ರೈತನ ಭೂಮಿ ಹರಾಜು ವಿರೋಧಿಸಿ ನ. ೨ರಂದು ಬೃಹತ್ ಪ್ರತಿಭಟನೆ

ಜಿಲ್ಲಾ ಸುದ್ದಿ ತಾಲ್ಲೂಕು ತುಮಕೂರು ನಗರ ಪ್ರಮುಖ ಸುದ್ದಿ

ರೈತನ ಭೂಮಿ ಹರಾಜು ವಿರೋಧಿಸಿ ನ. ೨ರಂದು ಬೃಹತ್ ಪ್ರತಿಭಟನೆ

Tumkurnews.in

ತುಮಕೂರು: ನಿಯಮಬಾಹಿರವಾಗಿ ರೈತನ ಭೂಮಿಯನ್ನು ಬ್ಯಾಂಕ್ ಅಧಿಕಾರಿಗಳು ಹಾಗೂ ಬಿಡ್ಡುದಾರರು ಸೇರಿ ಕಬಳಿಸಲು ಹೊರಟಿರುವ ತುರುವೇಕೆರೆ ಕರ್ನಾಟಕ ಬ್ಯಾಂಕ್ ಶಾಖೆಯ ಕ್ರಮವನ್ನು ವಿರೋಧಿಸಿ, ರೈತನ ಭೂಮಿಯನ್ನು ವಾಪಸ್ ನೀಡಬೇಕು ಹಾಗೂ ಆನ್‌ಲೈನ್ ಹರಾಜು ರದ್ದುಪಡಿಸಬೇಕು ಎಂದು ಆಗ್ರಹಿಸಿ ನವೆಂಬರ್ ೨ರಂದು ಸೋಮವಾರ ರೈತ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೧೧.೫೩ ಲಕ್ಷ ರೂ. ಸಾಲದ ಬಾಕಿಗೆ ಸುಮಾರು ೪ ಕೋಟಿ ರೂ. ಮೌಲ್ಯದ ಭೂಮಿಯನ್ನು ಕೇವಲ ೩೪.೮೦ ಲಕ್ಷ ರೂ.ಗಳಿಗೆ ಹರಾಜು ಮಾಡಿ, ಉಳಿದ ಹಣವನ್ನು ರೈತನಿಗೂ ನೀಡದೆ ಮೋಸ ಮಾಡಲಾಗಿದೆ ಎಂದು ಆರೋಪಿಸಿದರು.

ತುರುವೇಕೆರೆ ಕರ್ನಾಟಕ ಬ್ಯಾಂಕ್ ವಿರುದ್ಧ ನಡೆಯುವ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಭಾಗಗಳ ರೈತ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಇ-ಹರಾಜಿನ ಹೆಸರಿನಲ್ಲಿ ರೈತರ ಹೆಚ್ಚಿನ ಮೌಲ್ಯದ ಭೂಮಿಯನ್ನು ಕಡಿಮೆ ಬೆಲೆಗೆ ಹರಾಜು ಮಾಡಿ ಕಬಳಿಸುವ ಬ್ಯಾಂಕ್ ಅಧಿಕಾರಿಗಳ ಹುನ್ನಾರವನ್ನು ತಡೆಯುವ ನಿಟ್ಟಿನಲ್ಲಿ ನವೆಂಬರ್ ೨ರ ಹೋರಾಟ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.

ತುರುವೇಕೆರೆ ಕರ್ನಾಟಕ ಬ್ಯಾಂಕ್, ರೈತರು ಮತ್ತು ಬ್ಯಾಂಕ್ ಅಧಿಕಾರಿಗಳ ನಡುವಿನ ದ್ವಿಪಕ್ಷೀಯ ಒಪ್ಪಂದದಂತೆ ೯ ಲಕ್ಷ ರೂ. ಸಾಲ ಮರುಪಾವತಿ ಪಡೆದು ಭೂಮಿಯನ್ನು ರೈತನಿಗೆ ಹಸ್ತಾಂತರಿಸಬೇಕು. ಅಲ್ಲದೆ, ರೈತರ ಭೂಮಿ ಕಬಳಿಸುವ ಇ-ಹರಾಜು ಪದ್ಧತಿಯನ್ನು ರದ್ದುಪಡಿಸಿ, ಈ ಹಿಂದಿನಂತೆ ಬಹಿರಂಗ ಹರಾಜು ಪ್ರಕ್ರಿಯೆಯನ್ನು ಜಾರಿಗೆ ತರಬೇಕು ಎಂಬುದು ರೈತ ಸಂಘದ ಒತ್ತಾಯವಾಗಿದೆ ಎಂದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್, ಕಾರ್ಯಾಧ್ಯಕ್ಷರಾದ ಜೆ.ಎಂ. ವೀರಸಂಗಯ್ಯ ಹಾಗೂ ಎ. ಗೋವಿಂದರಾಜು, ರಾಜ್ಯ ಕಾರ್ಯದರ್ಶಿಗಳಾದ ವಸಂತಕುಮಾರ್, ರವಿಕಿರಣ್ ಪುಣಚ್ಚ, ಗೋಪಾಲ್ ಪಾಪೇಗೌಡ, ರಾಜ್ಯ ಉಪಾಧ್ಯಕ್ಷರು, ಮಹಿಳಾ ಘಟಕದ ಅಧ್ಯಕ್ಷರು, ವಿಭಾಗೀಯ ಮುಖಂಡರು ಹಾಗೂ ತುಮಕೂರು ಜಿಲ್ಲೆಯ ಎಲ್ಲಾ ತಾಲೂಕುಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ತುರುವೇಕೆರೆ ಕಸಬಾ ಹೋಬಳಿಯ ತಾಳೆಕೆರೆ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ಚಂದ್ರಯ್ಯ, ಕೃಷ್ಣಪ್ಪ, ನಾಗರಾಜು ಮತ್ತು ಆನಂದ ಅವರಿಗೆ ಸೇರಿದ ಸುಮಾರು ೪.೧೪ ಎಕರೆ ಭೂಮಿಯನ್ನು ಅಡಮಾನವಿಟ್ಟು ೨೦೦೫ರಲ್ಲಿ ಟ್ರ್ಯಾಕ್ಟರ್ ಸಾಲ ಹಾಗೂ ಬೆಳೆ ಸಾಲ ಪಡೆದಿದ್ದರು. ಹಲವಾರು ಕಂತುಗಳನ್ನು ಪಾವತಿಸಿದ್ದರೂ, ಕುಟುಂಬದ ಹಿರಿಯರ ಸಾವು ಹಾಗೂ ಬರಗಾಲದ ಹಿನ್ನೆಲೆಯಲ್ಲಿ ೨೦೧೩ರ ನಂತರ ಸಾಲದ ಕಂತುಗಳನ್ನು ಪಾವತಿಸಲು ಸಾಧ್ಯವಾಗಿರಲಿಲ್ಲ ಎಂದು ವಿವರಿಸಿದರು.

ಬ್ಯಾಂಕ್ ಇವರ ವಿರುದ್ಧ ೧೧.೫೮ ಲಕ್ಷ ರೂ.ಗಳಿಗೆ ನ್ಯಾಯಮಂಡಳಿಯಿಂದ ಡಿಕ್ರಿ ಪಡೆದು ಸುಮಾರು ೯ ವರ್ಷಗಳ ಕಾಲ ಯಾವುದೇ ಕ್ರಮ ಕೈಗೊಳ್ಳದೆ, ೨೦೨೪ರಲ್ಲಿ ಸದರಿ ಭೂಮಿಯನ್ನು ಆನ್‌ಲೈನ್ ಬಿಡ್ ಮೂಲಕ ೩೪.೮೦ ಲಕ್ಷ ರೂ.ಗಳಿಗೆ ಹರಾಜು ಮಾಡಿದೆ. ಈ ಕುರಿತು ಭೂಮಿಯ ಮಾಲೀಕರಿಗೆ ಸೂಕ್ತ ಮಾಹಿತಿ ನೀಡಿಲ್ಲ. ಅಲ್ಲದೆ, ಬ್ಯಾಂಕಿನ ಸಾಲದ ಮೊತ್ತಕ್ಕಿಂತ ಹೆಚ್ಚುವರಿಯಾಗಿ ಬಂದ ಹರಾಜು ಮೊತ್ತವನ್ನು ಕುಟುಂಬಕ್ಕೆ ನೀಡಿಲ್ಲ ಎಂದು ಆರೋಪಿಸಿದರು.

ರೈತ ಮುಖಂಡರೊಂದಿಗೆ ಬ್ಯಾಂಕ್ ಅಧಿಕಾರಿಗಳು ಮಾಡಿಕೊಂಡ ದ್ವಿಪಕ್ಷೀಯ ಒಪ್ಪಂದದಂತೆ ೯ ಲಕ್ಷ ರೂ. ಸಾಲ ಪಾವತಿಸಲು ಕುಟುಂಬ ಒಪ್ಪಿಕೊಂಡಿತ್ತು. ಈ ಸಂಬಂಧ ಐದು ಲಕ್ಷ ರೂ.ಗಳ ಡಿಡಿ ನೀಡಿದ್ದರೂ ಸಹ ಭೂಮಿಯನ್ನು ಹಿಂದಿರುಗಿಸದೆ ಬಿಡ್ಡುದಾರರಿಗೆ ಸ್ವಾಧೀನಪಡಿಸಲು ಮುಂದಾಗಿದೆ ಎಂದು ದೂರಿದರು.

ಬ್ಯಾಂಕಿನ ಈ ರೈತ ವಿರೋಧಿ ಕ್ರಮದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಲೀಡ್ ಬ್ಯಾಂಕ್ ಅಧಿಕಾರಿಗಳು ರೈತ ಹೋರಾಟಗಾರರೊಂದಿಗೆ ಮಾತುಕತೆ ನಡೆಸಿ, ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದು ಎ. ಗೋವಿಂದರಾಜು ತಿಳಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ. ಶಂಕರಪ್ಪ ಮಾತನಾಡಿ, ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದ್ದು, ಶೇ. ೯೦ರಷ್ಟು ಬೆಳೆ ನಾಶವಾಗಿದೆ. ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಕೊರತೆ ಉಂಟಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ರೈತರ ಸಾಲ ಮನ್ನಾಕ್ಕೆ ಮುಂದಾಗಬೇಕು ಹಾಗೂ ರೈತರಿಗೆ ಎಕರೆಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ಅಲ್ಲದೆ, ಹಿಂಬಾಗಿಲಿನ ಮೂಲಕ ರೈತರ ಭೂಮಿ ಕಬಳಿಸುವ ಇ-ಹರಾಜು ಪ್ರಕ್ರಿಯೆಯನ್ನು ರದ್ದುಪಡಿಸಬೇಕು. ನವೆಂಬರ್ ೨ರ ಹೋರಾಟದಲ್ಲಿ ಎಲ್ಲಾ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ರೈತ ಸಂಘದ ತುಮಕೂರು ತಾಲೂಕು ಅಧ್ಯಕ್ಷ ಚಿಕ್ಕಬೋರೇಗೌಡ ಮಾತನಾಡಿ, ನವೆಂಬರ್ ೨ರಂದು ತುರುವೇಕೆರೆ ಕರ್ನಾಟಕ ಬ್ಯಾಂಕ್ ವಿರುದ್ಧ ನಡೆಯುವ ಬೃಹತ್ ಹೋರಾಟದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಸುಮಾರು ೨ ಸಾವಿರಕ್ಕೂ ಅಧಿಕ ರೈತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ತುರುವೇಕೆರೆ ತಾಲೂಕು ಅಧ್ಯಕ್ಷ ಶ್ರೀನಿವಾಸಗೌಡ, ಯುವ ಘಟಕದ ಮಂಜುನಾಥ್, ಲೋಕೇಶ್, ಸಿದ್ದಗಂಗಣ್ಣ, ಉದಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *