ಸರ್ಕಾರಿ ಬಾಲಮಂದಿರ: ಅರೆಕಾಲಿಕ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ
Tumkurnews.in
ತುಮಕೂರು: ಸರ್ಕಾರಿ ಬಾಲಮಂದಿರಗಳಲ್ಲಿ ಮಕ್ಕಳಿಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಕಲಿಸಲು ಗೌರವಧನದ ಆಧಾರದ ಮೇಲೆ 25ರಿಂದ 45 ವರ್ಷ ವಯೋಮಾನದ ನಾಲ್ವರು ಮಹಿಳಾ ಶಿಕ್ಷಕರನ್ನು ಮೂರು ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪವಿತ್ರ ತಿಳಿಸಿದ್ದಾರೆ.
ಇಂಗ್ಲಿಷ್, ಗಣಿತ ಮತ್ತು ವಿಜ್ಞಾನ, ದೈಹಿಕ ಶಿಕ್ಷಣ ಮತ್ತು ಯೋಗ ಹಾಗೂ ಸಂಗೀತ ಮತ್ತು ಕ್ರಾಫ್ಟ್ ವಿಷಯಗಳ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಈ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಆಸಕ್ತರು ಭರ್ತಿ ಮಾಡಿದ ಅರ್ಜಿಯನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮೊದಲನೇ ಮಹಡಿ, ಮಹಾತ್ಮ ಗಾಂಧಿ ಕ್ರೀಡಾಂಗಣ, ಕುವೆಂಪು ನಗರ, ತುಮಕೂರು ಇವರಿಗೆ ಡಿಸೆಂಬರ್ 24ರೊಳಗಾಗಿ ಸಲ್ಲಿಸಬಹುದು.
ಅರ್ಜಿದಾರರು ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿಯಿಂದ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯೊಂದಿಗೆ ಸ್ವವಿವರ, ವಿದ್ಯಾರ್ಹತೆ ಮತ್ತು ಕಾರ್ಯಾನುಭವದ ಪ್ರಮಾಣಪತ್ರಗಳು, ಆಧಾರ್ ಕಾರ್ಡ್, ಇತ್ತೀಚಿನ ಎರಡು ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳು ಹಾಗೂ ಇತರ ಅಗತ್ಯ ದಾಖಲೆಗಳನ್ನು ಲಗತ್ತಿಸಬೇಕು.
ಆಯ್ಕೆಯಾದ ಅಭ್ಯರ್ಥಿಗಳು ಕಡ್ಡಾಯವಾಗಿ ಪೊಲೀಸ್ ಪರಿಶೀಲನಾ ವರದಿಯನ್ನು ಸಲ್ಲಿಸಬೇಕು. ಪ್ರತಿದಿನ ಎರಡು ಗಂಟೆಗಳಂತೆ ವಾರದಲ್ಲಿ ಆರು ದಿನಗಳ ಕಾಲ ಕಾರ್ಯನಿರ್ವಹಿಸಬೇಕು. ಆಯ್ಕೆ ಸಮಿತಿ ನಿಗದಿಪಡಿಸಿದ ಷರತ್ತುಗಳಿಗೆ ಬದ್ಧರಾಗಿರುವುದಾಗಿ 100 ರೂ.ಗಳ ಛಾಪಾ ಕಾಗದದಲ್ಲಿ ದೃಢೀಕರಣ ಪತ್ರವನ್ನು ಸಲ್ಲಿಸಬೇಕು.
ಇಂಗ್ಲಿಷ್ ಹಾಗೂ ಗಣಿತ ಮತ್ತು ವಿಜ್ಞಾನ ವಿಷಯಗಳ ಶಿಕ್ಷಕರ ಹುದ್ದೆಗೆ ಐಚ್ಛಿಕ ವಿಷಯದಲ್ಲಿ ಬಿ.ಇಡಿ. ಪದವಿ ಹೊಂದಿರಬೇಕು. ದೈಹಿಕ ಶಿಕ್ಷಣ ಮತ್ತು ಯೋಗ ಶಿಕ್ಷಕರ ಹುದ್ದೆಗೆ ಬಿ.ಪಿ.ಎಡ್., ಎಂ.ಪಿ.ಎಡ್. ಅಥವಾ ಸಂಬಂಧಿಸಿದ ವಿಷಯದಲ್ಲಿ ಅನುಭವ ಹೊಂದಿರಬೇಕು. ಸಂಗೀತ ಮತ್ತು ಕ್ರಾಫ್ಟ್ ವಿಷಯಗಳ ಶಿಕ್ಷಕರ ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ ತರಬೇತಿ ಅಥವಾ ಅನುಭವ ಹೊಂದಿರಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0816-2956699 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
