ನಾರಾಯಣ ಗುರು ನಿಗಮಕ್ಕೆ ಅನುದಾನ ನೀಡಿ, ಪ್ರತಿಮೆ ಸ್ಥಾಪಿಸಿ; ಸೇಂದಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ: ಪ್ರಣವಾನಂದ ಸ್ವಾಮೀಜಿ ಆಗ್ರಹ

ಜಿಲ್ಲಾ ಸುದ್ದಿ ತಾಲ್ಲೂಕು ತುಮಕೂರು ನಗರ ಪ್ರಮುಖ ಸುದ್ದಿ

ನಾರಾಯಣ ಗುರು ನಿಗಮಕ್ಕೆ ಅನುದಾನ ನೀಡಿ, ಪ್ರತಿಮೆ ಸ್ಥಾಪಿಸಿ; ಸೇಂದಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ: ಪ್ರಣವಾನಂದ ಸ್ವಾಮೀಜಿ ಆಗ್ರಹ

Tumkurnews.in

ತುಮಕೂರು: ಬ್ರಹ್ಮಶ್ರೀ ನಾರಾಯಣ ಗುರು ನಿಗಮಕ್ಕೆ ಸರ್ಕಾರ ಅನುದಾನ ನೀಡಬೇಕು, ಬೆಂಗಳೂರಿನಲ್ಲಿ ನಾರಾಯಣ ಗುರುಗಳ ಪ್ರತಿಮೆ ಸ್ಥಾಪಿಸಬೇಕು ಹಾಗೂ ಕಲ್ಯಾಣ ಕರ್ನಾಟಕದ ಈಡಿಗ ಸಮುದಾಯದ ಜೀವನೋಪಾಯವಾಗಿರುವ ಸೇಂದಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಚಿತ್ತಾಪುರ ತಾಲ್ಲೂಕಿನ ಕರದಾಳ್‌ನ ನಾರಾಯಣ ಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ.

ನಗರದಲ್ಲಿ ಶುಕ್ರವಾರ ರಾಷ್ಟ್ರೀಯ ಈಡಿಗ ಮಹಾಮಂಡಳಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಸೇಂದಿ ನಿಷೇಧಿಸಿ 24 ವರ್ಷಗಳಾದರೂ ಸಮುದಾಯಕ್ಕೆ ಯಾವುದೇ ಪರ್ಯಾಯ ಉದ್ಯೋಗ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಆರೋಪಿಸಿದರು. ಕೇರಳ, ತೆಲಂಗಾಣ, ಆಂಧ್ರಪ್ರದೇಶ, ಗೋವಾ ಹಾಗೂ ಮಂಗಳೂರು-ಉಡುಪಿ ಭಾಗಗಳಲ್ಲಿ ಸೇಂದಿ ಉದ್ಯಮವಿದ್ದರೂ ಕರ್ನಾಟಕದ ಉಳಿದ 29 ಜಿಲ್ಲೆಗಳಲ್ಲಿ ಈಡಿಗ ಸಮುದಾಯದ ಸಾಂಪ್ರದಾಯಿಕ ಕುಲಕಸುಬು ನಿಂತುಹೋಗಿದೆ. ಆದರೆ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ಆರು ವರ್ಷಗಳಿಂದ ರಾಜ್ಯದಾದ್ಯಂತ ಮಾತ್ರವಲ್ಲದೆ ದೇಶದ 11 ರಾಜ್ಯಗಳಲ್ಲಿ ಪ್ರವಾಸ ಮಾಡಿ ಈಡಿಗ ಸಮುದಾಯವನ್ನು ಸಂಘಟಿಸುವ ಕಾರ್ಯ ಮಾಡಲಾಗುತ್ತಿದೆ. ರಾಜ್ಯದ 21 ಜಿಲ್ಲೆಗಳಲ್ಲಿ ಸಮುದಾಯ ಸಂಘಟಿತವಾಗಿದೆ. ಈವರೆಗೆ ಮೂರು ಪಾದಯಾತ್ರೆಗಳನ್ನು ನಡೆಸಿ ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ಇಡಲಾಗಿದೆ. ಅವುಗಳಲ್ಲಿ ಎರಡು-ಮೂರು ಬೇಡಿಕೆಗಳು ಮಾತ್ರ ಈಡೇರಿವೆ ಎಂದು ತಿಳಿಸಿದರು.

ಸಮುದಾಯ ಸಂಕಷ್ಟದ ಸ್ಥಿತಿಯಲ್ಲಿ:

ಕರ್ನಾಟಕದಲ್ಲಿ ಸುಮಾರು 25ರಿಂದ 30 ಲಕ್ಷ ಜನಸಂಖ್ಯೆ ಹೊಂದಿರುವ ಈಡಿಗ ಸಮುದಾಯದ ಬಹುತೇಕ ಜನರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಸುಮಾರು 20 ಸಾವಿರ ಜನರಿದ್ದು, ಶಿರಾ ಮತ್ತು ಚಿಕ್ಕನಾಯಕನಹಳ್ಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಮುದಾಯದಲ್ಲಿ ಶೇ.4ರಿಂದ 5ರಷ್ಟು ಜನರು ಮಾತ್ರ ಶ್ರೀಮಂತರಾಗಿದ್ದು, ಉಳಿದವರು ಸಂಕಷ್ಟದ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು.

ರಾಜ್ಯ ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸಮುದಾಯದ ಆರು ಜನಪ್ರತಿನಿಧಿಗಳು, ನಾಲ್ವರು ಶಾಸಕರು ಹಾಗೂ ಒಬ್ಬ ಸಚಿವರಿದ್ದರೂ ಸಮುದಾಯದ ಬೇಡಿಕೆಗಳು ಈಡೇರಿಲ್ಲ. ರಾಜಕಾರಣಿಗಳು ಸಮುದಾಯದ ಸಮಸ್ಯೆಗಳಿಗೆ ನ್ಯಾಯ ಕೊಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಪ್ರಣವಾನಂದ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಚಿಂತನ ಶಿಬಿರ:

ಈ ತಿಂಗಳ 28ರಂದು ಚಿಕ್ಕನಾಯಕನಹಳ್ಳಿಯಲ್ಲಿ ಜಿಲ್ಲಾ ಚಿಂತನ ಶಿಬಿರ ಆಯೋಜಿಸಲಾಗಿದ್ದು, 300ರಿಂದ 500 ಮಂದಿ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. 12ನೇ ಶತಮಾನದಲ್ಲಿ ಬಸವಣ್ಣನವರೊಂದಿಗೆ ಇದ್ದ 770 ಶರಣರಲ್ಲಿ ಈಡಿಗ ಸಮುದಾಯದ ಶರಣರಾದ ಮಾರಯ್ಯ ಮತ್ತು ಶಿವಶರಣೆ ಈಡಿಗರ ಅಕ್ಕಮ್ಮ ಕೂಡ ಇದ್ದರು. ಅಕ್ಕಮ್ಮ 154 ವಚನಗಳನ್ನು ಹಾಗೂ ಮಾರಯ್ಯ 12 ವಚನಗಳನ್ನು ರಚಿಸಿದ್ದಾರೆ. ಅವರ ವಚನಗಳನ್ನು ಪ್ರಕಟಿಸಿ ಪ್ರಚಾರ ಮಾಡುವ ಕಾರ್ಯವನ್ನು ಆರ್ಯ ಈಡಿಗ ಮಹಾಮಂಡಳಿ ಕೈಗೊಳ್ಳಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಈಡಿಗರ ಮಹಾಮಂಡಳಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಹನುಮಂತರಾಜು, ಜಿಲ್ಲಾಧ್ಯಕ್ಷ ಎ. ಸುರೇಶ್, ವಿಜಯಕುಮಾರ್, ಪರಮೇಶ್, ವಿರೂಪಾಕ್ಷ, ರಮೇಶ್ ಅಜ್ಜೇನಹಳ್ಳಿ, ರಾಜಣ್ಣ, ಶ್ರೀನಿವಾಸ್, ಹನುಮೇಶ್, ರವಿ, ಬ್ರಹ್ಮಶ್ರೀ ನಾರಾಯಣ ಗುರು ಸಮಾಜಂ ಟ್ರಸ್ಟ್ ಅಧ್ಯಕ್ಷ ರಾಜನ್, ಕಾರ್ಯದರ್ಶಿ ಸಂತೋಷ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *