ವಿಶ್ವ ಸೆರೆಬ್ರಲ್ ಪಾಲ್ಸಿ ದಿನಾಚರಣೆ: ವೈವಿಧ್ಯತೆಯಲ್ಲಿ ಅನನ್ಯರು, ಒಗ್ಗಟ್ಟಿನಲ್ಲಿ ಒಂದಾದವರು
Tumkurnews.in
ತುಮಕೂರು, ಅ. ೨೯: ಸುಖದಲ್ಲಿ ಭಾಗಿಯಾಗುವ ವ್ಯಕ್ತಿಗಳಿಗಿಂತ ಮನುಷ್ಯನ ದುಃಖದಲ್ಲಿ ಪಾಲ್ಗೊಳ್ಳುವುದು ಅತ್ಯಂತ ಶ್ರೇಷ್ಠವಾದ ಕಾರ್ಯ. ಆ ಕೆಲಸವನ್ನು ಮೊಬಿಲಿಟಿ ಇಂಡಿಯಾ ಸಂಸ್ಥೆ ಮಾಡುತ್ತಿದೆ. ವಿಕಲಚೇತನರು ಹಾಗೂ ವಿವಿಧ ರೀತಿಯ ನ್ಯೂನತೆಗಳಿಗೆ ತುತ್ತಾಗಿರುವ ಜನರ ಸೇವೆಯಲ್ಲಿ ಸಂಸ್ಥೆ ತೊಡಗಿಸಿಕೊಂಡಿದ್ದು, ಇದು ಶ್ಲಾಘನೀಯ ಕಾರ್ಯ ಎಂದು ಭಾರತೀಯ ವೈದ್ಯಕೀಯ ಸಂಘದ ತುಮಕೂರು ಜಿಲ್ಲಾ ಕಾರ್ಯದರ್ಶಿ ಡಾ. ಅರ್ಜುನ್ ವಿ.ಎ. ಅಭಿಪ್ರಾಯಪಟ್ಟರು.
ನಗರದ ಐಎಂಎ ಹಾಲ್ನಲ್ಲಿ ಮೊಬಿಲಿಟಿ ಇಂಡಿಯಾ ವತಿಯಿಂದ ಆಯೋಜಿಸಿದ್ದ ವಿಶ್ವ ಸೆರೆಬ್ರಲ್ ಪಾಲ್ಸಿ ದಿನ–೨೦೨೬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. “ವೈವಿಧ್ಯತೆಯಲ್ಲಿ ಅನನ್ಯರು, ಒಗ್ಗಟ್ಟಿನಲ್ಲಿ ಒಂದಾದವರು” ಎಂಬ ಧ್ಯೇಯವಾಕ್ಯದೊಂದಿಗೆ ಸಮನ್ವಯ, ಸ್ವಾವಲಂಬನೆ ಹಾಗೂ ಸಮಾನ ಅವಕಾಶಗಳ ಆಶಯದಡಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನೊಂದವರೊಂದಿಗೆ ಕೆಲಸ ಮಾಡುತ್ತಿರುವ ಮೊಬಿಲಿಟಿ ಇಂಡಿಯಾದ ದಿಕ್ಸೂಚಿ ಉತ್ತಮವಾಗಿದೆ. ಮನುಷ್ಯತ್ವ ಹಾಗೂ ಮಾನವೀಯತೆ ಕೇವಲ ಮಾತಿನಲ್ಲಿ ಇರದೆ ಕಾರ್ಯದಲ್ಲಿ ವ್ಯಕ್ತವಾಗಬೇಕು ಎಂದು ಹೇಳಿದರು.
ನಾನು ಸ್ನಾತಕೋತ್ತರ ವೈದ್ಯಕೀಯ ಪದವಿ ಓದುವಾಗ ಕ್ರೋಮೋಸೋಮ್ಗಳ ಅಸ್ವಾಭಾವಿಕ ವರ್ತನೆಗಳ ಕುರಿತು ಸಂಶೋಧನೆ ನಡೆಸಿದ್ದೆ. ಆ ಸಂದರ್ಭದಲ್ಲಿ ಮಕ್ಕಳ ಮೆದುಳಿನ ಪಾರ್ಶ್ವವಾಯುವಿಗೆ ಕ್ರೋಮೋಸೋಮ್ಗಳ ಅಸ್ವಾಭಾವಿಕತೆ ಕಾರಣವಾಗಿರಬಹುದೇ ಎಂಬ ಕುರಿತು ವಿಶ್ಲೇಷಣೆ ನಡೆಸಿದ್ದಾಗಿ ಡಾ. ಅರ್ಜುನ್ ವಿ.ಎ. ತಿಳಿಸಿದರು.
ಸೆರೆಬ್ರಲ್ ಪಾಲ್ಸಿ, ಅವಧಿಗೂ ಮುನ್ನ ಮಗು ಹುಟ್ಟುವುದು ಹಾಗೂ ಮಗು ಹುಟ್ಟಿದ ತಕ್ಷಣ ಅಳದೆ ಇರುವುದು ಮಗುವಿನ ಮೆದುಳಿನ ಮೇಲೆ ದುಷ್ಪರಿಣಾಮ ಬೀರಿ ಮೆದುಳಿನ ಪಾರ್ಶ್ವವಾಯು ಸಮಸ್ಯೆಗೆ ಕಾರಣವಾಗಬಹುದು. ಇದರಲ್ಲಿ ತಂದೆ-ತಾಯಿ ಹಾಗೂ ಸಮಾಜದ ಪಾತ್ರ ಕಡಿಮೆ. ಇಂತಹ ಮಕ್ಕಳ ಬಗ್ಗೆ ಧೃತಿಗೆಡದೆ ನಿರಂತರ ನಿಗಾ ಇರಿಸಿ, ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುವುದರಿಂದ ಮಗು ಸಾಮಾನ್ಯರಂತೆ ಜೀವನ ನಡೆಸಲು ಸಹಕಾರಿಯಾಗಬಹುದು ಎಂದರು.
ಸೆರೆಬ್ರಲ್ ಪಾಲ್ಸಿ ಕುರಿತು ವಿಶೇಷ ಉಪನ್ಯಾಸ ನೀಡಿದ ಮಕ್ಕಳ ನರರೋಗ ತಜ್ಞ ಡಾ. ನಿತಿನ್ ಆರ್., ಮಕ್ಕಳಲ್ಲಿ ಮೆದುಳಿನ ಪಾರ್ಶ್ವವಾಯು ಸಮಸ್ಯೆ ಕಾಣಿಸಿಕೊಳ್ಳಲು ನವಜಾತ ಶಿಶುವಿಗೆ ಆಮ್ಲಜನಕ ಹಾಗೂ ಗ್ಲೂಕೋಸ್ ಕೊರತೆಯೂ ಒಂದು ಕಾರಣವಾಗಬಹುದು ಎಂದು ತಿಳಿಸಿದರು.
ಮಗು ಹುಟ್ಟಿದ ತಕ್ಷಣ ಅಳುವುದರಿಂದ ಮೆದುಳಿಗೆ ಆಮ್ಲಜನಕ ದೊರೆಯುತ್ತದೆ. ಹುಟ್ಟಿದ ಅರ್ಧ ಗಂಟೆಯೊಳಗೆ ಎದೆಹಾಲು ಕುಡಿಸುವುದರಿಂದ ಮಗುವಿಗೆ ಅಗತ್ಯವಾದ ಗ್ಲೂಕೋಸ್ ದೊರೆಯುತ್ತದೆ. ಹೀಗಾಗಿ ಈ ಎರಡೂ ವಿಷಯಗಳ ಬಗ್ಗೆ ಪೋಷಕರು ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.
ಸಾವಿರ ಮಕ್ಕಳಲ್ಲಿ ಸುಮಾರು ಮೂವರು ಮಕ್ಕಳಲ್ಲಿ ಮಾತ್ರ ಇಂತಹ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಇದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಪೋಷಕರಲ್ಲಿ ಮದ್ಯಪಾನ, ಧೂಮಪಾನ, ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಅನೀಮಿಯಾದಂತಹ ಸಮಸ್ಯೆಗಳಿದ್ದರೆ ಮಕ್ಕಳಲ್ಲಿ ಮೆದುಳಿನ ಪಾರ್ಶ್ವವಾಯು ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಹುಟ್ಟುವಾಗ ಮಗುವಿನ ತೂಕ ಕಡಿಮೆ ಇರುವುದು ಸಹ ಈ ಸಮಸ್ಯೆಗೆ ಕಾರಣವಾಗಬಹುದು ಎಂದರು.
ಇಂತಹ ಸಮಸ್ಯೆಗೆ ತುತ್ತಾದ ಮಗು ಪದೇ ಪದೇ ಮೂರ್ಛೆ ಸಮಸ್ಯೆಗೆ ಒಳಗಾಗಬಹುದು. ಇದರ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ಮಕ್ಕಳ ನರರೋಗ ತಜ್ಞ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆದರೆ ಉತ್ತಮ ಆರೋಗ್ಯದೊಂದಿಗೆ ಸಹಜ ಜೀವನ ನಡೆಸಲು ಸಾಧ್ಯ ಎಂದು ತಿಳಿಸಿದರು.
ವಿಶ್ವ ಸೆರೆಬ್ರಲ್ ಪಾಲ್ಸಿ ದಿನದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಮೊಬಿಲಿಟಿ ಇಂಡಿಯಾದ ಹಿರಿಯ ಕಾರ್ಯಕ್ರಮ ವ್ಯವಸ್ಥಾಪಕ ಆನಂದ್ ಎಸ್.ಎನ್., ಮೆದುಳಿನ ಪಾರ್ಶ್ವವಾಯು ಸಮಸ್ಯೆಗೆ ತುತ್ತಾದ ಮಕ್ಕಳು ಹಾಗೂ ಅವರ ಪೋಷಕರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಅಕ್ಟೋಬರ್ ೬ರಂದು ವಿಶ್ವದಾದ್ಯಂತ ಸೆರೆಬ್ರಲ್ ಪಾಲ್ಸಿ ದಿನ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಮೊಬಿಲಿಟಿ ಇಂಡಿಯಾ ತನ್ನ ಸಮುದಾಯ ಆಧಾರಿತ ಕಾರ್ಯಕ್ರಮದ ಭಾಗವಾಗಿ ಈ ದಿನವನ್ನು ಆಚರಿಸುತ್ತಿದೆ. ಮಕ್ಕಳ ಆರೈಕೆದಾರರೇ ನಮ್ಮ ಜೀವಾಳವಾಗಿದ್ದಾರೆ. ತುಮಕೂರು ಜಿಲ್ಲೆಯ ಐದು ತಾಲೂಕುಗಳಲ್ಲಿ ಸುಮಾರು ೯೩೭ ಮಕ್ಕಳೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದರು.
ಸೆರೆಬ್ರಲ್ ಪಾಲ್ಸಿಗೆ ತುತ್ತಾದ ಮಕ್ಕಳಲ್ಲಿ ದೈಹಿಕ ನ್ಯೂನತೆ ಇರಬಹುದೇ ಹೊರತು, ಮಾನಸಿಕವಾಗಿ ಅವರ ಸಾಮರ್ಥ್ಯವನ್ನು ಕಡಿಮೆ ಅಂದಾಜಿಸಬಾರದು. ಅವರ ಆಸೆ-ಆಕಾಂಕ್ಷೆಗಳನ್ನು ಈಡೇರಿಸಲು ನಾವೇನು ಮಾಡಬಹುದು, ಅವರಿಗೆ ದೊರೆಯುವ ವೈದ್ಯಕೀಯ ಚಿಕಿತ್ಸೆ, ಸಾಧನ-ಸಲಕರಣೆ ಹಾಗೂ ಗೃಹಾಧಾರಿತ ವ್ಯಾಯಾಮಗಳ ಕುರಿತು ಪೋಷಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಮೊಬಿಲಿಟಿ ಇಂಡಿಯಾ ಎಜಿಎಂ ಸಂಜಯ್ ಸಿಂಗ್, ಸಂಪನ್ಮೂಲ ವ್ಯಕ್ತಿಗಳಾದ ಜೈ ಸುಧಾ, ಪ್ರೀತಿ, ಕಿರಣ್, ರುಮಾನ, ಸುಧಾಮಣಿ ಹಾಗೂ ರೇಷ್ಮಾ ಉಪಸ್ಥಿತರಿದ್ದರು. ಸೆರೆಬ್ರಲ್ ಪಾಲ್ಸಿ ಸಮಸ್ಯೆಗೆ ತುತ್ತಾದ ಮಕ್ಕಳ ಆರೈಕೆದಾರರು ಹಾಗೂ ಮಕ್ಕಳ ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
