ಅಂಚೆ ನೌಕರರ ಅಧಿವೇಶನ: ಸಮಸ್ಯೆ, ಬೇಡಿಕೆಗಳ ಬಗ್ಗೆ ಚರ್ಚೆ
Tumkurnews.in
ತುಮಕೂರು: ಅಖಿಲ ಭಾರತ ಅಂಚೆ ನೌಕರರ ಸಂಘದ ವಿಭಾಗೀಯ ಮಹಾಧಿವೇಶನ ನಗರದಲ್ಲಿ ನಡೆಯಿತು. ಅಧಿವೇಶನದಲ್ಲಿ ಅಂಚೆ ಇಲಾಖೆಯ ನೌಕರರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳು ಹಾಗೂ ಬೇಡಿಕೆಗಳ ಕುರಿತು ಚರ್ಚಿಸಲಾಯಿತು.
ನಗರದ ಹನುಮಂತಪುರದ ಕೊಲ್ಲಾಪುರದಮ್ಮ ಸಭಾಭವನದಲ್ಲಿ ನಡೆದ ಅಧಿವೇಶನದಲ್ಲಿ ಅಂಚೆ ಕಚೇರಿಗಳಲ್ಲಿನ ಸಿಬ್ಬಂದಿ ಕೊರತೆ, ಕಳೆದ ಐದು ವರ್ಷಗಳಿಂದ ಕಂಪ್ಯೂಟರ್ ಮತ್ತು ಪ್ರಿಂಟರ್ಗಳ ವಾರ್ಷಿಕ ನಿರ್ವಹಣಾ ಒಪ್ಪಂದ (ಎಎಂಸಿ) ಸ್ಥಗಿತಗೊಂಡಿರುವುದರಿಂದ ಉಂಟಾಗಿರುವ ತಾಂತ್ರಿಕ ಅಡಚಣೆಗಳು, ಸಿಸ್ಟಮ್ ಅಡ್ಮಿನಿಸ್ಟ್ರೇಟರ್ಗಳ ಅಲಭ್ಯತೆ, ಡೇ-ಒನ್ ಡೆಲಿವರಿ ಹಾಗೂ ಮೊಬೈಲ್ ಆ್ಯಪ್ ಅಪ್ಡೇಟ್ಗಳ ಹೆಸರಿನಲ್ಲಿ ನೌಕರರ ಮೇಲೆ ಹೇರಲಾಗುತ್ತಿರುವ ಅತಿಯಾದ ಕೆಲಸದ ಒತ್ತಡದ ಕುರಿತು ಪರಾಮರ್ಶಿಸಲಾಯಿತು.
ಅಂಚೆ ಕಚೇರಿ ಕಟ್ಟಡಗಳಲ್ಲಿನ ಮೂಲಸೌಕರ್ಯಗಳ ಕೊರತೆ, ತುಮಕೂರು ಪಿ.ಒ.ಪಿ.ಎಸ್.ಕೆ. ಕೇಂದ್ರದಲ್ಲಿನ ತೀವ್ರ ಕೆಲಸದ ಒತ್ತಡ ಹಾಗೂ ತುಮಕೂರು ವಿಭಾಗಕ್ಕೆ ಸಿ.ಜಿ.ಎಚ್.ಎಸ್. ವೆಲ್ನೆಸ್ ಸೆಂಟರ್ ಸ್ಥಾಪಿಸುವ ಅಗತ್ಯದ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು. ಈ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸುವಂತೆ ಆಡಳಿತ ಮಂಡಳಿಯನ್ನು ಒತ್ತಾಯಿಸಲು ನಿರ್ಣಯ ಕೈಗೊಳ್ಳಲಾಯಿತು.
ತುಮಕೂರು ವಿಭಾಗದ ಪೋಸ್ಟ್ಮನ್ ವಿಭಾಗದ ನೌಕರರ ಸಂಘದ ಅಧ್ಯಕ್ಷ ಪ್ರಕಾಶ್ ಎಂ.ಡಿ. ಹಾಗೂ ಗ್ರೂಪ್ ಸಿ ವಿಭಾಗದ ಅಧ್ಯಕ್ಷ ನರಸಿಂಹಯ್ಯ ಅವರ ನೇತೃತ್ವದಲ್ಲಿ ಅಧಿವೇಶನ ನಡೆಯಿತು. ಸಂಘಟನೆಯ ಸಾಂಸ್ಥಿಕ ಚರ್ಚೆಗಳಿಗೆ ಮಾರ್ಗದರ್ಶನ ನೀಡಲು ಸರ್ಕಲ್ ಪದಾಧಿಕಾರಿಗಳಾದ ಕೃಷ್ಣಮೂರ್ತಿ ವಿ. ಮತ್ತು ರಾಘವೇಂದ್ರ ಹವಾಲೇರ್ ಭಾಗವಹಿಸಿದ್ದರು.
ಅಂಚೆ ಇಲಾಖೆಯ ಆಡಳಿತ ವಿಭಾಗದ ಪರವಾಗಿ ವಿಭಾಗೀಯ ಸೂಪರಿಂಟೆಂಡೆಂಟ್ ದಯಾನಂದ ಹೆಚ್.ಆರ್. ಹಾಗೂ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ಗಳಾದ ಗಂಗಪ್ಪ, ಎಸ್.ಎಸ್. ಮಂಜುನಾಥ್ ಮೊದಲಾದವರು ಭಾಗವಹಿಸಿದ್ದರು. ನೌಕರರು ಸಭೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ರಚನಾತ್ಮಕ ಚರ್ಚೆಗಳ ಮೂಲಕ ಸಂಘಟನೆಯ ಚಳವಳಿಗೆ ಹೊಸ ಶಕ್ತಿ ತುಂಬಬೇಕು ಎಂದು ಸಲಹೆ ನೀಡಿದರು.
ಅಧಿವೇಶನದಲ್ಲಿ ನೂರಾರು ಅಂಚೆ ನೌಕರರು ಭಾಗವಹಿಸಿದ್ದರು.
