ಆಗ್ನೇಯಕ್ಕೆ ಪದವೀಧರ ಕ್ಷೇತ್ರದ ಚುನಾವಣೆ; ಇಂದು ಫಲಿತಾಂಶ

ಜಿಲ್ಲಾ ಸುದ್ದಿ ತಾಲ್ಲೂಕು ತುಮಕೂರು ನಗರ ಪ್ರಮುಖ ಸುದ್ದಿ ರಾಜಕೀಯ ರಾಜ್ಯ

ಆಗ್ನೇಯಕ್ಕೆ ಪದವೀಧರ ಕ್ಷೇತ್ರದ ಚುನಾವಣೆ; ಇಂದು ಫಲಿತಾಂಶ

ಗೆಲುವಿನ ನಿರೀಕ್ಷೆಯಲ್ಲಿ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು; 2028ರ ಚುನಾವಣೆಗೆ ದಿಕ್ಸೂಚಿಯಾಗಲಿದೆಯೇ ಫಲಿತಾಂಶ

Tumkurnews.in
ತುಮಕೂರು: ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯು ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಪ್ರಮುಖ ಚುನಾವಣೆಯಾಗಿದ್ದು, ಇಂದು ಫಲಿತಾಂಶ ಹೊರ ಬೀಳಲಿದೆ.
ತುಮಕೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಬೃಹತ್ ಭೂಪ್ರದೇಶ ಹಾಗೂ ಲಕ್ಷಾಂತರ ಪದವೀಧರ ಮತದಾರರನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ನಡೆದ ಚುನಾವಣೆಯು ಮುಂದಿನ ವಿಧಾನ ಸಭೆ ಚುನಾವಣೆಗೆ ದಿಕ್ಸೂಚಿ ಎಂದು ಕೂಡ ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳಿಗೆ ಈ ಚುನಾವಣೆ ಫಲಿತಾಂಶ ಪ್ರತಿಷ್ಠೆಯದ್ದಾಗಿದೆ.
​ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ್ ಮೊದಲ ಬಾರಿಗೆ ಚುನಾವಣೆ ಎದುರಿಸಿದ್ದು, ಗೆಲ್ಲುವ ವಿಶ್ವಾಸದಲ್ಲಿದ್ದಾರೆ‌. ಆಡಳಿತಾರೂಢ ಕಾಂಗ್ರೆಸ್ ಸರ್ಕಾರವು ತನ್ನ ಜನಪ್ರಿಯ ಯೋಜನೆಗಳು ಹಾಗೂ ಪದವೀಧರರು, ಯುವಕರ ನಿರುದ್ಯೋಗ, ಶಿಕ್ಷಣ ಮತ್ತು ಸೌಲಭ್ಯಗಳ ವಿಷಯವನ್ನು ಪ್ರಮುಖ ಅಸ್ತ್ರವನ್ನಾಗಿಸಿಕೊಂಡು ಪ್ರಚಾರ ನಡೆಸಿ ಮತದಾರರನ್ನು ಸೆಳೆದಿದೆ. ಮುಖ್ಯವಾಗಿ ಶಶಿಹುಲಿಕುಂಟೆ ಮಠ್ ತುಮಕೂರು ಜಿಲ್ಲೆಯವರದ್ದಾಗಿದ್ದು, ಮತದಾರರನ್ನು ಎಷ್ಟರಮಟ್ಟಿಗೆ ಸೆಳೆದಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.
​ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೆ. ಎಂ. ಸುರೇಶ್ ಅವರು ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಮೈತ್ರಿಕೂಟದ ಬಲದೊಂದಿಗೆ ಕಣಕ್ಕಿಳಿದ ಪರಿಣಾಮ ಹೆಚ್ಚು ಲಾಭದ ನಿರೀಕ್ಷೆಯಲ್ಲಿದ್ದಾರೆ. ಮೈತ್ರಿ ಪಕ್ಷಗಳ ನಾಯಕರು ಸಾಂಘಿಕವಾಗಿ ಪ್ರಚಾರ ನಡೆಸಿ ಮತದಾರರ ಬೆಂಬಲ ಗಳಿಸಲು ಶ್ರಮಿಸಿದ್ದಾರೆ. ಅದು ಎಷ್ಟರ ಮಟ್ಟಿಗೆ ಫಲ ನೀಡುತ್ತದೆ ಎಂದು ನಾಳೆ ಗೊತ್ತಾಗಲಿದೆ.
ಮುಖ್ಯವಾಗಿ ಬಿಜೆಪಿಯ ಹಾಲಿ ಪರಿಷತ್ ಸದಸ್ಯ ಡಾ.ಎಂ.ಚಿದಾನಂದ ಗೌಡ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಈ ಕ್ಷೇತ್ರವನ್ನು ಉಳಿಸಿಕೊಳ್ಳುವುದೇ ಅಥವಾ ಕೈ ಚೆಲ್ಲುವುದೇ ಎಂಬುದು ಕುತೂಹಲಕಾರಿಯಾಗಿದೆ.
ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಸುಮಾರು ಶೇ.73.58ರಷ್ಟು ಉತ್ತಮ ಪ್ರಮಾಣದ ಮತದಾನ ದಾಖಲಾಗಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ತುಮಕೂರು ಜಿಲ್ಲೆಯಲ್ಲಿ ಚುನಾವಣೆ ಅಕ್ರಮಗಳು ಬೆಳಕಿಗೆ ಬಂದಿಲ್ಲ ಮತ್ತು ಶಾಂತಿಯುತ ಮತದಾನಕ್ಕೆ ಮತದಾರರು ಕಾರಣರಾಗಿದ್ದಾರೆ. ಇದು ಯಾವ ಫಲಿತಾಂಶ ನೀಡಲಿದೆ ಎನ್ನುವುದು ನಾಳೆ ಬಹಿರಂಗವಾಗಲಿದೆ.
*
​ಮೈತ್ರಿಕೂಟದ ಬಲ:
ಚಿತ್ರದುರ್ಗ, ತುಮಕೂರು ಮತ್ತು ಕೋಲಾರ-ಚಿಕ್ಕಬಳ್ಳಾಪುರ ಭಾಗಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಎರಡಕ್ಕೂ ತಮ್ಮದೇ ಆದ ಸಾಂಪ್ರದಾಯಿಕ ಮತಬ್ಯಾಂಕ್ ಇದೆ. ಈ ಎರಡೂ ಪಕ್ಷಗಳ ಒಗ್ಗೂಡುವಿಕೆ ಮೈತ್ರಿ ಅಭ್ಯರ್ಥಿಗೆ ಪ್ಲಸ್ ಪಾಯಿಂಟ್ ಆಗಿ ಪರಿಣಮಿಸುವ ಸಾಧ್ಯತೆಯಿದೆ.
*
​ಆಡಳಿತ ಪಕ್ಷದ ಪ್ರಭಾವ:
ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷವು ತಮ್ಮ ಸರ್ಕಾರದ ಸಾಧನೆಗಳು ಹಾಗೂ ಗ್ಯಾರಂಟಿ ಯೋಜನೆಗಳ ಪ್ರಭಾವದ ಮೇಲೆ ವಿಶ್ವಾಸವಿರಿಸಿದೆ. ಜೊತೆಗೆ ಸ್ಥಳೀಯ ನಾಯಕರ ಸಕ್ರಿಯ ಭಾಗವಹಿಸುವಿಕೆ ಕಾಂಗ್ರೆಸ್‌ಗೆ ನೆರವಾಗಿದೆ.
*
​ಮೊದಲ ಪ್ರಾಶಸ್ತ್ಯದ ಮತಗಳ ಪ್ರಾಮುಖ್ಯತೆ:
ಪದವೀಧರ ಕ್ಷೇತ್ರದ ಚುನಾವಣೆಗಳಲ್ಲಿ ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ಸ್ಪಷ್ಟ ಬಹುಮತ ದೊರೆಯುವುದು ಅಪರೂಪ. ಹೀಗಾಗಿ ಎರಡನೇ ಮತ್ತು ಮೂರನೇ ಪ್ರಾಶಸ್ತ್ಯದ ಮತಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳು ಪಡೆಯುವ ಮತಗಳು ಅಂತಿಮ ಫಲಿತಾಂಶದ ನಿರ್ಣಾಯಕ ಅಂಶವಾಗಲಿವೆ.

Leave a Reply

Your email address will not be published. Required fields are marked *