‘ಮಾನವೀಯ ಮೌಲ್ಯ ಸಾರಿದ ಮಹರ್ಷಿ ವಾಲ್ಮೀಕಿ’

ಜಿಲ್ಲಾ ಸುದ್ದಿ ತಾಲ್ಲೂಕು ತುಮಕೂರು ನಗರ ಪ್ರಮುಖ ಸುದ್ದಿ

‘ಮಾನವೀಯ ಮೌಲ್ಯ ಸಾರಿದ ಮಹರ್ಷಿ ವಾಲ್ಮೀಕಿ’

ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ

Tumkurnews.in

ತುಮಕೂರು: ಮಹರ್ಷಿ ವಾಲ್ಮೀಕಿಯವರು ತಮ್ಮ ಅದ್ಭುತ ಕಾವ್ಯಸೃಷ್ಟಿಯಾದ ರಾಮಾಯಣದ ಮೂಲಕ ಸತ್ಯ, ಧರ್ಮ, ನ್ಯಾಯ, ತ್ಯಾಗ, ಕರುಣೆ ಹಾಗೂ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಸಾರುವ ಮೂಲಕ ಮಾನವ ಬದುಕಿಗೆ ಮಾರ್ಗದರ್ಶನ ನೀಡಿದ್ದಾರೆ ಎಂದು ರಾಜ್ಯ ಜೆಡಿಎಸ್ ಎಸ್.ಟಿ. ಘಟಕದ ಉಪಾಧ್ಯಕ್ಷ ಸೋಲಾರ್ ಕೃಷ್ಣಮೂರ್ತಿ ಹೇಳಿದರು.

ಸೋಮವಾರ ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಆದಿಕವಿ ವಾಲ್ಮೀಕಿಯವರು ಅಜ್ಞಾನದ ಕತ್ತಲೆಯನ್ನು ಜ್ಞಾನದ ಬೆಳಕಾಗಿಸಿ, ಅಧರ್ಮದ ಹಾದಿಯಿಂದ ಧರ್ಮದ ಮಾರ್ಗದತ್ತ ಮಾನವಕುಲ ಮುನ್ನಡೆಯಬೇಕೆಂಬ ಸಂದೇಶ ಸಾರಿದ ಮಹಾನ್ ದಾರ್ಶನಿಕರು ಎಂದರು.

ಮಹರ್ಷಿ ವಾಲ್ಮೀಕಿಯವರ ಆದರ್ಶಗಳು ನಮ್ಮೆಲ್ಲರ ಬದುಕಿಗೆ ಶಕ್ತಿಯಾಗಲಿ. ಅವರ ಜ್ಞಾನದ ಸಂದೇಶಗಳು ಸಮಾಜದಲ್ಲಿ ಸಮಾನತೆ, ಸೌಹಾರ್ದತೆ ಮತ್ತು ಮಾನವೀಯತೆಯ ಬೆಳಕನ್ನು ಹರಡಲಿ. ಮುಂದಿನ ಪೀಳಿಗೆಗೆ ಅವರ ಆದರ್ಶಗಳನ್ನು ಪರಿಚಯಿಸುವ ಮೂಲಕ ಮಾದರಿ ಸಮಾಜ ನಿರ್ಮಾಣಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.

ಎಸ್.ಟಿ. ಘಟಕದ ಜಿಲ್ಲಾಧ್ಯಕ್ಷ ಹುಂಜನಾಳು ರಾಜಣ್ಣ ಮಾತನಾಡಿ, ಮಹರ್ಷಿ ವಾಲ್ಮೀಕಿಯವರನ್ನು ಸ್ಮರಿಸುವುದೆಂದರೆ ಕೇವಲ ಜಯಂತಿ ಆಚರಿಸುವುದಲ್ಲ; ಅವರು ತೋರಿಸಿಕೊಟ್ಟ ಸತ್ಯ, ಕರುಣೆ, ಸಮಾನತೆ ಮತ್ತು ಧರ್ಮದ ಹಾದಿಯಲ್ಲಿ ಮುನ್ನಡೆಯುವುದಾಗಿದೆ. ತಪ್ಪು ಹಾದಿಯಲ್ಲಿದ್ದ ವ್ಯಕ್ತಿಯೂ ಜ್ಞಾನ ಮತ್ತು ಭಕ್ತಿಯ ಮಾರ್ಗವನ್ನು ಅನುಸರಿಸಿದರೆ ಸಮಾಜಕ್ಕೆ ಬೆಳಕಾಗಬಲ್ಲ ಎಂಬ ಸಾರ್ವಕಾಲಿಕ ಸತ್ಯವನ್ನು ಅವರ ಜೀವನ ನಮಗೆ ಕಲಿಸಿಕೊಡುತ್ತದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಗರ ಜೆಡಿಎಸ್ ಅಧ್ಯಕ್ಷ ಟಿ.ಹೆಚ್. ಜಯರಾಮ್ ಮಾತನಾಡಿ, ಪಕ್ಷದ ಕಚೇರಿಯಲ್ಲಿ ವಿವಿಧ ಮಹನೀಯರ ಜಯಂತಿಗಳನ್ನು ಆಚರಿಸುವ ಮೂಲಕ ಅವರನ್ನು ಸ್ಮರಿಸಿ ಗೌರವಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಇಂದು ರಾಮಾಯಣದ ಕರ್ತೃ ಮಹರ್ಷಿ ವಾಲ್ಮೀಕಿಯವರ ಕೊಡುಗೆಯನ್ನು ಸ್ಮರಿಸಲಾಗುತ್ತಿದೆ ಎಂದರು.

ಮಾನವೀಯ ಮೌಲ್ಯಗಳನ್ನು ಸಾರುವ ವಾಲ್ಮೀಕಿ ರಾಮಾಯಣವು ದೇಶ ಮತ್ತು ಭಾಷೆಯ ಗಡಿಗಳನ್ನು ಮೀರಿ ಜಾಗತಿಕ ಮಟ್ಟದಲ್ಲಿ ಗೌರವ ಪಡೆದಿದೆ. ಜಾತಿ-ಧರ್ಮದ ಹೆಸರಿನಲ್ಲಿ ಮನುಷ್ಯರ ನಡುವಿನ ಸಂಬಂಧಗಳು ಕುಸಿಯುತ್ತಿರುವ ಇಂದಿನ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿಯವರು ರಚಿಸಿದ ಮಹಾಕಾವ್ಯ ಸಮಾಜಕ್ಕೆ ದಾರಿದೀಪವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಜೆಡಿಎಸ್ ಕಾರ್ಯದರ್ಶಿ ಕೆ. ಮಂಜುನಾಥ್ ತೋವಿನಕೆರೆ, ಎಸ್.ಸಿ. ಘಟಕದ ಜಿಲ್ಲಾಧ್ಯಕ್ಷ ಬೆಳಗುಂಬ ವೆಂಕಟೇಶ್, ಕಾರ್ಯಾಧ್ಯಕ್ಷ ಭೈರೇಶ್, ಜಿಲ್ಲಾ ರೈತ ಘಟಕದ ಅಧ್ಯಕ್ಷ ಎಸ್. ರಂಗನಾಥ್, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಅಶ್ವತ್ಥ್ ಕುಮಾರ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಕೆಂಪರಾಜು, ಮಹಿಳಾ ಘಟಕದ ನಗರ ಅಧ್ಯಕ್ಷೆ ಲಕ್ಷ್ಮೀನಾಯಕ್, ನಗರಸಭೆ ಮಾಜಿ ಉಪಾಧ್ಯಕ್ಷ ಶ್ರೀನಿವಾಸ್ ಪ್ರಸಾದ್, ಮಾಜಿ ಸದಸ್ಯ ಟಿ.ಹೆಚ್. ಬಾಲಕೃಷ್ಣ, ಮಾಜಿ ನಗರ ಅಧ್ಯಕ್ಷ ವಿಜಯ್‌ಗೌಡ, ಮುಖಂಡರಾದ ಗಂಗಣ್ಣ, ಉಪ್ಪಾರಹಳ್ಳಿ ಕುಮಾರ್, ಮಂಡಿ ಚಂದ್ರಣ್ಣ, ಚಂದ್ರಾನಾಯಕ್, ದೇವನೂರು ಕುಮಾರ್, ಉಪ್ಪಾರಹಳ್ಳಿ ಮಂಜುನಾಥ್, ಲೀಲಾವತಿ ಅಶೋಕ್, ಯಶೋಧ, ತಾಹೇರಾ ಕುಲ್ಸಂ, ರಾಧಾಗೌಡ, ರೇಖಾ, ಜಯಲಕ್ಷ್ಮೀ, ಶಕುಂತಲಾ, ಲಲಿತಾ ಬಾಯಿ, ಗಣೇಶ್, ಉಮೇಶ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *