ತುಮಕೂರು: ಮತದಾರರ ಪಟ್ಟಿಗೆ ಅಕ್ರಮವಾಗಿ ಮತದಾರರನ್ನು ಸೇರಿಸಿಲ್ಲ: ಮುರುಳೀಧರ ಹಾಲಪ್ಪ

ಜಿಲ್ಲಾ ಸುದ್ದಿ ತುಮಕೂರು ನಗರ ಪ್ರಮುಖ ಸುದ್ದಿ ರಾಜಕೀಯ

ಮತದಾರರ ಪಟ್ಟಿಗೆ ಅಕ್ರಮವಾಗಿ ಮತದಾರರನ್ನು ಸೇರಿಸಿಲ್ಲ: ಮುರುಳೀಧರ ಹಾಲಪ್ಪ

Tumkur news
ತುಮಕೂರು: ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷ ಎಲ್ಲಿಯೂ ಮತದಾರರ ಪಟ್ಟಿಗೆ ಅಕ್ರಮವಾಗಿ ಮತದಾರರನ್ನು ಸೇರಿಸುವ ಕೆಲಸ ಮಾಡಿಲ್ಲ. ಇದು ಬಿಜೆಪಿಯಾ ಊಹಾಪೋಹ ಅಷ್ಟೇ ಎಂದು ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ.
ನಗರದ ಜಯನಗರ ಪೂರ್ವದಲ್ಲಿರುವ ತಮ್ಮ ಗೃಹ ಕಚೇರಿ ಬಳಿ ಎಸ್.ಐ.ಆರ್.ಗೆ ಪೂರಕವಾಗಿ ಹೆಲ್ಪ್ ಲೈನ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಒಂದು ಮತಪಟ್ಟಿಗೆ ಅಕ್ರಮವಾಗಿ ಮತದಾರರನ್ನು ಸೇರಿಸಬೇಕೆಂದರೆ, ರೇಷನ್ ಕಾರ್ಡು, ಪಾಸ್ ಪೋರ್ಟ್, ಬ್ಯಾಂಕ್ ಪಾಸ್ ಪುಸ್ತಕ ಸೇರಿದಂತೆ ಕನಿಷ್ಠ ದಾಖಲಾತಿಗಳಾದರೂ ಬೇಕು. ಅಂತಹ ಯಾವ ಕಾರ್ಯವನ್ನು ರಾಜ್ಯ ಸರಕಾರ ಮಾಡುತ್ತಿಲ್ಲ. ಎಸ್.ಐ.ಆರ್. ಮೂಲಕ ಕಾಂಗ್ರೆಸ್ ಮತದಾರರನ್ನು ಕಿತ್ತು ಹಾಕಬಹುದು ಎಂಬ ಭ್ರಮೆಯಲ್ಲಿದ್ದ ಬಿಜೆಪಿಗೆ ರಾಜ್ಯದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿರುವ ಎಸ್.ಐ.ಆರ್.ನಿರಾಸೆ ತಂದಿದೆ. ಹಾಗಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರ ಆರೋಪದಲ್ಲಿ ಯಾವುದೇ ಹುರುಳು ಇಲ್ಲ ಎಂದರು.
ಚುನಾವಣಾ ಆಯೋಗ, ಎಸ್.ಐ.ಆರ್. ಪ್ರಕ್ರಿಯೆ ಸರಿಯಾಗಿದೆಯೇ, ಇಲ್ಲವೇ ಎಂಬುದನ್ನು ತಿಳಿಯಲು ಎಲ್ಲಾ ಪಕ್ಷಗಳಿಗೂ ಬೂತ್ ಮಟ್ಟದ ಏಜೆಂಟ್‌ರಿಗೆ(ಬಿಎಲ್‌ಎ-02) ಅಧಿಕೃತವಾಗಿ ಅವಕಾಶ ನೀಡಿದೆ. ಅವರಿಂದ ಮಾಹಿತಿ ಪಡೆಯಲಿ, ಅದನ್ನು ಬಿಟ್ಟು ನಾವು ಅಂದುಕೊಂಡಿದ್ದು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಎಸ್.ಐ.ಆರ್.ಪ್ರಕ್ರಿಯೆಯನ್ನೇ ವಿರೋಧಿ ಸುವುದು ಸರಿಯಲ್ಲ. ಒಂದು ವೇಳೆ ಅಕ್ರಮ ಮತದಾರರು ಸೇರ್ಪಡೆಗೊಂಡಿದ್ದರೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶವಿದೆ. ಆ ಸಂದರ್ಭದಲ್ಲಿ ತಮ್ಮ ಬಳಿ ದಾಖಲೆಗಳಿದ್ದರೆ ಅವುಗಳೊಂದಿಗೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲು ಮುಕ್ತ ಅವಕಾಶವಿದೆ. ಅದನ್ನು ಬಿಟ್ಟು ಗೊಂದಲ ಸೃಷ್ಟಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಮುರುಳೀಧರ ಹಾಲಪ್ಪ ತಿಳಿಸಿದರು.
ಇದುವರೆಗೂ ದೇಶದಲ್ಲಿ 16 ರಾಜ್ಯ ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳು ಸೇರಿ 20 ರಾಜ್ಯಗಳಲ್ಲಿ ಎಸ್.ಐ.ಆರ್. ಪ್ರಕ್ರಿಯೆ ಪೂರ್ಣಗೊಂಡಿದೆ. ಒಟ್ಟು 6 ಕೋಟಿಗೂ ಹೆಚ್ಚು ಮತದಾರರನ್ನು ಕೈಬಿಡಲಾಗಿದೆ, ಪಶ್ಚಿಮ ಬಂಗಾಳದಲ್ಲಿ ಮಮತ ಬ್ಯಾನರ್ಜಿ ಸೋತಿದ್ದು ಕೇವಲ 6 ಸಾವಿರ ಮತಗಳಿಂದ, ಆದರೆ ಆ ಕ್ಷೇತ್ರದಲ್ಲಿ ಎಸ್.ಐ.ಆರ್ ಮೂಲಕ ಕೈಬಿಟ್ಟಿದ್ದು, 35 ಸಾವಿರಕ್ಕೂ ಹೆಚ್ಚು ಮತಗಳು, ಇದುವರೆಗು ಒಬ್ಬರೇ ಒಬ್ಬರು ಅಕ್ರಮ ವಲಸಿಗರನ್ನು ದೇಶದಿಂದ ಹೊರ ಹಾಕಿಲ್ಲ. ಕರ್ನಾಟಕದಲ್ಲಿಯೂ ಅದೇ ರೀತಿ ಆಗಬಹುದು ಎಂಬ ಎಚ್ಚರಿಕೆಯಿಂದ ಪಕ್ಷದಿಂದ ಎಲ್ಲಾ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಂಡು ಆರ್ಹರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಅದಕ್ಕಾಗಿಯೇ ನಾವು ಕೂಡ ಹೆಲ್ಪ್ ಲೈನ್ ತೆಗೆದು, ಮತದಾರರಿಗೆ ಎನಂಬರೇಷನ್ ಫಾರಂ ತುಂಬಲು ಅಗತ್ಯವಿರುವ ಮಾಹಿತಿ ಒದಗಿಸುವ ಕೆಲಸ ನಿರಂತರವಾಗಿ ಮಾಡಲಾಗುತ್ತಿದೆ ಎಂದು ಮುರುಳೀಧರ ಹಾಲಪ್ಪ ನುಡಿದರು.
ಕರ್ನಾಟಕದಲ್ಲಿ ಎಸ್.ಐ.ಆರ್ ಪ್ರಕ್ರಿಯೇ ಪ್ರಾರಂಭವಾಗಿ 12 ದಿನ ಕಳೆದಿದೆ. ಸರಕಾರ ಈಗಾಗಲೇ ವ್ಯಾಪಕ ಪ್ರಚಾರ ಕೈಗೊಂಡು ಎಸ್.ಐ.ಆರ್.ಪ್ರಕ್ರಿಯೆಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಿದೆ. ಒಂದು ವೇಳೆ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲವೆಂದರೆ ಸರಕಾರದ ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಪ್ರತಿಯೊಬ್ಬರು ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಲು, ಕಾಂಗ್ರೆಸ್ ಪಕ್ಷ ಹೆಲ್ಪ್ ಡೆಸ್ಕ್ ನಡೆಸುತ್ತಿದೆ. ಇದರ ಪ್ರಯೋಜನವನ್ನು ಮತದಾರರು ಪಡೆದುಕೊಂಡು ತಮ್ಮ ಸಂವಿಧಾನಬದ್ದ ಹಕ್ಕನ್ನು ಉಳಿಸಿಕೊಳ್ಳಬೇಕೆಂದು ಮುರುಳೀಧರ ಹಾಲಪ್ಪ ಕರೆ ನೀಡಿದರು.
ಮಾಜಿ ಶಾಸಕ ಹಾಗೂ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ.ಎಸ್.ಷಪಿ ಅಹಮದ್ ಮಾತನಾಡಿ, ಜೂನ್ 30 ರಿಂದ ಜುಲೈ 29 ರವರೆಗೆ ಒಂದು ತಿಂಗಳ ಕಾಲ ರಾಜ್ಯದಲ್ಲಿ ಎಸ್.ಐ.ಆರ್. ಪ್ರಕಿಯೆ ಚಾಲ್ತಿಯಲ್ಲಿದೆ. ದೇಶದ ಕೆಲ ರಾಜ್ಯಗಳಲ್ಲಿ ಆಗಿರುವ ತೊಂದರೆಯನ್ನು ಮನಗಂಡು, ಕಳೆದ ಒಂದು ವರ್ಷದಿಂದಲೇ ಕಾಂಗ್ರೆಸ್ ಪಕ್ಷದವತಿಯಿಂದ ಎಸ್.ಐ.ಆರ್ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿತ್ತು. ಆದರ ಭಾಗವಾಗಿ ಜನರು ಎಚ್ಚೆತ್ತು ತಮ್ಮ ಹಕ್ಕಿನ ರಕ್ಷಣೆಗೆ ಮುಂದಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಸಾಂಪ್ರದಾಯಕ ಮತದಾರರನ್ನು ಪಟ್ಟಿಯಿಂದ ಹೊರಗಿಡಬಹುದು ಎಂದು ಕೊಂಡಿದ್ದ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳಿಗೆ ಇದರಿಂದ ನಿರಾಸೆಯಾಗಿದೆ. ಹಾಗಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ಆಧಾರವಿಲ್ಲದೆ ದೂರು ನೀಡಿದೆ. ಶೆಟ್ಟಿಹಳ್ಳಿಯ ಹೆಚ್.ಎಂ.ಎಸ್ ಕ್ಯಾಂಪಸ್‌ನಲ್ಲಿಯೂ ಇದೇ ರೀತಿಯ ಹೆಲ್ಪ್ ಲೈನ್ ತೆರೆದು, ಮತದಾರರಿಗೆ 2002 ಮತದಾರರ ಪಟ್ಟಿ ಮತ್ತು 2025ರ ಮತದಾರರ ಪಟ್ಟಿಯನ್ನು ಒದಗಿಸುವ ಮೂಲಕ ಫಾರಂ ತುಂಬಲು ಅನುಕೂಲ ಕಲ್ಪಿಸಲಾಗಿದೆ ಎಂದರು.
ಈ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತಿತರರು ಪಾಲ್ಗೊಂಡಿದ್ದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *