ಸಿದ್ಧಾರ್ಥ ದಂತ ಮಹಾವಿದ್ಯಾಲಯದಲ್ಲಿ ರ‍್ಯಾಗಿಂಗ್ ವಿರೋಧಿ ಜಾಗೃತಿ ಕಾರ್ಯಕ್ರಮ
Tumkurnews.in
ತುಮಕೂರು: ವಿದ್ಯಾರ್ಥಿಗಳಲ್ಲಿ ರ‍್ಯಾಗಿಂಗ್‌ನ ಮಾರಕ ಪರಿಣಾಮಗಳ ಕುರಿತು ಅರಿವು ಮೂಡಿಸುವ ಹಾಗೂ ಸುರಕ್ಷಿತ ಕ್ಯಾಂಪಸ್ ವಾತಾವರಣವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಗರದ ಶ್ರೀ ಸಿದ್ಧಾರ್ಥ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ರ‍್ಯಾಗಿಂಗ್ ವಿರೋಧಿ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.
ಕ್ಯಾಂಪಸ್‌ನ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ನಿವೃತ್ತ ಜಿಲ್ಲಾ ನ್ಯಾಯಾಧೀಶ ಗಣೇಶ್ ಬಿ. ಉದ್ಘಾಟಿಸಿ ಮಾತನಾಡಿ, ಕ್ಯಾಂಪಸ್‌ನಲ್ಲಿ ರ‍್ಯಾಗಿಂಗ್ ತಡೆಗಟ್ಟುವ ಕ್ರಮಗಳು ಹಾಗೂ ವಿದ್ಯಾರ್ಥಿಗಳಿಗೆ ಎದುರಾಗುವ ಕಿರುಕುಳ, ಬೆದರಿಕೆ ಮತ್ತು ತಾರತಮ್ಯದಿಂದ ರಕ್ಷಿಸುವ ಅಗತ್ಯತೆಯನ್ನು ವಿವರಿಸಿದರು.
ಸಮಾಜದಲ್ಲಿ ಪ್ರತಿಯೊಬ್ಬರೂ ಘನತೆ ಮತ್ತು ಆತ್ಮವಿಶ್ವಾಸದಿಂದ ಶಿಕ್ಷಣ ಪಡೆಯುವಂತಹ ವಾತಾವರಣವನ್ನು ಸೃಷ್ಟಿಸಲು ವಿದ್ಯಾರ್ಥಿಗಳು ಮುಂದಾಗಬೇಕು. ಅದರಲ್ಲೂ ರ‍್ಯಾಗಿಂಗ್ ಸಮಸ್ಯೆಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಪಿ.ಎಂ. ಅಮ್ಮಂಗಿ ಮಾತನಾಡಿ, ರ‍್ಯಾಗಿಂಗ್‌ನ ದುಷ್ಪರಿಣಾಮಗಳು ಹಾಗೂ ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಪರಸ್ಪರ ಗೌರವದ ಅಗತ್ಯತೆಯ ಕುರಿತು ಬೆಳಕು ಚೆಲ್ಲಿದರು. ಅಲ್ಲದೆ, ರ‍್ಯಾಗಿಂಗ್ ತಡೆಗಟ್ಟಲು ಹಾಗೂ ಕ್ಯಾಂಪಸ್ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆಗಳು ಮತ್ತು ಪೊಲೀಸರ ನಡುವೆ ಸಹಕಾರ ಅಗತ್ಯ ಎಂದು ಹೇಳಿದರು.
ಪ್ರಾಂಶುಪಾಲ ಡಾ. ಪ್ರವೀಣ್ ಕುಡ್ವ ಮಾತನಾಡಿ, ಶಿಸ್ತು, ಪರಸ್ಪರ ಗೌರವ ಹಾಗೂ ಆರೋಗ್ಯಕರ ಶೈಕ್ಷಣಿಕ ವಾತಾವರಣವನ್ನು ಕಾಪಾಡಿಕೊಳ್ಳಬೇಕು. ಜೂನಿಯರ್ ಮತ್ತು ಸೀನಿಯರ್ ವಿದ್ಯಾರ್ಥಿಗಳ ನಡುವೆ ಸಕಾರಾತ್ಮಕ ಬಾಂಧವ್ಯ ಬೆಳೆಸಿಕೊಂಡು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ವಾರ್ಡನ್ ಡಾ. ರವಿ ಭಾಸ್ಕರ್, ಪೋಷಕರ ಪ್ರತಿನಿಧಿ ಶ್ರೀಮತಿ ಅನಿತಾ, ಸಂಸ್ಥೆಯ ಕೌನ್ಸಿಲರ್ ಡಾ. ಚೈತನ್ಯ ವರ್ಧನ್ ಹಾಗೂ ‘ಕಲ್ಪತರು ವಾಯ್ಸ್’ ಇಂಗ್ಲಿಷ್ ದಿನಪತ್ರಿಕೆಯ ಮುಖ್ಯ ಸಂಪಾದಕಿ ಹುಸ್ನಾ ಅರಾ ಭಾಗವಹಿಸಿದ್ದರು.
ರ‍್ಯಾಗಿಂಗ್ ಮುಕ್ತ ಶೈಕ್ಷಣಿಕ ವಾತಾವರಣ ನಿರ್ಮಿಸುವಲ್ಲಿ ಅರಿವು, ಜಾಗರೂಕತೆ ಹಾಗೂ ಸಾಮುದಾಯಿಕ ಜವಾಬ್ದಾರಿಯ ಮಹತ್ವವನ್ನು ಈ ಕಾರ್ಯಕ್ರಮ ಮತ್ತಷ್ಟು ಪುಷ್ಟೀಕರಿಸಿತು.
