ನಗರ ಸಾರಿಗೆ ಬಸ್‌ಗಳಲ್ಲಿ ‘ಸಿದ್ಧಗಂಗಾ’ ಹೆಸರು ನಾಪತ್ತೆ

ಜಿಲ್ಲಾ ಸುದ್ದಿ ತಾಲ್ಲೂಕು ತುಮಕೂರು ನಗರ ಪ್ರಮುಖ ಸುದ್ದಿ

ನಗರ ಸಾರಿಗೆ ಬಸ್‌ಗಳಲ್ಲಿ ‘ಸಿದ್ಧಗಂಗಾ’ ಹೆಸರು ನಾಪತ್ತೆ

ಹೆಸರು ತೆರವುಗೊಳಿಸಿರುವುದಕ್ಕೆ ಜಿ.ಎಸ್. ಬಸವರಾಜು ಆಕ್ಷೇಪ; ಲೋಪ ಸರಿಪಡಿಸದಿದ್ದರೆ ಘೆರಾವ್ ಎಚ್ಚರಿಕೆ

Tumkurnews.in

ತುಮಕೂರು: ಪ್ರಯಾಣಿಕರ ಅನುಕೂಲಕ್ಕಾಗಿ ಸುಮಾರು 15 ವರ್ಷಗಳ ಹಿಂದೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ತುಮಕೂರು ನಗರ ವ್ಯಾಪ್ತಿಯಲ್ಲಿ ಆರಂಭಿಸಿದ್ದ ‘ಸಿದ್ಧಗಂಗಾ ನಗರ ಸಾರಿಗೆ’ ಬಸ್‌ಗಳ ಮೇಲಿದ್ದ ‘ಸಿದ್ಧಗಂಗಾ’ ಹೆಸರನ್ನು ತೆರವುಗೊಳಿಸಿರುವುದಕ್ಕೆ ರಾಷ್ಟ್ರೀಯ ಮಾನವ ಪರಿಸರ ಸಂರಕ್ಷಣಾ ಪಡೆ ಅಧ್ಯಕ್ಷ ಜಿ.ಎಸ್. ಬಸವರಾಜು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಸಿದ್ಧಗಂಗಾ ನಗರ ಸಾರಿಗೆ’ ಸೇವೆಯು ಆರಂಭದಿಂದಲೂ ಲಾಭದಾಯಕವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ನಗರ ಸಾರಿಗೆ ಬಸ್‌ಗಳ ಮೇಲಿನ ‘ಸಿದ್ಧಗಂಗಾ’ ಹೆಸರನ್ನು ತೆರವುಗೊಳಿಸಲಾಗಿದೆ. ಸಾರಿಗೆ ಸಂಸ್ಥೆಯ ಈ ನಡೆಯನ್ನು ನಮ್ಮ ಸಂಸ್ಥೆ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಡಾ. ಶಿವಕುಮಾರ ಸ್ವಾಮೀಜಿ ಅವರ ಹೆಸರಿನ ರಸ್ತೆಯನ್ನು ಜಿಲ್ಲಾಡಳಿತವು ಅಧಿಕೃತ ದಾಖಲೆಗಳಲ್ಲಿ ಸಮರ್ಪಕವಾಗಿ ಬಳಸದೆ ನಿರ್ಲಕ್ಷಿಸಿರುವ ಆರೋಪಗಳಿವೆ. ಮತ್ತೊಂದೆಡೆ, ಡಾ. ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ನಡೆಯುತ್ತಿರುವ ಕಾಮಗಾರಿಗೆ ‘ಶ್ರೀ ಶಿವಕುಮಾರ ಸ್ವಾಮೀಜಿ ಸ್ಕ್ವೇರ್’ ಎಂದು ಹೆಸರಿಡಬೇಕೆಂಬ ಹೋರಾಟಗಳು ಆರಂಭವಾಗಿವೆ. ಇಂತಹ ಸಂದರ್ಭದಲ್ಲಿ ನಗರ ಸಾರಿಗೆ ಬಸ್‌ಗಳ ಮೇಲಿನಿಂದ ‘ಸಿದ್ಧಗಂಗಾ’ ಹೆಸರನ್ನು ಕೈಬಿಟ್ಟಿರುವುದರ ಹಿಂದೆ ಪ್ರಭಾವಿ ಹಾಗೂ ಕಾಣದ ಕೈಗಳು ಕೆಲಸ ಮಾಡಿರುವ ಅನುಮಾನವಿದೆ ಎಂದು ಜಿ.ಎಸ್. ಬಸವರಾಜು ಹೇಳಿದ್ದಾರೆ.

ತುಮಕೂರಿನವರೇ ಆದ ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್. ಶ್ರೀನಿವಾಸ್ ಅವರು ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ಅವರು ಈ ವಿಷಯವನ್ನು ತುರ್ತಾಗಿ ಗಂಭೀರವಾಗಿ ಪರಿಗಣಿಸಿ, ಆಗಿರುವ ಲೋಪವನ್ನು ಸರಿಪಡಿಸಬೇಕು ಎಂದು ಬಸವರಾಜು ಒತ್ತಾಯಿಸಿದ್ದಾರೆ.

ರಾಜ್ಯ ಮಾತ್ರವಲ್ಲದೆ ದೇಶದಾದ್ಯಂತ ಕೋಟ್ಯಂತರ ಭಕ್ತರು ‘ಸಿದ್ಧಗಂಗಾ’ ಹೆಸರನ್ನು ಅತ್ಯಂತ ಗೌರವ ಮತ್ತು ಭಕ್ತಿಭಾವದಿಂದ ಕಾಣುತ್ತಾರೆ. ಇಂತಹ ಸಂದರ್ಭದಲ್ಲಿ ಪೂಜ್ಯರ ಕರ್ಮಭೂಮಿಯಲ್ಲಿಯೇ ರಾಜ್ಯ ಸಾರಿಗೆ ಸಂಸ್ಥೆಯಿಂದ ಈ ರೀತಿಯ ಅಪಮಾನ ಮತ್ತು ಅಪಚಾರ ನಡೆಯುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಸಾರಿಗೆ ಸಂಸ್ಥೆಯು ತಕ್ಷಣ ಎಚ್ಚೆತ್ತುಕೊಂಡು ಆಗಿರುವ ಲೋಪವನ್ನು ಸರಿಪಡಿಸಬೇಕು. ‘ಸಿದ್ಧಗಂಗಾ’ ಹೆಸರಿಗೆ ಯಾವುದೇ ಚ್ಯುತಿ ಬಾರದಂತೆ ಗೌರವಪೂರ್ವಕವಾಗಿ ನಡೆದುಕೊಳ್ಳಬೇಕು. ಇಲ್ಲದಿದ್ದರೆ ಸಾರಿಗೆ ಸಂಸ್ಥೆಯ ಕಚೇರಿಗೆ ಘೆರಾವ್ ಹಾಕುವುದು ಅನಿವಾರ್ಯವಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *