ತುಮಕೂರು: ಮಕ್ಕಳನ್ನು ಸಂಗೀತದತ್ತ ಸೆಳೆಯಬೇಕು: ಮುರುಳೀಧರ ಹಾಲಪ್ಪ

ಜಿಲ್ಲಾ ಸುದ್ದಿ ತುಮಕೂರು ನಗರ

ಮಕ್ಕಳನ್ನು ಸಂಗೀತದತ್ತ ಸೆಳೆಯಬೇಕು: ಮುರುಳೀಧರ ಹಾಲಪ್ಪ

Tumkur news
ತುಮಕೂರು: ಐರೋಪ್ಯ ರಾಷ್ಟ್ರಗಳು ನಾ ಮುಂದು, ತಾ ಮುಂದು ಎಂದು ಅಳವಡಿಸಿಕೊಳ್ಳುತ್ತಿರುವ ಭಾರತೀಯ ಶಾಸ್ತ್ರೀಯ ಸಂಗೀತ, ನೃತ್ಯ ಪರಂಪರೆಯಿಂದ ಭಾರತದ ಯುವಜನರು ದೂರ ಸರಿಯುತ್ತಿದ್ದು, ಯುವ ಮನಸ್ಸುಗಳನ್ನು ಶಾಸ್ತ್ರೀಯ ಸಂಗೀತದತ್ತ ಸೆಳೆಯುವ ನಿಟ್ಟಿನಲ್ಲಿ ತಾಯಂದಿರು ಮಾರ್ಗದರ್ಶನ ಮಾಡಬೇಕೆಂದು ಕೆಪಿಸಿಸಿ ಉಪಾಧ್ಯಕ್ಷ ಹಾಗು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ಕರ್ನಾಟಕ ವಿಕಾಸ ರಂಗ(ರಿ), ತುಮಕೂರು ಶಾಖೆವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸಂಗೀತ ಕ್ಷೇತ್ರದ ದಿಗ್ಗಜರಾದ ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಹಾಗೂ ಶ್ಯಾಮಾಶಾಸ್ತ್ರೀಗಳ ನೆನಪಿನಲ್ಲಿ ಆಯೋಜಿಸಿದ್ದ “ಶಾಸ್ತ್ರೀಯ ಸಂಗೀತೋತ್ಸವ” ಕಾರ್ಯಕ್ರಮದಲ್ಲಿ ಸಾಮಾಜಿಕ ಕಳಕಳಿಯ ಮುಳ್ಳು ಹಾದಿ ಚಲನಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಮಾತನಾಡುತಿದ್ದ ಅವರು, ಸಂಗೀತಕ್ಕೆ ಎಂತಹವರನ್ನು ಸೆಳೆಯುವ ಗುಣವಿದೆ. ಸಭಾಂಗಣದಲ್ಲಿ ಬಹುತೇಕ ಹಿರಿಯರನ್ನೇ ಕಾಣುತ್ತಿದ್ದೇವೆ. ಭವಿಷ್ಯದ ವಾರಸುದಾರರಾಗಿರುವ ಯುವಜನರು ಇಂತಹ ಸಂಗೀತ ಕ್ಷೇತ್ರವನ್ನು ಮುನ್ನೆಡೆಸುವಂತಾಗಬೇಕು. ಹಾಗಾಗಿ ಯುವಜರನ್ನು ಶಾಸ್ತ್ರೀಯ ಸಂಗೀತಕ್ಕೆ ಸೆಳೆಯುವ ಪ್ರಯತ್ನ ನಡೆಯಬೇಕೆಂದರು.
ಭಾರತದಲ್ಲಿ ಇಂದು ಶೇ.60ಕ್ಕಿಂತಲೂ ಹೆಚ್ಚು ಯುವ ಸಮೂಹವಿದೆ. ಇಂತಹ ಯುವ ಸಮೂಹ ನಮ್ಮ ಭಾರತೀಯ ಸಂಸ್ಕೃತಿ, ಪರಂಪರೆಯನ್ನು ದೇಶ, ವಿದೇಶಗಳಲ್ಲಿ ಪ್ರಸರಿಸುವ ರಾಯಭಾರಿಗಳಾಗಬೇಕು. ಈ ಕಾರ್ಯ ಹೊರದೇಶದಲ್ಲಿ ಆತಿ ವೇಗದಿಂದ ನಡೆಯುತ್ತಿದೆ. ಆದರೆ ನಮ್ಮಲ್ಲಿಯೇ ಕ್ಷೀಣಿಸುವ ಸ್ಥಿತಿಗೆ ಬಂದಿದೆ. ಹಾಗಾಗಿ ತಾಯಂದಿರುವ ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶನ ನೀಡಬೇಕೆಂದರು.
ಪ್ರಾಚಿನ ಕಾವ್ಯಗಳ ಪ್ರವಾಚಕರಾದ ಜ್ಞಾನಬುತ್ತಿ ಸತ್ಸಂಗದ ಅಧ್ಯಕ್ಷ ಮುರುಳಿ ಕೃಷ್ಣಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಶಾಸ್ತ್ರೀಯ ಸಂಗೀತದಂತಹ ಕಲೆಯನ್ನು ಆಸ್ವಾದಿಸುವ ಕಲಾ ಪೋಷಕರ ಸಂಖ್ಯೆ ಕಡಿಮೆಯಾಗಿದೆ. ಹಿರಿಯರು ಅದನ್ನು ಒಂದು ತಪ್ಪಸ್ಸಿನ ರೀತಿಯಲ್ಲಿ ಮುನ್ನೆಡೆಸಿಕೊಂಡು ಹೋದರೆ, ಕುರಿತು ಲಘುವಾಗಿ ಪರಿಗಣಿಸುತಿದ್ದಾರೆ. ಸಿಂಧು ಕಣಿವೆಯ ನಾಗರಿಕತೆ ಕಾಲದಲ್ಲಿಯೂ ಶಾಸ್ತ್ರೀಯ ಸಂಗೀತ ಚಾಲ್ತಿಯಲ್ಲಿ ಇತ್ತು ಎಂಬುದಕ್ಕೆ ಉತ್ಕನನದ ವೇಳೆ ದೊರೆತಿರುವ ವೀಣೆಯೇ ಸಾಕ್ಷಿಯಾಗಿದೆ. ಇಂತಹ ಘನ ಇತಿಹಾಸವನ್ನು ಭಾರತೀಯರ ಯುವಜನರು ಮರೆಯಬಾರದು ಎಂದರು.
ಕರ್ನಾಟಕ ವಿಕಾಸ ರಂಗ(ರಿ),ನ ತುಮಕೂರು ಜಿಲ್ಲಾಧ್ಯಕ್ಷ ಮಹದೇವಪ್ಪ ಮಾತನಾಡಿ, ಕರ್ನಾಟಕ ವಿಕಾಸ ರಂಗದ ಮೂಲಕ ಶಾಲಾ, ಕಾಲೇಜುಗಳಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವನ್ನು ಮಾಡಲಾಗುತ್ತಿದೆ. ಅದರ ಭಾಗವಾಗಿಯೇ ಇಂದು ಶಾಸ್ತ್ರೀಯ ಸಂಗೀತೋತ್ಸವದ ಜೊತೆಗೆ ಕುರುಪಾಂಡವರ ಸಂಗ್ರಾಮ ಪುಸ್ತಕ ಹಾಗೂ ಮುಳ್ಳಹಾದಿ ಚಲನಚಿತ್ರದ ಟ್ರೀಸರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ.ಎಸ್.ಆರ್.ಟಿ.ಸಿ. ಕನ್ನಡ ಕ್ರಿಯಾ ಸಮಿತಿ ಗೌರವ ಸಲಹೆಗಾರರು ಹಾಗೂ ಕರ್ನಾಟಕ ವಿಕಾಸ ರಂಗದ ಸಂಸ್ಥಾಪಕ ಅಧ್ಯಕ್ಷರಾದ ವ.ಚ.ಚನ್ನೇಗೌಡ ಮಾತನಾಡಿ, ಕರ್ನಾಟಕ ವಿಕಾಸ ರಂಗವನ್ನು ಕನ್ನಡ ಭಾಷೆ, ನೆಲ, ಜಲ, ಕಲೆ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಅರಂಭಿಸಲಾಗಿದೆ.ಕನ್ನಡ ನಾಡು, ಕರ್ನಾಟಕ್ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಎರಡನ್ನು ಒಳಗೊಂಡಿರುವ ವಿಶಿಷ್ಟ ನೆಲೆ. ಮೈಸೂರು ಮಹಾರಾಜರ ಆಸ್ಥಾನದಲ್ಲಿ ಹಿಂದೂಸ್ತಾನಿ ಹಾಡಲು ಕುದುರೆ ಗಾಡಿಯಲ್ಲಿ ಬರುತ್ತಿದ್ದ ಗಾಯಕರು ಧಾರವಾಡದಲ್ಲಿ ತಂಗುವುದು ವಾಡಿಕೆ. ಹಾಗಾಗಿ ಆ ಭಾಗದಲ್ಲಿ ಹಿಂದೂಸ್ತಾನಿ ಗಾಯನದಲ್ಲಿ ಹಲವಾರು ಕನ್ನಡಿಗರು ಅದ್ವಿತಿಯ ಸಾಧನೆ ಮಾಡಿದ್ದಾರೆ. ಗಂಗೂಬಾಯಿ ಹಾನಗಲ್, ಬಸವರಾಜ ರಾಜಗುರು, ಭೀಮಸೇನ್ ಜೋಷಿ, ಶಹನಾಯಿ ವಾದಕ ಬಿಸ್ಮಿಲಾಖಾನ್ ಸೇರಿದಂತೆ ಹಲವರು ಎರಡು ಸಂಗೀತಕ್ಕೆ ತನ್ನದೆ ಆದ ಕೊಡುಗೆ ನೀಡಿದ್ದಾರೆ. ನಮ್ಮ ಪೂರ್ವಜರು ತಮ್ಮ ನೋವು, ನಲಿವುಗಳಿಗೆ ಸಂಗೀತವನ್ನು ಭಾಷೆಯಾಗಿಸಿ ಕೊಂಡಿದ್ದರು. ಬಿಬಿಎಂಪಿಯಲ್ಲಿಯೂ ಸಂಗೀತ ಕೇಳುವ ವೇಳೆ ಕೆಲಸ ಚನ್ನಾಗಿ ನಡೆಯುತ್ತದೆ ಎಂದು ಎಲ್ಲಾ ಕಾರ್ಯಾಗಾರಗಳಲ್ಲಿಯೂ ಸಂಗೀತಕ್ಕೆ ಅದ್ಯತೆ ನೀಡಲಾಗಿತ್ತು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಅವರು ಕುರು ಪಾಂಡವರ ಸಂಗ್ರಾಮ ಎಂಬ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ವೇದಿಕೆಯಲ್ಲಿ ಯೋಗ ಗುರು ಪ್ರೊ.ಚಂದ್ರಣ್ಣ, ನವೋದಯ ಐಎಎಸ್ ಅಕಾಡೆಮಿಯ ನಾಗರಾಜರಾವ್, ವಿಶ್ವಚೇತನ ಬಳಗದ ವಿ.ಎಂ.ಪ್ರಸನ್ನಕುಮಾರ್, ಧ್ಯಾನ ಶಿವಬಸಪ್ಪ, ಗೂಳೂರು ಶಿವಕುಮಾರ್, ಕರ್ನಾಟಕ ವಿಕಾಸ ರಂಗದ ತಾಲೂಕು ಅಧ್ಯಕ್ಷರುಗಳಾದ ಮುನೀಂದ್ರ ಕುಮಾರ್, ಚಿದಾನಂದ್, ಶಿವಕುಮಾರ್, ರಂಗಶಿವಲಿಂಗಯ್ಯ, ಜಿಲ್ಲಾ ಘಟಕದ ಅಧ್ಯಕ್ಷ ಮಹದೇವಪ್ಪ, ಉಪಾಧ್ಯಕ್ಷ ವಿ.ಡಿ.ಹನುಮಂತರಾಯಪ್ಪ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನಸ್ವಾಮಿ.ಎಂ, ಖಜಾಂಚಿ ವಿನಾಯಕ, ಸಂಚಾಲನ ಕಾರ್ಯದರ್ಶಿ ಲಕ್ಷ್ಮೀನರಸಿಂಹಶೆಟ್ಟರು ಮತ್ತಿತರರು ಉಪಸ್ಥಿತರಿದ್ದರು.

ತುಮಕೂರು: ಮತದಾರರ ಪಟ್ಟಿಗೆ ಅಕ್ರಮವಾಗಿ ಮತದಾರರನ್ನು ಸೇರಿಸಿಲ್ಲ: ಮುರುಳೀಧರ ಹಾಲಪ್ಪ

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *