ನಿರಾಶ್ರಿತರ ಕೇಂದ್ರದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಜಿಲ್ಲಾ ಸುದ್ದಿ ತಾಲ್ಲೂಕು ತುಮಕೂರು ನಗರ ಪ್ರಮುಖ ಸುದ್ದಿ

ನಿರಾಶ್ರಿತರ ಕೇಂದ್ರದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Tumkurnews.in

ತುಮಕೂರು: ಕರುನಾಡು ಕಾರ್ಮಿಕ ವೇದಿಕೆ ಹಾಗೂ ಕರ್ನಾಟಕ ರೈತ ಮತ್ತು ಶೋಷಿತರ ಕನ್ನಡ ಸಂಘಟನೆ ವತಿಯಿಂದ ಕೊರಾ ಬಳಿಯ ನಿರಾಶ್ರಿತರ ಕೇಂದ್ರದಲ್ಲಿ ಶುಕ್ರವಾರ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸ್ಫೂರ್ತಿ ಡೆವಲಪರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಎಸ್.ಪಿ. ಚಿದಾನಂದ್ ಅವರು, ನಿರಾಶ್ರಿತರ ಕೇಂದ್ರದಲ್ಲಿ ವಿದ್ಯಾವಂತರಿದ್ದೀರಿ, ಆಸ್ತಿವಂತರಿದ್ದೀರಿ, ಬಂಧು ಬಳಗದವರಿದ್ದೀರಿ. ಎಲ್ಲೋ ಒಂದು ಕಡೆ ಕೌಟುಂಬಿಕ ಕಲಹಗಳು, ಮನಸ್ತಾಪಗಳು ಇರಬಹುದು. ಅವುಗಳಿಂದಾಗಿ ಕುಟುಂಬದಿಂದ ಹೊರಬಂದು ನಿರಾಶ್ರಿತರಾಗಿದ್ದೀರಿ. ಮುಂದಿನ ದಿನಗಳಲ್ಲಿ ನಿಮಗೂ ಕೂಡ ಒಳ್ಳೆಯ ಜೀವನ ಸಿಗುತ್ತದೆ ಎಂಬ ವಿಶ್ವಾಸವಿರಲಿ ಎಂದು ಧೈರ್ಯ ತುಂಬಿದರು.

ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿರುವ ನಮ್ಮ ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ನಮ್ಮಲ್ಲಿ ಶ್ರೇಷ್ಠ ಕಲಾವಿದರು, ಸಾಹಿತಿಗಳು ಹಾಗೂ ದಾರ್ಶನಿಕರು ಕನ್ನಡದ ಹಿರಿಮೆಯನ್ನು ಸಾರಿದ್ದಾರೆ. ಮಾತೃಭಾಷೆಯಾದ ಕನ್ನಡದ ಬಗ್ಗೆ ಎಲ್ಲರೂ ಅಭಿಮಾನ ಬೆಳೆಸಿಕೊಳ್ಳಬೇಕು. ಭಾಷೆಯನ್ನು ಬಳಸಬೇಕು ಮತ್ತು ಬೆಳೆಸಬೇಕು.

ಡಿವಿಜಿ ಅವರು ಭಗವದ್ಗೀತೆಯ ಯಥಾರ್ಥವನ್ನು ಜನರಿಗೆ ಸುಲಭವಾಗಿ ತಿಳಿಯುವಂತೆ ‘ಮಂಕುತಿಮ್ಮನ ಕಗ್ಗ’ ಎಂಬ ಶ್ರೇಷ್ಠ ಕೃತಿಯನ್ನು ರಚಿಸಿದ್ದಾರೆ. ಡಾ. ರಾಜ್‌ಕುಮಾರ್ ಅವರಂತಹ ಅನೇಕ ಕಲಾವಿದರು ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ನಗರಪಾಲಿಕೆ ಮಾಜಿ ಸದಸ್ಯ ಮಂಜುನಾಥ್ ಮಾತನಾಡಿ, ಯಾವುದೋ ಕಾರಣಕ್ಕಾಗಿ ಕುಟುಂಬದಿಂದ ದೂರವಾಗಿರಬಹುದು. ಆದರೆ ಇಲ್ಲಿ 350 ಜನ ಒಟ್ಟಾಗಿ ಇರುವುದರಿಂದ ಇದನ್ನೇ ಒಂದು ಕುಟುಂಬವೆಂದು ಭಾವಿಸಿಕೊಂಡು ಸಂತೋಷದಿಂದಿರಿ ಎಂದು ಹೇಳಿದರು.

ಕರುನಾಡು ಕಾರ್ಮಿಕ ವೇದಿಕೆ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ನೀವೂ ಎಲ್ಲರಂತೆ ಸಂತೋಷವಾಗಿರಬೇಕು ಎಂಬ ಉದ್ದೇಶದಿಂದ ಇಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ನಿಮಗೂ ಒಳ್ಳೆಯ ಕಾಲ ಬರುತ್ತದೆ. ಕುಟುಂಬದೊಂದಿಗೆ ಬಾಳುವ ಅವಕಾಶ ದೊರೆಯುತ್ತದೆ ಎಂದು ಆಶಯ ವ್ಯಕ್ತಪಡಿಸಿದರು.

ಮುಖಂಡ ಊರುಕೆರೆ ನಾಗೇಶ್ ಮೊದಲಾದವರು ಭಾಗವಹಿಸಿದ್ದರು. ನಿರಾಶ್ರಿತರ ಕೇಂದ್ರದ 350ಕ್ಕೂ ಹೆಚ್ಚು ನಿವಾಸಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *