ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂಭ್ರಮ ಕಾರ್ಯಕ್ರಮ
Tumkurnews.in
ತುಮಕೂರು: ತಂದೆ-ತಾಯಿ, ಗುರುಗಳು ಮಕ್ಕಳಿಗೋಸ್ಕರ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುತ್ತಾರೆ. ಇದನ್ನು ಮಕ್ಕಳು ಅರ್ಥ ಮಾಡಿಕೊಂಡು ಬದುಕು ರೂಪಿಸಿಕೊಳ್ಳಬೇಕು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವ (ಪರೀಕ್ಷಾಂಗ) ಮೋಹನ್‌ಕುಮಾರ್ ಚಂದ್ರಗುತ್ತಿ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಓಪನ್ ಆಡಿಟೋರಿಯಂನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸರ್ಕಾರಿ ಪ್ರಥಮ ದರ್ಜೆ ಸಂಜೆ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ೨೦೨೬-೨೭ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್, ಸ್ಕೌಟ್ಸ್ ಅಂಡ್ ಗೈಡ್ಸ್, ಯುವ ರೆಡ್‌ಕ್ರಾಸ್ ಮತ್ತು ಇತರೆ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಸಂಭ್ರಮ: ೨೦೨೬-೨೭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೋಸ್ಕರ ಹೆತ್ತವರು ತಮ್ಮ ಬದುಕಿನುದ್ದಕ್ಕೂ ಶ್ರಮ ಪಡುತ್ತಾರೆ. ಮಕ್ಕಳು ಚೆನ್ನಾಗಿ ಓದಬೇಕು, ಒಳ್ಳೆಯ ಉದ್ಯೋಗಕ್ಕೆ ಸೇರಬೇಕು. ನಮ್ಮ ರೀತಿ ಆಗಬಾರದು ಎಂಬ ಅಭಿಲಾಷೆಯೊಂದಿಗೆ ಕಷ್ಟಪಟ್ಟು ದುಡಿದು ಓದಿಸುತ್ತಾರೆ. ಇದನ್ನು ಮಕ್ಕಳು ಅರಿತು ಪರಿಶ್ರಮದ ಅಧ್ಯಯನಕ್ಕೆ ಮುಂದಾಗಬೇಕು ಎಂದು ಸಲಹೆ ಮಾಡಿದರು.
ತಂದೆ-ತಾಯಿ ಹಾಗೂ ಗುರುಗಳು ನೀಡಿದ ಸಂಸ್ಕಾರವನ್ನು ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಪಾಲಿಸಬೇಕು. ಆಗ ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡುವ ಮೂಲಕ ಸಮಾಜದ ಉನ್ನತಿಗೂ ಕಾರಣಕರ್ತರಾಗಬೇಕು ಎಂದು ಹೇಳಿದರು.
ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದ ರಾಷ್ಟ್ರೀಯ ಅಥ್ಲೇಟ್ ಹಾಗೂ ತಿಪಟೂರು ಪಲ್ಲಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀನಿವಾಸ್ ಬಿ. ಮಾತನಾಡಿ, ಮನುಷ್ಯನಲ್ಲಿ ಸದೃಢ ದೇಹ ಇದ್ದರೆ ಸದೃಢ ಮನಸ್ಸು ಹೊಂದಲು ಸಾಧ್ಯ. ಇದಕ್ಕೆ ದೈಹಿಕವಾಗಿ ಶಕ್ತಿ ಸಾಮರ್ಥ್ಯವೂ ಅಗತ್ಯವಿದೆ ಎಂದರು.
ವಿದ್ಯಾರ್ಥಿಗಳು ದೈಹಿಕವಾಗಿ ಸದೃಢರಾಗಿರಬೇಕಾದರೆ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಇದರಿಂದ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು. ಶಿಕ್ಷಣ ಜತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರೊ. ವಸಂತ ಟಿ.ಡಿ. ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರ ಹೊಮ್ಮಲು ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್‌ನಂತರ ಚಟುವಟಿಕೆಗಳ ಬಹಳ ಮುಖ್ಯ. ಹಾಗಾಗಿ ವಿದ್ಯಾರ್ಥಿಗಳು ಓದಿನ ಜತೆಗೆ ಈ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಕಾಲೇಜಿನ ಈ ಎಲ್ಲಾ ಸಮಿತಿಗಳು ಸಕ್ರಿಯವಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಜನಪದ ಕಲಾವಿದ ಕಡಬಗೆರೆ ಮುನಿರಾಜು, ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ. ಸಿದ್ದಗಂಗಯ್ಯ ಎಸ್.ಜಿ., ಐಕ್ಯೂಎಸಿ ಸಂಚಾಲಕ ಡಾ. ಗಿರೀಶ್ ಡಿ., ಸ್ಥಳೀಯ ಅಧ್ಯಾಪಕರ ಘಟಕದ ಕಾರ್ಯದರ್ಶಿ ಡಾ. ಬಿ.ಆರ್. ರೇಣುಕಪ್ರಸಾದ್, ಕಾಲೇಜಿನ ಬೋಧಕ ಮತ್ತು ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ತುಮಕೂರು: ಭಾರತ್ ಯುವ ಜೋಡೋಗೆ ನೋಂದಾಯಿಸಿಕೊಳ್ಳಿ: ಯುವ ಕಾಂಗ್ರೆಸ್
What do you feel about this post?
Like
Love
Happy
Haha
Sad
