ಹಿರಿಯ ನಾಗರಿಕರು ಆರೋಗ್ಯ ಕಾಪಾಡಿಕೊಳ್ಳಿ – ಡಾ. ವೈ.ಆರ್. ರಶ್ಮಿ
Tumkurnews.in
ತುಮಕೂರು: ಎಲ್ಲರೂ ವೈದ್ಯರ ಸಲಹೆ ಮತ್ತು ನೆರವು ಪಡೆದು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಅದರಲ್ಲೂ ಹಿರಿಯ ನಾಗರಿಕರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ವಯಸ್ಸಾಗುತ್ತಿದ್ದಂತೆ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುವುದರಿಂದ ಸೂಕ್ತ ಸಮಯದಲ್ಲಿ ವೈದ್ಯರ ನೆರವು ಪಡೆಯಬೇಕು ಎಂದು ಸಿದ್ಧಗಂಗಾ ಮಠದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ. ವೈ.ಆರ್. ರಶ್ಮಿ ತಿಳಿಸಿದರು.
ತುಮಕೂರು ವೀರಶೈವ ಲಿಂಗಾಯಿತರ ಅಭಿವೃದ್ಧಿ ಸಮಿತಿ ಹಾಗೂ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ವತಿಯಿಂದ ಮಾರುತಿನಗರದ ವೈಷ್ಣವ ಸಮುದಾಯ ಭವನದಲ್ಲಿ ಆಯೋಜಿಸಿದ್ದ ನವರಾತ್ರಿ ನಾಡಹಬ್ಬದ ವೈಶಿಷ್ಟ್ಯತೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ವಯಸ್ಸಾಗುತ್ತಿದ್ದಂತೆ ಸ್ತನ ಕ್ಯಾನ್ಸರ್, ಚರ್ಮ ಸಂಬಂಧಿ ಕಾಯಿಲೆಗಳು, ಹೃದಯ ಸಮಸ್ಯೆ, ಬಿಪಿ, ಮಧುಮೇಹ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಆದ್ದರಿಂದ ವೈದ್ಯರ ಸಲಹೆ ಪಡೆದು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಟಿ.ಎಸ್. ಮೋಹನ್ ಕುಮಾರ್, ಧರ್ಮಕ್ಕಾಗಿ ದುಡಿಯೋಣ, ಧರ್ಮವನ್ನು ದುಡಿಸಿಕೊಳ್ಳುವುದು ಬೇಡ ಎಂಬ ಹಿರೇಮಠದ ಶ್ರೀಗಳ ವಾಣಿಯಂತೆ ಎಲ್ಲರೂ ಧರ್ಮವನ್ನು ಉಳಿಸಿ ಬೆಳೆಸಬೇಕು ಎಂದರು.
ನಾಡಹಬ್ಬ ದಸರಾವನ್ನು ಮೈಸೂರು ಯದುವಂಶದ ರಾಜರು ಪ್ರಾರಂಭಿಸಿದ್ದು, ಇಂದು ಅದು ನಾಡಹಬ್ಬವಾಗಿ ಬೆಳೆದಿದೆ. ತಾಯಿ ಚಾಮುಂಡೇಶ್ವರಿಯ ಮಹಿಮೆ ಅಪಾರವಾಗಿದ್ದು, ಆಕೆ ನಮ್ಮನ್ನು ಹಾಗೂ ನಮ್ಮ ನಾಡನ್ನು ಕಾಪಾಡುತ್ತಿದ್ದಾಳೆ. ನಾಡಿಗೆ ಉತ್ತಮ ಮಳೆ-ಬೆಳೆ ಬರಲೆಂದು ತಾಯಿಯಲ್ಲಿ ಪ್ರಾರ್ಥಿಸಬೇಕು ಎಂದರು.
ತಾಯಂದಿರು ಮಕ್ಕಳಲ್ಲಿ ಧರ್ಮದ ಬಗ್ಗೆ ಜ್ಞಾನ ತುಂಬಬೇಕು. ಪ್ರತಿನಿತ್ಯ ನಾಡಿನ ಸಾಧು-ಸಂತರು ಹಾಗೂ ದೇವರ ಕುರಿತು ತಿಳಿಸಬೇಕು. ಆಗ ಪ್ರತಿಯೊಬ್ಬ ಮಗುವೂ ಕುವೆಂಪು ಅವರು ಹೇಳಿದಂತೆ ವಿಶ್ವಮಾನವರಾಗುತ್ತಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಾಲನೇತ್ರಯ್ಯ, ತಾಯಂದಿರು ಮಕ್ಕಳಿಗೆ ಹಬ್ಬ-ಹರಿದಿನಗಳು, ವಚನಗಳು, ದೇವರ ಲೀಲೆಗಳು, ವೇದ, ಉಪನಿಷತ್ತು, ರಾಮಾಯಣ ಹಾಗೂ ಮಹಾಭಾರತದ ಕುರಿತು ತಿಳಿಸಬೇಕು ಎಂದರು.
ಕಾಯಕವೇ ಕೈಲಾಸ ಎಂಬಂತೆ ಎಲ್ಲರೂ ದುಡಿದು ಪ್ರಸಾದ ಸ್ವೀಕರಿಸಬೇಕು. ವಚನಗಳ ಮೌಲ್ಯ ಅಪಾರವಾಗಿದ್ದು, ೧೨ನೇ ಶತಮಾನದಲ್ಲಿ ವಚನಕಾರರು ನಾಡಿಗೆ ನೀಡಿದ ಕೊಡುಗೆ ಅನನ್ಯವಾಗಿದೆ. ಬಸವಣ್ಣ, ಅಕ್ಕಮಹಾದೇವಿ ಸೇರಿದಂತೆ ವಚನಕಾರರ ಕೊಡುಗೆ ನಾಡು-ನುಡಿಗೆ ಅಮೂಲ್ಯವಾಗಿದೆ ಎಂದು ಹೇಳಿದರು.
ಎಲ್ಲರೂ ಸೇವಾಕಾರ್ಯದಲ್ಲಿ ತೊಡಗಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಅನ್ನ, ಬಟ್ಟೆ ಹಾಗೂ ವಿದ್ಯೆ ನೀಡಿದಾಗ ಸಮಸಮಾಜ ನಿರ್ಮಾಣವಾಗುತ್ತದೆ. ಬಸವಣ್ಣ ಹಾಗೂ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳು ಬೋಧಿಸಿದ ಈ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ದಾಸೋಹಕ್ಕೆ ಮನ್ನಣೆ ನೀಡಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಮಲ್ಲಪ್ಪ, ಡಾ. ಗೀತಾ, ಎಸ್.ಆರ್. ಶಿವಶಂಕರ್, ವಿ.ಆರ್. ಮಂಜಣ್ಣ, ಕುಮಾರಸ್ವಾಮಿ (ಎಚ್ಎಂಟಿ), ಶ್ರೀಮತಿ ಜಯಶ್ರೀ, ಶ್ರೀಮತಿ ಸೌಭಾಗ್ಯ, ಆರ್.ಎಸ್. ವೀರಪ್ಪದೇವರು, ಕೆ.ಆರ್. ಮಂಜುಳಾ, ಗಂಗಾಧರ್, ಪ್ರೇಮಾರಾಧ್ಯ, ಅಂಬಿಕಾ, ಶಾಂತರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.
