ಮುಂದಿನ ವರ್ಷ ಇನ್ನೂ ಅದ್ಧೂರಿಯಾಗಿ ದಸರಾ ಆಚರಣೆ: ಡಾ: ಜಿ. ಪರಮೇಶ್ವರ
Tumkurnews.in
ತುಮಕೂರು: ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸಾರುವ ತುಮಕೂರು ದಸರಾ-2026 ಅತ್ಯಂತ ಅದ್ದೂರಿಯಾಗಿ, ಯಶಸ್ವಿಯಾಗಿ ಸಂಪನ್ನಗೊಂಡಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ತಿಳಿಸಿದ್ದಾರೆ.
ಹತ್ತು ದಿನಗಳ ಕಾಲ ನಡೆದ ಈ ದಸರಾ ಮಹೋತ್ಸವಕ್ಕೆ ಜನರು ತೋರಿದ ಪ್ರೀತಿ, ನೀಡಿದ ಸಹಕಾರ ಮತ್ತು ಉತ್ಸಾಹ ನಿಜಕ್ಕೂ ಅವಿಸ್ಮರಣೀಯ. ಮಕ್ಕಳು, ಹಿರಿಯರು, ಮಹಿಳೆಯರು, ಯುವಕರು ಹೀಗೆ ಎಲ್ಲ ವಯೋಮಾನದವರು ಕುಟುಂಬ ಸಮೇತರಾಗಿ ಬಂದು ಸಂಭ್ರಮಿಸಿದ್ದು, ತುಮಕೂರು ದಸರಾವನ್ನು ತಮ್ಮ ಮನೆಯ ಹಬ್ಬದಂತೆ ಆಚರಿಸಿದ್ದು, ನನಗೆ ಅಪಾರ ಸಂತೋಷ ತಂದಿದೆ ಎಂದು ತಿಳಿಸಿದ್ದಾರೆ.
ಈ ಬೃಹತ್ ಮಹೋತ್ಸವದ ಯಶಸ್ಸಿನ ಹಿಂದೆ ಅಸಂಖ್ಯಾತ ಜನರ ಪರಿಶ್ರಮ, ಸಹಕಾರ ಮತ್ತು ಸಮರ್ಪಣಾಭಾವವಿದೆ. ಕಾರ್ಯಕ್ರಮಗಳ ಸಿದ್ಧತೆಯಿಂದ ಹಿಡಿದು, ಜನರ ಸುರಕ್ಷತೆ, ಸ್ವಚ್ಛತೆ, ವ್ಯವಸ್ಥೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯವರೆಗೆ ಪ್ರತಿಯೊಂದು ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಅಧಿಕಾರಿಗಳು, ಸಿಬ್ಬಂದಿ ವರ್ಗ, ಪೌರಕಾರ್ಮಿಕರು, ಕಲಾವಿದರು, ಸಂಘ-ಸಂಸ್ಥೆಗಳು, ಸ್ವಯಂಸೇವಕರು, ಮಾಧ್ಯಮ ಮಿತ್ರರು ಹಾಗೂ ಸಹಕರಿಸಿದ ಪ್ರತಿಯೊಬ್ಬರಿಗೂ ನನ್ನ ಹೃದಯಾಂತರಾಳದ ಕೃತಜ್ಞತೆಗಳು.
ವಿಶೇಷವಾಗಿ ತುಮಕೂರಿನ ಜನತೆಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಕಡಿಮೆಯೇ. ಒಂದು ಕಾರ್ಯಕ್ರಮವನ್ನು ಆಯೋಜಿಸಬಹುದು. ಆದರೆ ಅದನ್ನು ಇಡೀ ಜನತೆಯ ಹಬ್ಬವನ್ನಾಗಿ ಮಾಡುವುದು ಜನರ ಪ್ರೀತಿ ಮತ್ತು ಸಹಭಾಗಿತ್ವದಿಂದ ಮಾತ್ರ ಸಾಧ್ಯ. ತುಮಕೂರು ದಸರಾ ಅದಕ್ಕೆ ಸಾಕ್ಷಿಯಾಗಿದೆ.
ಈ ಯಶಸ್ಸಿನ ಹೆಮ್ಮೆ ನಮ್ಮೆಲ್ಲರದ್ದು. ಈ ಸಂಭ್ರಮದ ನೆನಪುಗಳು ನಮ್ಮೆಲ್ಲರದ್ದು. ನಿಮ್ಮೆಲ್ಲರ ಪ್ರೀತಿ, ಸಹಕಾರ ಮತ್ತು ಆಶೀರ್ವಾದದೊಂದಿಗೆ ಮುಂದಿನ ವರ್ಷ ತುಮಕೂರು ದಸರಾವನ್ನು ಇನ್ನಷ್ಟು ಅದ್ದೂರಿಯಾಗಿ, ಮತ್ತಷ್ಟು ವಿಜೃಂಭಣೆಯಿಂದ ಆಚರಿಸೋಣ. ನಮ್ಮ ನಾಡಿನ ಕಲೆ, ಸಂಸ್ಕೃತಿ ಮತ್ತು ಪರಂಪರೆಯ ವೈಭವವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯೋಣ ಎಂದು ಅವರು ತಿಳಿಸಿದ್ದಾರೆ.
