶಕರು, ಸಮಾಜದ ವಿವಿಧ ಅಂಗಸಂಸ್ಥೆಗಳ ಪದಾಧಿಕಾರಿಗಳು, ಸಮಾಜದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
