ತುಮಕೂರು ಗ್ರಾಮಾಂತರದಲ್ಲಿ ಕೋಲಾಹಲ ಎಬ್ಬಿಸಿದ ದಳಪತಿ ಎಚ್.ನಿಂಗಪ್ಪರನ್ನು ವಿಧಾನಸಭೆಗೆ ಕರೆದೊಯ್ಯುವೆ ಎಂದ ಎಚ್‌ಡಿಕೆ; ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಯಾರು?

ಜಿಲ್ಲಾ ಸುದ್ದಿ ತುಮಕೂರು ನಗರ ಪ್ರಮುಖ ಸುದ್ದಿ ರಾಜಕೀಯ ರಾಜ್ಯ

Tumkurnews.in
ತುಮಕೂರು: ‘ಮಾಜಿ ಶಾಸಕ ಎಚ್.ನಿಂಗಪ್ಪನವರ ಋಣ ನನ್ನ ಮೇಲಿದೆ, ಇವರನ್ನು ಮತ್ತೊಮ್ಮೆ ವಿಧಾನಸಭೆಗೆ ಕರೆದೊಯ್ಯುತ್ತೇನೆ’ ಎಂದು ಕೇಂದ್ರ ಸಚಿವ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದು, ಗ್ರಾಮಾಂತರ ಕ್ಷೇತ್ರದಲ್ಲಿ ಕೋಲಾಹಲ ಎಬ್ಬಿಸಿದೆ.
ಸದ್ಯ ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಯಿಂದ ಬಿ.ಸುರೇಶ್ ಗೌಡ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿ ಉಂಟಾಗಿರುವ ಹಿನ್ನೆಲೆಯಲ್ಲಿ ಸಹಜವಾಗಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಮುಂದಿನ 2028ರ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಬಿಜೆಪಿ ಶಾಸಕ ಬಿ.ಸುರೇಶ್ ಗೌಡರನ್ನೇ ಕಣಕ್ಕಿಳಿಸುವ ಭರವಸೆಯಲ್ಲಿದ್ದಾರೆ. ಆದರೇ ಇದೀಗ ಕುಮಾರ ಸ್ವಾಮಿ ನೀಡಿರುವ ಹೇಳಿಕೆ ಗ್ರಾಮಾಂತರ ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸಿದೆ.
ಟ್ವಿಸ್ಟ್ ಮೇಲೆ ಟ್ವಿಸ್ಟ್!: ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಹಿಂದಿನಿಂದಲೂ ಬಿಜೆಪಿ-ಜೆಡಿಎಸ್ ನಡುವೆ ಪ್ರಬಲ ಪೈಪೋಟಿಯ ಚುನಾವಣೆ ನಡೆದುಕೊಂಡು ಬಂದಿದೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಡಿ.ಸಿ ಗೌರಿಶಂಕರ್ ಅವರನ್ನು ಬಿಜೆಪಿಯ ಸುರೇಶ್ ಗೌಡ ಸೋಲಿಸಿದ್ದರು. ಆ ಬಳಿಕ ಬಿಜೆಪಿ-ಜೆಡಿಎಸ್ ನಡುವೆ ನಡೆದ ಮೈತ್ರಿ ವಿರೋಧಿಸಿ ಮಾಜಿ ಶಾಸಕ ಡಿ.ಸಿ ಗೌರಿಶಂಕರ್ ಕಾಂಗ್ರೆಸ್ ಸೇರ್ಪಡೆಗೊಂಡರು. ನಾವಿಕನಿಲ್ಲದ ದೋಣಿಯಂತಿದ್ದ ಗ್ರಾಮಾಂತರದ ಜೆಡಿಎಸ್‌ಗೆ ಕಾಂಗ್ರೆಸ್‌ನಿಂದ ಎಚ್.ನಿಂಗಪ್ಪ ಮರಳಿ ಬಂದರು. ಈ ಬೆಳವಣಿಗೆಗಳ ನಡುವೆ 2028ರಲ್ಲಿ ಮೈತ್ರಿಯಿಂದ ಸುರೇಶ್ ಗೌಡ ಮತ್ತು ಕೈ ಪಡೆಯಿಂದ ಡಿ.ಸಿ ಗೌರಿಶಂಕರ್ ಮುಖಾಮುಖಿಯಾಗಲಿದ್ದಾರೆ ಎಂದು ಜನತೆ ನಿರೀಕ್ಷಿಸಿದ್ದರು. ಆದರೇ ಎಚ್.ಡಿ ಕುಮಾರಸ್ವಾಮಿ, ಎಚ್.ನಿಂಗಪ್ಪರ ಹೆಸರು ಹೇಳುವ ಮೂಲಕ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟಿದ್ದಾರೆ.
ಸುರೇಶ್ ಗೌಡರ ನಡೆ ಏನು?: ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಎಚ್.ನಿಂಗಪ್ಪ ಕಣಕ್ಕಿಳಿದರೆ ಹಾಲಿ ಶಾಸಕ ಬಿ.ಸುರೇಶ್ ಗೌಡರ ನಡೆ ಏನು ಎನ್ನುವುದು ಗಂಭೀರ ಪ್ರಶ್ನೆಯಾಗಿದೆ. ಟಿಕೆಟ್ ತ್ಯಾಗ ಮಾಡುವಷ್ಟು ಉದಾರಿ ಅವರಲ್ಲ, ವರಿಷ್ಠರ ತೀರ್ಮಾನವನ್ನು ಮೀರುವವರೂ ಅಲ್ಲ. ಹಾಗಾಗಿ ಮೈತ್ರಿ ಪಾಲಿಗೆ ಇದು ಕಗ್ಗಂಟಾಗಲಿದೆ. ಆದಾಗ್ಯೂ ಎಚ್.ಡಿ ಕುಮಾರಸ್ವಾಮಿ ಅವರು ಎಚ್.ನಿಂಗಪ್ಪರನ್ನು ವಿಧಾನಸಭೆಗೆ ಕರೆದೊಯ್ಯುತ್ತೇನೆ ಎಂದಿದ್ದಾರಷ್ಟೇ, ಯಾವ ಕ್ಷೇತ್ರದಿಂದ ಎಂದು ಹೇಳಿಲ್ಲ. ಇದು ಸದ್ಯ ಬಿಜೆಪಿ ಕಾರ್ಯಕರ್ತರಿಗೆ ನಿಟ್ಟುಸಿರು ಬಟ್ಟಂತಾಗಿದೆ. ಹೀಗಿದ್ದರೂ ಕ್ಷೇತ್ರದ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ನಡುವೆ ಹುಳ ಬಿಟ್ಟಂತಾಗಿರುವುದಂತೂ ಸತ್ಯ.
**
ಸಂಚಲನ ಸೃಷ್ಟಿಸಿದ ಹೇಳಿಕೆ:
ಎಚ್.ನಿಂಗಪ್ಪರನ್ನು ಯಾವ ಕ್ಷೇತ್ರದಿಂದ ವಿಧಾನಸಭೆಗೆ ಕರೆದೊಯ್ಯುವೆ ಎಂದು ಎಚ್.ಡಿ ಕುಮಾರಸ್ವಾಮಿ ಬಹಿರಂಗಪಡಿಸಿಲ್ಲ. ಹೀಗಾಗಿ ಯಾವ ಅರ್ಥದಲ್ಲಿ ಎಚ್.ನಿಂಗಪ್ಪರ ಹೆಸರು ಹೇಳಿದ್ದಾರೆಂಬುದು ಕ್ಷೇತ್ರದ ಜನರಿಗೆ ಅರ್ಥವಾಗುತ್ತಿಲ್ಲ. ಈ ನಡುವೆ ಕ್ಷೇತ್ರ ಪುನರ್ ವಿಂಗಡಣೆಯಾದಲ್ಲಿ ಹೆಬ್ಬೂರು ಗ್ರಾಮಾಂತರದಿಂದ ಬೇರೆಯಾಗಿ ಪ್ರತ್ಯೇಕ ಕ್ಷೇತ್ರವಾಗುವ ನಿರೀಕ್ಷೆಯಿದೆ. ಜೊತೆಗೆ ಒನ್ ನೇಷನ್ ಒನ್ ಎಲೆಕ್ಷನ್ ಜಾರಿಯಾಗಿ ವಿಧಾನಸಭೆಯಲ್ಲಿದ್ದವರನ್ನು ಲೋಕಸಭೆಗೆ ಕಳಿಸುವ ಬಗ್ಗೆ ಮೈತ್ರಿ ಆಲೋಚನೆ ಇರಬಹುದು. ಮುಂದೆ ವಿಧಾನ ಪರಿಷತ್ ಚುನಾವಣೆ ಬರಲಿದೆ. ಹೀಗಾಗಿ ಎಚ್.ಡಿ.ಕೆ ಲೆಕ್ಕಾಚಾರ ಏನಿರಬಹುದು ಎನ್ನುವುದು ಕುತೂಹಲಕಾರಿಯಾಗಿದ್ದು, ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದೆ.
**
ಎಚ್.ಡಿ.ಕೆ ಹೇಳಿದ್ದೇನು?:
ಮಾಜಿ ಶಾಸಕ ಎಚ್.ನಿಂಗಪ್ಪನವರ ಋಣ ನನ್ನ ಮೇಲಿದೆ, ಇವರನ್ನು ಮತ್ತೊಮ್ಮೆ ವಿಧಾನಸಭೆಗೆ ಕರೆದೊಯ್ಯುತ್ತೇನೆ. ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಚ್.ನಿಂಗಪ್ಪ ಒಮ್ಮೆ ಶಾಸಕರಾಗಿ ಮುಖ್ಯಮಂತ್ರಿಯಾಗಲು ನನಗೆ ನೆರವಾಗಿದ್ದರು. ಅವರ ಋಣ ನನ್ನ ಮೇಲಿದೆ. ನಿಂಗಪ್ಪನವರನ್ನು ಮತ್ತೊಮ್ಮೆ ವಿಧಾನಸಭೆಗೆ ಕರೆದೊಯ್ಯಬೇಕೆಂಬ ಆಸೆ ಇದೆ, ಆ ಕೆಲಸವನ್ನು ಮಾಡಿಯೇ ತೀರುತ್ತೇನೆ. ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಸಚ್ಛಾರಿತ್ರ ನಾಯಕರಾಗಿರುವ ನಿಂಗಪ್ಪರಂತಹವರ ಅಗತ್ಯವಿದೆ. ಇವರನ್ನು ವಿಧಾನ ಸಭೆಗೆ ಮತ್ತೊಮ್ಮೆ ಕರೆದುಕೊಂಡು ಹೋಗುತ್ತೇನೆ. ನಿಂಗಪ್ಪನವರ ಬಳಿ ದುಡ್ಡಿಲ್ಲ ಎಂದು ಕಳೆದ ಚುನಾವಣೆಯಲ್ಲಿ ಅಪಪ್ರಚಾರ ಮಾಡಿದ್ದು, ಅವರ ಸೋಲಿಗೆ ಕಾರಣವಾಯಿತು. ನಿಂಗಪ್ಪನವರು ಮತ್ತೆ ವಿಧಾನಸಭೆಗೆ ಬರಬೇಕು ಎಂಬುದು ತಮ್ಮ ಅಭಿಲಾಷೆ. ಅದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
– ಎಚ್.ಡಿ.ಕುಮಾರಸ್ವಾಮಿ.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *