‘ವೃತ್ತದಲ್ಲಿ ಶಿವಕುಮಾರ ಸ್ವಾಮೀಜಿಗಳ ಹೆಸರು ಉಳಿಸಿ’
ಸ್ವಾಮೀಜಿಗಳ ಹೆಸರಿನ ಬದಲಾವಣೆಗೆ ಮಠಾಧೀಶರು, ಮುಖಂಡರ ವಿರೋಧ
Tumkurnews.in
ತುಮಕೂರು: ನಗರದ ಡಾ. ಶಿವಕುಮಾರ ಸ್ವಾಮೀಜಿಗಳ ವೃತ್ತದ ಹೆಸರನ್ನು ಬದಲಾಯಿಸಲು ಮುಂದಾಗಿರುವ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹಾಗೂ ಜಿಲ್ಲಾಡಳಿತದ ಕ್ರಮವನ್ನು ವಿವಿಧ ಮಠಗಳ ಸ್ವಾಮೀಜಿಗಳು ಮತ್ತು ವಿವಿಧ ಸಮಾಜಗಳ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ. ತ್ರಿವಿಧ ದಾಸೋಹಿಗಳಾದ ಶಿವಕುಮಾರ ಸ್ವಾಮೀಜಿಗಳಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಆ ವೃತ್ತಕ್ಕೆ ‘ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಸ್ಕ್ವೇರ್’ ಎಂದು ನಾಮಕರಣ ಮಾಡಿ, ಸ್ವಾಮೀಜಿಗಳ ಸೇವೆಯನ್ನು ಸ್ಮರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಶುಕ್ರವಾರ ಸಂಜೆ ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ನಗರ ವೀರಶೈವ ಸಮಾಜ ಸೇವಾ ಸಮಿತಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಸಮಾಜದ ಅಧ್ಯಕ್ಷ ಕೋರಿ ಮಂಜುನಾಥ್, ಸ್ವಾಮೀಜಿಗಳ ವೃತ್ತವನ್ನು ಆಧುನಿಕವಾಗಿ ಅಭಿವೃದ್ಧಿಪಡಿಸುತ್ತಿರುವ ಜಿಲ್ಲಾಡಳಿತವು ಆ ವೃತ್ತಕ್ಕೆ ಸ್ವಾಮೀಜಿಗಳ ಹೆಸರನ್ನು ಕೈಬಿಟ್ಟು ‘ತುಮಕೂರು ಸ್ಕ್ವೇರ್’ ಎಂದು ಹೆಸರಿಡಲು ಮುಂದಾಗಿರುವುದು ಸ್ವಾಮೀಜಿಗಳ ಅಪಾರ ಭಕ್ತರಿಗೆ ನೋವುಂಟು ಮಾಡಿದೆ. ಯಾವುದೇ ಕಾರಣಕ್ಕೂ ಸ್ವಾಮೀಜಿಗಳ ಹೆಸರನ್ನು ಬದಲಾಯಿಸದೆ, ‘ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಸ್ಕ್ವೇರ್’ ಎಂದು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು.
ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೃತ್ತಕ್ಕೆ ಇಟ್ಟಿರುವ ಸ್ವಾಮೀಜಿಗಳ ಹೆಸರನ್ನು ಬದಲಾಯಿಸಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿದರು. ಡಾ. ಶಿವಕುಮಾರ ಸ್ವಾಮೀಜಿಗಳ ಸೇವೆಯಿಂದಾಗಿ ತುಮಕೂರು ವಿಶ್ವವಿಖ್ಯಾತವಾಗಿದೆ. ಸಿದ್ಧಗಂಗಾ ಮಠದ ದಾಸೋಹದ ಕಾರಣದಿಂದ ತುಮಕೂರು ನಗರವು ದಾಸೋಹದ ವಿಶ್ವವಿದ್ಯಾಲಯದಂತಾಗಿದೆ. ಸಿದ್ಧಗಂಗಾ ಮಠದ ಋಣ ತುಮಕೂರಿನ ಮೇಲಿದೆ ಎಂದರು.
ವಿಶ್ವದ ಪ್ರಸಿದ್ಧ ಸ್ಕ್ವೇರ್ಗಳ ಮಾದರಿಯಲ್ಲಿ ನಗರದ ವೃತ್ತಕ್ಕೆ ‘ಕರ್ನಾಟಕ ರತ್ನ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ ಸ್ಕ್ವೇರ್’ ಎಂದು ಹೆಸರಿಡಬೇಕು ಎಂದು ಹಿರೇಮಠದ ಶ್ರೀಗಳು ಅಭಿಪ್ರಾಯಪಟ್ಟರು.
ಬೆಟ್ಟದಹಳ್ಳಿ ಗವಿಮಠದ ಡಾ. ಚಂದ್ರಶೇಖರ ಸ್ವಾಮೀಜಿ, ಬೆಳ್ಳಾವಿ ಕಾರದೇಶ್ವರ ಮಠದ ಕಾರದ ವೀರಬಸವ ಸ್ವಾಮೀಜಿ, ಶಿವಗಂಗೆ ಹೊನ್ನಗವಿ ಮಠದ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತವು ಸ್ವಾಮೀಜಿಗಳ ಹೆಸರಿನ ವೃತ್ತದ ಹೆಸರನ್ನು ಬದಲಾಯಿಸಲು ನಡೆಸುತ್ತಿರುವ ಪ್ರಯತ್ನವನ್ನು ತೀವ್ರವಾಗಿ ಖಂಡಿಸಿದರು.
ಮಾಜಿ ಸಂಸದ ಜಿ. ಎಸ್. ಬಸವರಾಜು ಮಾತನಾಡಿ, “ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರೇ, ತುಮಕೂರು ನಗರವು ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದ್ದರೆ ಅದಕ್ಕೆ ಡಾ. ಶಿವಕುಮಾರ ಸ್ವಾಮೀಜಿಗಳ ಕೊಡುಗೆ ಅಪಾರ. ಸ್ವಾಮೀಜಿಗಳ ಹೆಸರನ್ನು ಕೈಬಿಟ್ಟು ವೃತ್ತದ ಹೆಸರನ್ನು ಬದಲಾಯಿಸುವ ಮೂಲಕ ಅವರ ಗೌರವಕ್ಕೆ ಧಕ್ಕೆ ತರಬೇಡಿ. ಇದನ್ನು ಭಕ್ತರು ಸಹಿಸುವುದಿಲ್ಲ,” ಎಂದು ಎಚ್ಚರಿಕೆ ನೀಡಿದರು.
ಬಾಳೆಹೊನ್ನೂರು ಪೀಠದ ರಂಭಾಪುರಿ ಜಗದ್ಗುರುಗಳು ಹಾಗೂ ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರು ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗದ ಕಾರಣ ಸಂದೇಶಗಳನ್ನು ಕಳುಹಿಸಿ, ಸ್ವಾಮೀಜಿಗಳ ಹೆಸರಿನ ವೃತ್ತದ ಹೆಸರನ್ನು ಬದಲಾಯಿಸುವ ಪ್ರಯತ್ನವನ್ನು ಖಂಡಿಸಿದರು.
ವಿಧಾನ ಪರಿಷತ್ತಿನ ಮಾಜಿ ಸದಸ್ಯ ಡಾ. ಎಂ. ಆರ್. ಹುಲಿನಾಯ್ಕರ್, ಸಿದ್ಧಗಂಗಾ ಆಸ್ಪತ್ರೆಯ ವ್ಯವಸ್ಥಾಪಕ ಡಾ. ಎಸ್. ಪರಮೇಶ್, ವಿವಿಧ ಸಮಾಜಗಳ ಮುಖಂಡರಾದ ಟಿ. ಆರ್. ಆಂಜನಪ್ಪ, ಡಾ. ಎಸ್. ನಾಗಣ್ಣ, ಟಿ. ಎಲ್. ಕುಂಭಯ್ಯ, ಪಿ. ಮೂರ್ತಿ, ಡಾ. ಧನಿಯಾಕುಮಾರ್, ಮಲ್ಲಸಂದ್ರ ಶಿವಣ್ಣ, ಮಂಜೇಶ್ ಒಲಂಪಿಕ್, ರಾಕ್ಲೈನ್ ರವಿಕುಮಾರ್, ಶಾಂತಕುಮಾರ್ ಸೇರಿದಂತೆ ವಿವಿಧ ಸಮಾಜಗಳ ಹಲವಾರು ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.
