ಸವಿತಾ ಸಮಾಜದ ಮಕ್ಕಳ ಕೌಶಲ್ಯ ಪರಿಣತಿಗೆ ಮಾರ್ಗದರ್ಶನ ನೀಡಿ:
ಸವಿತಾ ಸಮಾಜದ ಸಮಾರಂಭದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್ ಸಲಹೆ
Tumkurnews.in
ತುಮಕೂರು: ಬದಲಾಗುತ್ತಿರುವ ಕಾಲಘಟ್ಟದಲ್ಲಿ ಸವಿತಾ ಸಮಾಜದವರು ತಮ್ಮ ವೃತ್ತಿಯನ್ನು ಆಧುನೀಕರಣಗೊಳಿಸಿ ಲಾಭದಾಯಕ ಮಾಡಿಕೊಳ್ಳಲು ಪ್ರಯತ್ನಿಸಬೇಕು. ತಮ್ಮ ಮಕ್ಕಳಿಗೆ ಉದ್ಯೋಗಾಧಾರಿತ ಕೌಶಲ್ಯ ತರಬೇತಿ ನೀಡಿ ಉತ್ತಮ ಬದುಕು ಕಟ್ಟಿಕೊಳ್ಳಲು ಮಾರ್ಗದರ್ಶನ ನೀಡಬೇಕು ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಸಲಹೆ ನೀಡಿದರು.
ಜಿಲ್ಲಾ ಸಮಿತಾ ಸಮಾಜದಿಂದ ಮಂಗಳವಾರ ನಗರದ ಸಮಾಜದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ, ಹಿರಿಯ ವೃತ್ತಿದಾರರಿಗೆ ಗೌರವಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕರು, ಸವಿತಾ ಸಮಾಜದ ಕುಲಕಸುಬನ್ನು ಈಗ ಬೇರೆ ಸಮುದಾಯದವರೂ ಅವಲಂಬಿಸಿದ್ದು ಪೈಪೋಟಿ ಎದುರಿಸಬೇಕಾಗಿದೆ. ಕಾಲಕ್ಕೆ ತಕ್ಕಂತೆ ಆಧುನಿಕರಣಗೊಳಿಸಿಕೊಂಡು ವೃತ್ತಿ ಸವಾಲುಗಳನ್ನು ಎದುರಿಸಬೇಕಾಗಿದೆ ಎಂದರು.
ಸವಿತಾ ಸಮಾಜದವರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಬೇಕು, ಕೈಗಾರಿಕೆ, ಮಾರುಕಟ್ಟೆಯ ಬೇಡಿಕೆಗೆ ಪೂರಕವಾದ ಕೌಶಲ್ಯಾಧಾರಿತ ಶಿಕ್ಷಣ ನೀಡಿದರೆ ಅವರು ದುಡಿಮೆ ಮಾರ್ಗ ಕಂಡುಕೊಂಡು ಬದುಕು ರೂಪಿಸಿಕೊಳ್ಳುತ್ತಾರೆ. ಇದಕ್ಕಾಗಿ ಮಕ್ಕಳಿಗೆ ಪರಿಣಿತರ ಮಾರ್ಗದರ್ಶನ, ಉದ್ಯೋಗಾಧಾರಿತ ತರಬೇತಿ ನೀಡಲು ಹಿರಿಯರು ಒತ್ತು ನೀಡಬೇಕು ಎಂದು ಹೇಳಿದರು.
ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಮಂಜೇಶ್ ಒಲಂಪಿಕ್ ಮಾತನಾಡಿ, ಸಮಾಜದ ಮಕ್ಕಳ ಶಿಕ್ಷಣಕ್ಕೆ ಸಂಘ ಹೆಚ್ಚು ಒತ್ತು ನೀಡುತ್ತಿದೆ. ಪ್ರತಿವರ್ಷ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದ ಅವರು, ಸವಿತಾ ಸಮಾಜದ ಈ ಕಟ್ಟಡ ನಿರ್ಮಾಣದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್ ಅವರು ದೊಡ್ಡ ಮಟ್ಟದಲ್ಲಿ ಸಹಕಾರ ನೀಡಿದ್ದಾರೆ, ಹೆಚ್ಚಿನ ಪ್ರಮಾಣದ ಅನುದಾನ ನೀಡಿ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಕಾರಣರಾಗಿದ್ದಾರೆ ಎಂದು ಅಭಿನಂದಿಸಿದರು.
ಸವಿತಾ ಸಮಾಜ ಅಭಿವೃದ್ಧಿ ನಿಗಮ ಅಧ್ಯಕ್ಷ ಎಂ.ಎಸ್. ಮುತ್ತುರಾಜು ಮಾತನಾಡಿ, ಅಭಿವೃದ್ಧಿ ನಿಗಮದಿಂದ 50 ಜನರಿಗೆ ವಾಹನ ಸಾಲ, ಒಂದೂವರೆ ಸಾವಿರ ಜನರಿಗೆ ಸ್ವಯಂ ಉದ್ಯೋಗ ಆರಂಭಿಸಲು ಸಾಲ ನೀಡಲಾಗಿದೆ. ಅಲ್ಲದೆ ಗಂಗಾ ಕಲ್ಯಾಣ ಯೋಜನೆ ಫಲಾನುಭವಿಗಳಿಗೆ ಕೊಳವೆಬಾವಿ ಕೊರೆದು ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೂ ನಿಗಮದಿಂದ ಸಹಾಯ ಮಾಡಲಾಗುತ್ತಿದೆ. ಇದರ ಸವಲತ್ತನ್ನು ಸಮಾಜ ಬಾಂಧವರು ಹೆಚ್ಚಿನದಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಆಧ್ಯಾತ್ಮಕ ಚಿಂತಕರಾದ ಬ್ರಹ್ಮಶ್ರೀ ಪ್ರಭು ಅವರು, ಸವಿತಾ ಸಮಾಜ ಅತಿ ಹಿಂದುಳಿದ ಸಮಾಜ. ಇಂತಹ ಪರಿಸ್ಥಿತಿಯಲ್ಲಿ ಸಮಾಜದ ಸಂಘಟನೆ ಮುಖ್ಯ. ಸಣ್ಣಪುಟ್ಟ ವಿಚಾರಗಳಿಗೆ ಮನಸ್ತಾಪ ಮಾಡಿಕೊಳ್ಳುವುದನ್ನು ಬಿಟ್ಟು, ಒಳ ಪಂಗಡಗಳ ಬೇಧ ತ್ಯಜಿಸಿ ಸಮಾಜದ ಏಳಿಗೆಗೆ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಕರೆ ನೀಡಿದರು.
ಸ್ಪೂರ್ತಿ ಡೆವಲಪರ್ಸ್ನ ವ್ಯವಸ್ಥಾಪಕ ನಿರ್ದೇಶಕ ಎಸ್.ಪಿ.ಚಿದಾನಂದ್ ಮಾತನಾಡಿ, ಸಣ್ಣ ಸಮಾಜಗಳು ರಾಜಕೀಯ ಶಕ್ತಿ ಬೆಳೆಸಿಕೊಳ್ಳಬೇಕು. ರಾಜಕೀಯ ಪಕ್ಷಗಳು ಇಂತಹ ಸಮಾಜದ ಮುಖಂಡರಿಗೆ ರಾಜಕೀಯ ಸ್ಥಾನಮಾನ ಕಲ್ಪಿಸಬೇಕು. ನಗರಪಾಲಿಕೆ, ಗ್ರಾಮ ಪಂಚಾಯ್ತಿಗಳಲ್ಲಾದರೂ ಸವಿತಾ ಸಮಾಜದವರಿಗೆ ಅವಕಾಶ ಕಲ್ಪಿಸಿ ಸಮಾಜವು ಮುಖ್ಯವಾಹಿನಿಗೆ ಬರಲು ನೆರವಾಗಬೇಕು ಎಂದು ಹೇಳಿದರು.
ಸವಿತಾ ಸಮಾಜದ ಜಿಲ್ಲಾ ಪ್ರತಿನಿಧಿ ಕೆ.ವಿ. ನಾರಾಯಣ್, ವಿತ್ರೀ ವೇಂಚರರ್ಸ್ನ ರವೀಶ್ ಅರಕೆರೆ, ನಿವೃತ್ತ ಪ್ರಾಚಾರ್ಯ ಡಾ.ಕೆ.ಸಿ. ಬಸವರಾಜು, ರಾಜ್ಯ ಮೀಸಲಾತಿ ಹೋರಾಟ ಸಮಿತಿಯ ಕೆ.ಎಸ್. ರಘುನಾಥ್, ನಗರ ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಟಿ.ಸಿ. ಪ್ರಭಾಕರ್, ಮುಖಂಡರಾದ ಟಿ.ಎನ್. ಗೋವಿಂದರಾಜು, ಮುಕುಂದರಾಜ್, ಇಂದ್ರಕುಮಾರ್, ವೀರಭದ್ರಪ್ಪ, ದಾಸರಾಜು, ಸ್ವದೇಶಿ ವಿಶ್ವನಾಥ್, ವರದರಾಜು, ಸೀತಾರಾಮಯ್ಯ, ಎ.ಎಸ್. ಸುರೇಶ್, ಪಾರ್ಥಸಾರಥಿ, ಮೇಲಾಕ್ಷಪ್ಪ, ಲೋಕೇಶ್, ಶಿವಕುಮಾರ್, ಗಂಗಾಧರ್, ಹರೀಶ್, ಉಮೇಶ್ ಮೊದಲಾದವರು ಭಾಗವಹಿಸಿದ್ದರು.
ಈ ವೇಳೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯೂಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಿಸಿ ಪ್ರೋತ್ಸಾಹಿಸಲಾಯಿತು. ಹಿರಿಯ ವೃತ್ತಿದಾರರು ಹಾಗೂ ವಾದ್ಯಗಾರರನ್ನು ಸನ್ಮಾನಿಸಿ ಗೌರವಿಸಲಾಯಿತು.
What do you feel about this post?
Like
Love
Happy
Haha
Sad
