ನಾಗವಲ್ಲಿಯಲ್ಲಿ ಅದ್ದೂರಿ ಗಣೇಶ ವಿಸರ್ಜನಾ ಮಹೋತ್ಸವ
Tumkurnews.in
ತುಮಕೂರು: ತಾಲ್ಲೂಕಿನ ಹೆಬ್ಬೂರು ಹೋಬಳಿಯ ನಾಗವಲ್ಲಿ ಗ್ರಾಮದಲ್ಲಿ ಸುಮಾರು ಒಂದೂವರೆ ತಿಂಗಳಿನಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ವಿಸರ್ಜನಾ ಮಹೋತ್ಸವ ಶನಿವಾರ ವಿಜೃಂಭಣೆಯಿಂದ ನೆರವೇರಿತು.
ಗ್ರಾಮದ 18 ಜಾತಿ-ಜನಾಂಗದವರು ಒಗ್ಗೂಡಿ ಗಣೇಶ ಚತುರ್ಥಿಯಂದು ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು. ಅಂದಿನಿಂದ ಪ್ರತಿದಿನ ವಿಶೇಷ ಪೂಜೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಶನಿವಾರ ನಡೆದ ಗಣೇಶ ವಿಸರ್ಜನಾ ಮಹೋತ್ಸವದ ಅಂಗವಾಗಿ ಗ್ರಾಮದಲ್ಲಿ ವಿಶೇಷ ವಿದ್ಯುತ್ ಅಲಂಕಾರ ಮಾಡಲಾಗಿತ್ತು. ಅಲಂಕೃತ ವಾಹನದಲ್ಲಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ವೈಭವದ ಮೆರವಣಿಗೆ ನಡೆಸಲಾಯಿತು. ಇದರಿಂದ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಮಂಗಳವಾದ್ಯ ಸೇರಿದಂತೆ 12ಕ್ಕೂ ಹೆಚ್ಚು ಜಾನಪದ ಕಲಾತಂಡಗಳ ಆಕರ್ಷಕ ಪ್ರದರ್ಶನವು ಉತ್ಸವದ ಸಂಭ್ರಮವನ್ನು ಹೆಚ್ಚಿಸಿತು. ಗ್ರಾಮಕ್ಕೆ ಒಳಿತಾಗಬೇಕು, ಮಳೆ-ಬೆಳೆ ಸಮೃದ್ಧವಾಗಬೇಕು ಹಾಗೂ ಜನರು ಸುಖ-ಸಂತೋಷದಿಂದ ಬದುಕಬೇಕು ಎಂಬ ಆಶಯದೊಂದಿಗೆ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗಿತ್ತು ಎಂದು ಸಮಿತಿಯವರು ತಿಳಿಸಿದರು.
ವಿಸರ್ಜನಾ ಮಹೋತ್ಸವದ ಅಂಗವಾಗಿ ಸಾವಿರಾರು ಜನರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಮೆರವಣಿಗೆಯ ನಂತರ ನಾಗವಲ್ಲಿ ಅಮಾನಿಕೆರೆಯಲ್ಲಿ ಗಣಪತಿ ಮೂರ್ತಿಯ ವಿಸರ್ಜನೆ ನೆರವೇರಿಸಲಾಯಿತು.
