ಸೌದಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಉಮ್ರಾ ಯಾತ್ರಿಕರ ಸುರಕ್ಷಿತ ವಾಪಸಾತಿಗೆ ಒತ್ತಾಯ

Travel ಪ್ರಮುಖ ಸುದ್ದಿ ರಾಜ್ಯ

ಸೌದಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಉಮ್ರಾ ಯಾತ್ರಿಕರ ಸುರಕ್ಷಿತ ವಾಪಸಾತಿಗೆ ಒತ್ತಾಯ

Tumkurnews.in

ತುಮಕೂರು: ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ಸೌದಿ ಅರೇಬಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ತುಮಕೂರು ಜಿಲ್ಲೆಯ ಉಮ್ರಾ ಯಾತ್ರಿಕರ ಸುರಕ್ಷತೆ ಹಾಗೂ ತಾಯ್ನಾಡಿಗೆ ಸುರಕ್ಷಿತವಾಗಿ ಮರಳುವುದನ್ನು ಖಚಿತಪಡಿಸಲು ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ತಾಜುದ್ದೀನ್ ಶರೀಫ್ ಆಗ್ರಹಿಸಿದ್ದಾರೆ.

ವಿಮಾನಗಳ ರದ್ದತಿ ಹಾಗೂ ಪ್ರಯಾಣದ ಅನಿಶ್ಚಿತತೆಯಿಂದ ಯಾತ್ರಿಕರು ತೀವ್ರ ಆತಂಕ ಮತ್ತು ತೊಂದರೆ ಅನುಭವಿಸುತ್ತಿದ್ದಾರೆ. ವಿಶೇಷವಾಗಿ ಮಹಿಳೆಯರು, ಮಕ್ಕಳು, ವೃದ್ಧರು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ಯಾತ್ರಿಕರ ಪರಿಸ್ಥಿತಿಯ ಬಗ್ಗೆ ಸರ್ಕಾರ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರವು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ಸಂಬಂಧಿತ ವಿಮಾನಯಾನ ಸಂಸ್ಥೆಗಳೊಂದಿಗೆ ತುರ್ತು ಸಮನ್ವಯ ಸಾಧಿಸಬೇಕು. ಸಂಕಷ್ಟದಲ್ಲಿರುವ ಯಾತ್ರಿಕರ ನಿಖರ ಮಾಹಿತಿಯನ್ನು ಸಂಗ್ರಹಿಸಿ, ಅವರಿಗೆ ಸುರಕ್ಷಿತ ವಸತಿ, ಆಹಾರ, ವೈದ್ಯಕೀಯ ನೆರವು ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಅಲ್ಲದೆ, ವಿಶೇಷ ವಿಮಾನಗಳ ವ್ಯವಸ್ಥೆ ಸೇರಿದಂತೆ ಪರ್ಯಾಯ ಪ್ರಯಾಣ ಮತ್ತು ಸುರಕ್ಷಿತ ವಾಪಸಾತಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಸಂಕಷ್ಟದಲ್ಲಿರುವ ಯಾತ್ರಿಕರು ಹಾಗೂ ಅವರ ಕುಟುಂಬದವರಿಗೆ ವಿಶ್ವಾಸಾರ್ಹ ಮತ್ತು ನಿರಂತರ ಮಾಹಿತಿ ಒದಗಿಸಲು ರಾಜ್ಯ ಸರ್ಕಾರ ತುರ್ತು ಸಹಾಯವಾಣಿ ಆರಂಭಿಸಬೇಕು. ಈ ಕಾರ್ಯದ ಮೇಲ್ವಿಚಾರಣೆಗಾಗಿ ನೋಡಲ್ ಅಧಿಕಾರಿಯನ್ನೂ ನೇಮಿಸಬೇಕು. ಯಾತ್ರಿಕರು ಸುರಕ್ಷಿತವಾಗಿ ಕರ್ನಾಟಕಕ್ಕೆ ಮರಳುವವರೆಗೆ ಸರ್ಕಾರ ನಿರಂತರ ನಿಗಾ ವಹಿಸಿ, ಅಗತ್ಯ ನೆರವು ಒದಗಿಸಬೇಕು ಎಂದು ತಿಳಿಸಿದ್ದಾರೆ.

ಮಾನವೀಯ ದೃಷ್ಟಿಕೋನದಿಂದ ಈ ಬಿಕ್ಕಟ್ಟನ್ನು ಗಂಭೀರವಾಗಿ ಪರಿಗಣಿಸಿ, ಸೌದಿ ಅರೇಬಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ತುಮಕೂರು ಜಿಲ್ಲೆಯ ಉಮ್ರಾ ಯಾತ್ರಿಕರ ಸುರಕ್ಷತೆ ಹಾಗೂ ತ್ವರಿತ ವಾಪಸಾತಿಯನ್ನು ಖಚಿತಪಡಿಸಲು ಮುಖ್ಯಮಂತ್ರಿ ತಕ್ಷಣ ಮಧ್ಯಪ್ರವೇಶಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಾಜುದ್ದೀನ್ ಶರೀಫ್ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *