ಬೆಂಗಳೂರಿನಿಂದ ಕುಣಿಗಲ್‍ಗೆ ಎಸಿ ಬಸ್ ಸೇವೆ: ಸಚಿವ ಬೈರತಿ ಸುರೇಶ್ ಹಸಿರು ನಿಶಾನೆ
Tumkurnews.in
ತುಮಕೂರು: ರಾಜಧಾನಿ ಬೆಂಗಳೂರಿನಿಂದ ಜಿಲ್ಲೆಯ ಕುಣಿಗಲ್‍ಗೆ 8 ಬಿಎಂಟಿಸಿ ಹವಾನಿಯಂತ್ರಿತ(ಎಸಿ) ವಜ್ರ ವಿಸ್ತಾರ ಬಸ್‍ಗಳ ಸಂಚಾರಕ್ಕೆ ಸಾರಿಗೆ ಸಚಿವ ಬೈರತಿ ಸುರೇಶ್ ಹಸಿರು ನಿಶಾನೆ ತೋರಿದರು.
ಕುಣಿಗಲ್‍ನಲ್ಲಿ ಬಸ್ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಸಾರಿಗೆ ಸಂಪರ್ಕದಿಂದ ಕುಣಿಗಲ್ ರಾಜಧಾನಿಗೆ ಇನ್ನಷ್ಟು ಹತ್ತಿರವಾಗಲಿದೆ ಎಂದರು.
ಕೇಂದ್ರ ಸರ್ಕಾರದಿಂದ 4550 ಎಲೆಕ್ಟ್ರಿಕ್ ಬಸ್ಸುಗಳನ್ನು ಬಿಎಂಟಿಸಿಗೆ ಪಡೆಯಲಾಗುತ್ತಿದೆ. ಈ ಬಸ್ಸುಗಳು ಮುಂದಿನ 4-5 ತಿಂಗಳಲ್ಲಿ ಸಾರ್ವಜನಿಕ ಸೇವೆಗೆ ಲಭ್ಯವಾಗಲಿವೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದೂರದೃಷ್ಟಿಯಿಂದಾಗಿ ಈ ಬಸ್ಸುಗಳನ್ನು ಪರಿಚಯಿಸಲಾಗುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಸುಮಾರು 21 ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಿದೆ ಎಂದು ಅವರು ಹೇಳಿದರು.
ಸರ್ಕಾರಿ ಸ್ವಾಮ್ಯದ 4 ಸಾರಿಗೆ ನಿಗಮಗಳ ಬಸ್‍ಗಳಲ್ಲಿ ಶಕ್ತಿ ಯೋಜನೆಯಡಿ 26473 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರ ವಾರ್ಷಿಕ 10 ಸಾವಿರ ಕೋಟಿ ರೂಪಾಯಿಗಳನ್ನು ಭರಿಸುತ್ತಿದೆ ಎಂದು ತಿಳಿಸಿದರು.
ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕ್ಷಣವೇ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಅದರಂತೆ ಸುಮಾರು 50 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸಲಾಗುತ್ತಿದೆ. ಇದಕ್ಕೆ ಸರ್ಕಾರ ವಾರ್ಷಿಕ 350-400 ಕೋಟಿ ರೂಪಾಯಿ ಹಣ ವ್ಯಯಿಸಲಿದೆ ಎಂದರು.
ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜನಪರ ಕಾಳಜಿಯಿಂದಾಗಿ ರಾಜ್ಯ ಸರ್ಕಾರ ಜನತೆಗೆ ಪಂಚ ಗ್ಯಾರಂಟಿ ಕಾರ್ಯಕ್ರಮಗಳನ್ನು ನೀಡಿದೆ. ಇದರಿಂದ ಕೋಟ್ಯಾಂತರ ಜನರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ರಾಜಧಾನಿ ವಿಸ್ತಾರ ಅಗತ್ಯ: ಬೆಂಗಳೂರು ನಗರ ಇನ್ನಷ್ಟು ವಿಸ್ತಾರವಾಗಬೇಕೆಂಬುದು ಸಿಎಂ ಡಿ.ಕೆ. ಶಿವಕುಮಾರ್ ಮತ್ತು ನಮ್ಮೆಲ್ಲರ ಆಶಯವಾಗಿದೆ. ಐಟಿ-ಬಿಟಿ ಸೇರಿದಂತೆ ಅನೇಕ ಕೈಗಾರಿಕೆಗಳು ಹೆಚ್ಚಾಗಬೇಕು. ಇದರಿಂದ ಉದ್ಯೋಗ ಅವಕಾಶಗಳು ಹೆಚ್ಚಲಿವೆ ಎಂದು ತಿಳಿಸಿದರು.
ನಂಬರ್ ಒನ್ ರಾಜ್ಯದ ಸಂಕಲ್ಪ: ನಮ್ಮ ಸರ್ಕಾರ ಹತ್ತು ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಮೂಲಕ ಕರ್ನಾಟಕವನ್ನು ದೇಶದಲ್ಲಿ ನಂಬರ್ ಒನ್ ರಾಜ್ಯವನ್ನಾಗಿ ಮಾಡಲು ನಾವೆಲ್ಲ ಪಣ ತೊಟ್ಟಿದ್ದೇವೆ ಎಂದು ಸಚಿವ ಬೈರತಿ ಸುರೇಶ್ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಹಾಗೂ ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್, ಶಾಸಕ ಡಾ.ರಂಗನಾಥ್ ಸೇರಿದಂತೆ ಅಧಿಕಾರಿಗಳು, ಮತ್ತಿತರ ಜನಪ್ರತಿನಿಧಿಗಳು ಹಾಜರಿದ್ದರು.
