ತುಮಕೂರು: ಧಾನ್ಯ ವರ್ತಕರು ನಗರದ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ; ಪರಮೇಶ್ವರ್
Tumkurnews.in
ತುಮಕೂರು: ಒಂದು ಸಂಸ್ಥೆ ಶತಮಾನ ಕಾಲ ನಿರಂತರವಾಗಿ ಕಾರ್ಯನಿರ್ವಹಿಸಿ ಸಮಾಜಮುಖಿ ಚಟುವಟಿಕೆಗಳ ಮೂಲಕ ಜನರ ವಿಶ್ವಾಸ ಗಳಿಸುವುದು ಸಾಮಾನ್ಯ ಸಂಗತಿಯಲ್ಲ. 1926ರಲ್ಲಿ ಪ್ರಾರಂಭವಾದ ಧಾನ್ಯ ವ್ಯಾಪಾರಿಗಳ ಸಂಘವು ನೂರು ವರ್ಷಗಳ ಸಾರ್ಥಕ ಸೇವೆಯನ್ನು ಸಲ್ಲಿಸಿರುವುದು ಹೆಮ್ಮೆಯ ಸಂಗತಿ. ಸಂಘದ ಹಿಂದಿನ ಸಾಧನೆಗಳನ್ನು ಸ್ಮರಿಸುವುದರ ಜೊತೆಗೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪರ ಕಾರ್ಯಗಳನ್ನು ಕೈಗೊಳ್ಳಲು ಈ ಶತಮಾನೋತ್ಸವ ಪ್ರೇರಣೆಯಾಗಲಿ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.
ನಗರದ ರಿಂಗ್ ರಸ್ತೆಯಲ್ಲಿನ ಆರ್.ಟಿ.ಸಿ ಸಭಾಂಗಣದಲ್ಲಿ ಭಾನುವಾರ ನಡೆದ ಧಾನ್ಯ ವ್ಯಾಪಾರಿಗಳ ಸಂಘದ ಶತಮಾನೋತ್ಸವದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತುಮಕೂರು ಹಲವು ದಶಕಗಳಿಂದ ಪ್ರಮುಖ ವ್ಯಾಪಾರ ಕೇಂದ್ರವಾಗಿ ಗುರುತಿಸಿಕೊಂಡಿದೆ. ಇಲ್ಲಿನ ವರ್ತಕರು ನಗರದ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ತಾವು ಚಿಕ್ಕವರಿದ್ದಾಗ ಮಂಡಿಪೇಟೆಯಲ್ಲಿ ನಡೆಯುತ್ತಿದ್ದ ವ್ಯಾಪಾರ ಚಟುವಟಿಕೆಗಳು ಹಾಗೂ ಅಲ್ಲಿನ ವರ್ತಕರು ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳು ತುಮಕೂರಿನ ಬೆಳವಣಿಗೆಗೆ ಪೂರಕವಾಗಿದ್ದವು.
1965-66ರ ಅವಧಿಯಲ್ಲಿ ದೇಶ ತೀವ್ರ ಬರಗಾಲವನ್ನು ಎದುರಿಸಿದಾಗ ಧಾನ್ಯ ವ್ಯಾಪಾರಿಗಳ ಸಂಘವು ಬಡವರಿಗೆ ನೆರವಾಗಲು ಮುಂದಾಗಿತ್ತು. ಆಹಾರ ಧಾನ್ಯಗಳನ್ನು ಸಂಗ್ರಹಿಸಿ, ಅವುಗಳನ್ನು ಬಡವರಿಗೆ ವಿತರಿಸುವುದು ಹಾಗೂ ಅನ್ನದಾನದ ಮೂಲಕ ಹಸಿದವರಿಗೆ ನೆರವಾಗುವಂತಹ ಮಾನವೀಯ ಕಾರ್ಯಗಳನ್ನು ಸಂಘ ಕೈಗೊಂಡಿತ್ತು. ಸಂಕಷ್ಟದ ಸಂದರ್ಭಗಳಲ್ಲಿ ಸಮಾಜದ ನೆರವಿಗೆ ಧಾವಿಸುವ ಸಂಘದ ಈ ಸೇವೆ ಶ್ಲಾಘನೀಯವಾಗಿದೆ ಎಂದರು.
ಸಿದ್ಧಗಂಗಾ ಮಠದ ಪೂಜ್ಯ ಶ್ರೀಗಳು ಇಂಜಿನಿಯರಿಂಗ್ ಕಾಲೇಜು ಪ್ರಾರಂಭಿಸುವ ಸಂದರ್ಭದಲ್ಲಿ ಧಾನ್ಯ ವ್ಯಾಪಾರಿಗಳ ಸಂಘವು ಮಹತ್ವದ ಸಹಕಾರ ನೀಡಿತ್ತು. ವ್ಯಾಪಾರದಿಂದ ನಾಲ್ಕಾಣೆಯಂತೆ ಹಣ ಸಂಗ್ರಹಿಸಿ, ಅಂದಿನ ಕಾಲದಲ್ಲಿ ಸುಮಾರು ಎರಡು ಲಕ್ಷ ರೂಪಾಯಿಗಳನ್ನು ನೀಡುವ ಮೂಲಕ ಇಂಜಿನಿಯರಿಂಗ್ ಕಾಲೇಜಿನ ಸ್ಥಾಪನೆಗೆ ನೆರವಾಗಿತ್ತು. ಅಂದಿನ ಎರಡು ಲಕ್ಷ ರೂಪಾಯಿಗಳ ಕೊಡುಗೆ ಇಂದಿನ ಮೌಲ್ಯದಲ್ಲಿ ಬಹಳ ದೊಡ್ಡ ಮೊತ್ತಕ್ಕೆ ಸಮಾನವಾಗಿದೆ.
ಕೇವಲ ಇಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸುವುದಷ್ಟೇ ಮುಖ್ಯವಲ್ಲ, ವಿದ್ಯಾರ್ಥಿಗಳಿಗೆ ಗುಣಮಟ್ಟದ ತಾಂತ್ರಿಕ ಶಿಕ್ಷಣ ದೊರೆಯಬೇಕು ಎಂಬ ದೂರದೃಷ್ಟಿಯೊಂದಿಗೆ ಪೂಜ್ಯ ಶ್ರೀಗಳು ಈ ಸಂಸ್ಥೆಯನ್ನು ಸ್ಥಾಪಿಸಿದರು. ಅಂತಹ ಮಹತ್ವದ ಕಾರ್ಯಕ್ಕೆ ವರ್ತಕರು ಕೈಜೋಡಿಸಿರುವುದು ಸ್ಮರಣೀಯವಾಗಿದೆ ಎಂದು ತಿಳಿಸಿದರು.
ಇದೇ ರೀತಿ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿಯೂ ಸಂಘವು ನೆರವು ನೀಡಿತ್ತು. ಜನಪರ ಕಾರ್ಯಗಳ ಮೂಲಕ ಧಾನ್ಯ ವ್ಯಾಪಾರಿಗಳ ಸಂಘವು ರಾಜ್ಯದ ಇತರ ಸಂಘ-ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು.
ಆಹಾರ ಭದ್ರತೆಯಲ್ಲಿ ವರ್ತಕರ ಕೊಡುಗೆ ಮಹತ್ವದ್ದು:
1960, 1970 ಮತ್ತು 1980ರ ದಶಕಗಳವರೆಗೂ ದೇಶದ ಬಹುಸಂಖ್ಯಾತ ಜನರಿಗೆ ದಿನಕ್ಕೆ ಎರಡು ಹೊತ್ತು ಊಟ ದೊರೆಯುವುದೂ ಕಷ್ಟವಾಗಿತ್ತು. 1965ರಿಂದ 1985ರ ಅವಧಿಯಲ್ಲಿ ದೇಶವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವತ್ತ ಮುನ್ನಡೆಯಿತು. ರೈತರು ಬೆಳೆದ ಧಾನ್ಯಗಳು ಜನಸಾಮಾನ್ಯರಿಗೆ ತಲುಪುವಂತೆ ಮಾಡುವಲ್ಲಿ ವರ್ತಕರ ಸೇವೆ ಅತ್ಯಂತ ಮುಖ್ಯವಾಗಿದೆ. ದೇಶದ ಅಭಿವೃದ್ಧಿ, ರಾಜ್ಯದ ಪ್ರಗತಿ ಹಾಗೂ ಜಿಲ್ಲೆಯ ಬೆಳವಣಿಗೆಯಲ್ಲಿ ಧಾನ್ಯ ವ್ಯಾಪಾರಿಗಳ ಪಾತ್ರವನ್ನು ಕಡೆಗಣಿಸಲು ಸಾಧ್ಯವಿಲ್ಲ.
ಕೃಷಿ ಉತ್ಪನ್ನಗಳ ಮಾರಾಟದಲ್ಲಿ ರೈತರಿಗೆ ನ್ಯಾಯಯುತ ಬೆಲೆ ದೊರೆಯಬೇಕು ಹಾಗೂ ವ್ಯಾಪಾರಿಗಳಿಗೂ ನ್ಯಾಯಯುತ ವ್ಯಾಪಾರಕ್ಕೆ ಅವಕಾಶ ಇರಬೇಕು ಎಂಬ ಉದ್ದೇಶದಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (ಎಪಿಎಂಸಿ) ವ್ಯವಸ್ಥೆಯನ್ನು ರೂಪಿಸಲಾಯಿತು. ರೈತರು ಬೆಳೆದ ಧಾನ್ಯ ಮತ್ತು ಇತರ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡುವಾಗ ಅವರ ಹಿತಾಸಕ್ತಿಗಳನ್ನು ರಕ್ಷಿಸುವುದರ ಜೊತೆಗೆ ವ್ಯಾಪಾರಿಗಳ ಹಿತವನ್ನೂ ಸಮತೋಲನಗೊಳಿಸುವುದು ಈ ವ್ಯವಸ್ಥೆಯ ಉದ್ದೇಶವಾಗಿದೆ.
ರಾಜ್ಯದಲ್ಲಿ ಹಲವು ಎಪಿಎಂಸಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಕೆಲವು ಮಾರುಕಟ್ಟೆಗಳು ಲಾಭದಲ್ಲಿದ್ದರೆ, ಇನ್ನು ಕೆಲವು ಸವಾಲುಗಳನ್ನು ಎದುರಿಸುತ್ತಿವೆ. ಆದಾಗ್ಯೂ, ರೈತರು ಮತ್ತು ವರ್ತಕರ ನಡುವೆ ಸಮತೋಲನ ಕಾಯ್ದುಕೊಳ್ಳುವಲ್ಲಿ ಎಪಿಎಂಸಿಗಳು ಪ್ರಮುಖ ಪಾತ್ರ ವಹಿಸುತ್ತಿವೆ.
ತುಮಕೂರಿನ ಎಪಿಎಂಸಿಯೂ ಆರೋಗ್ಯಕರವಾಗಿ ಕಾರ್ಯನಿರ್ವಹಿಸುತ್ತಿದೆ. ಮಂಡಿಪೇಟೆಯಲ್ಲಿನ ಸಾಂಪ್ರದಾಯಿಕ ವ್ಯಾಪಾರ ಚಟುವಟಿಕೆಗಳು ಮುಂದುವರಿದಿರುವುದರ ಜೊತೆಗೆ ಎಪಿಎಂಸಿಯೂ ಕಾರ್ಯನಿರ್ವಹಿಸುತ್ತಿದ್ದು, ಎರಡೂ ವ್ಯವಸ್ಥೆಗಳು ಸಮತೋಲನದಿಂದ ಸಾಗುತ್ತಿರುವುದು ತುಮಕೂರಿನ ವಿಶೇಷತೆಯಾಗಿದೆ.
ವ್ಯಾಪಾರದಲ್ಲಿನ ಪ್ರಾಮಾಣಿಕತೆಯೇ ಕರ್ನಾಟಕದ ಪ್ರಗತಿಗೆ ಬಲ:
ಕರ್ನಾಟಕವು ದೇಶದ ಪ್ರಮುಖ ಪ್ರಗತಿಪರ ರಾಜ್ಯಗಳಲ್ಲಿ ಒಂದಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹದಲ್ಲಿ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ವ್ಯಾಪಾರ ಮತ್ತು ಕೈಗಾರಿಕಾ ಚಟುವಟಿಕೆಗಳು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವುದಕ್ಕೆ ಇದು ಒಂದು ಸೂಚಕವಾಗಿದೆ.
ರಾಜ್ಯವು ಕೈಗಾರಿಕೆ, ಉತ್ಪಾದನೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಯತ್ತ ಸಾಗುತ್ತಿದೆ. ಕರ್ನಾಟಕದ ಆಡಳಿತ ವ್ಯವಸ್ಥೆಯು ಹಲವು ದಶಕಗಳಿಂದ ದೇಶದ ಗಮನ ಸೆಳೆಯುವ ರೀತಿಯಲ್ಲಿ ಕಾರ್ಯನಿರ್ವಹಿಸಿದೆ. ವೀರೇಂದ್ರ ಪಾಟೀಲ, ರಾಮಕೃಷ್ಣ ಹೆಗಡೆ, ಎಸ್.ಎಂ. ಕೃಷ್ಣ ಸೇರಿದಂತೆ ವಿವಿಧ ಅವಧಿಗಳಲ್ಲಿ ಆಡಳಿತ ನಡೆಸಿದ ಮುಖ್ಯಮಂತ್ರಿಗಳು ರಾಜ್ಯದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಪಕ್ಷಾತೀತವಾಗಿ ಕರ್ನಾಟಕದ ಆಡಳಿತ ಪರಂಪರೆಯನ್ನು ಗಮನಿಸಿದಾಗ, ರಾಜ್ಯವು ಅಭಿವೃದ್ಧಿಯ ವಿಚಾರದಲ್ಲಿ ಸದಾ ಮುಂಚೂಣಿಯಲ್ಲಿರುವುದನ್ನು ಕಾಣಬಹುದು ಎಂದರು.
ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್ಎಂಇ) ಬಲಿಷ್ಠವಾಗಿ ಬೆಳೆದಾಗ ದೊಡ್ಡ ಕೈಗಾರಿಕೆಗಳ ಬೆಳವಣಿಗೆಗೂ ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಕೈಗಾರಿಕಾ ನೀತಿಯಲ್ಲಿ ಎಂಎಸ್ಎಂಇಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ. ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಉತ್ತೇಜಿಸುವ ಪ್ರಯತ್ನಗಳು ನಡೆಯುತ್ತಿವೆ.
ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರಗಳಲ್ಲಿ ಕರ್ನಾಟಕ ವೇಗವಾಗಿ ಮುನ್ನಡೆಯುತ್ತಿದೆ. ದೇಶದ ಎಐ ಸಂಸ್ಥೆಗಳ ಪೈಕಿ ಸುಮಾರು ಶೇ.60ರಷ್ಟು ಸಂಸ್ಥೆಗಳು ಕರ್ನಾಟಕದಲ್ಲಿವೆ. ರಾಜ್ಯದಲ್ಲಿ ಸುಮಾರು 600 ಎಐ ಸ್ಟಾರ್ಟ್ಅಪ್ಗಳು ಆರಂಭವಾಗಿರುವುದು ತಂತ್ರಜ್ಞಾನ ಕ್ಷೇತ್ರದಲ್ಲಿನ ಬೆಳವಣಿಗೆಗೆ ಸಾಕ್ಷಿಯಾಗಿದೆ.
ಈ ಪ್ರಗತಿಯ ಹಿಂದೆ ವ್ಯಾಪಾರ ವಲಯದಲ್ಲಿರುವ ಪ್ರಾಮಾಣಿಕತೆ ಮತ್ತು ವಿಶ್ವಾಸಾರ್ಹತೆಯೂ ಪ್ರಮುಖ ಪಾತ್ರ ವಹಿಸುತ್ತವೆ. ರೈತರು ತಮ್ಮ ಉತ್ಪನ್ನಗಳನ್ನು ಮಾರಾಟಕ್ಕೆ ತಂದಾಗ ಅವರಿಗೆ ನ್ಯಾಯಯುತ ವ್ಯವಹಾರ ದೊರೆಯುವುದು ಅತ್ಯಗತ್ಯ. ತುಮಕೂರಿನ ಧಾನ್ಯ ವ್ಯಾಪಾರಿಗಳ ಸಂಘವು ಈ ಮೌಲ್ಯಗಳನ್ನು ಪಾಲಿಸಿಕೊಂಡು ಬಂದಿರುವುದರಿಂದ ಸಂಘಕ್ಕೆ ಗೌರವ ಮತ್ತು ವಿಶ್ವಾಸಾರ್ಹತೆ ದೊರೆತಿದೆ.
ನಾನು ರಾಜಕೀಯಕ್ಕೆ ಬರಬೇಕೆಂದು ಮೊದಲಿನಿಂದಲೂ ನಿರ್ಧರಿಸಿದವನಲ್ಲ . ಸುಮಾರು 38-39 ವರ್ಷಗಳ ಹಿಂದೆ ರಾಜಕೀಯ ಪ್ರವೇಶಿಸುವ ಮೊದಲು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡು ವಿದೇಶದಲ್ಲಿಯೂ ಕೆಲಸ ಮಾಡಿದ್ದೆ. ಬಳಿಕ ಊರಿಗೆ ಮರಳಿದ ಸಂದರ್ಭದಲ್ಲಿ ತಂದೆಯವರು ಕುಟುಂಬದ ಜವಾಬ್ದಾರಿಗಳನ್ನು ವಹಿಸಿಕೊಂಡು ಸಂಸ್ಥೆಗಳನ್ನು ಮುಂದುವರಿಸುವಂತೆ ಸೂಚಿಸಿದ್ದರು. ಹಿರಿಯರ ಸಲಹೆ ಮತ್ತು ಮಾರ್ಗದರ್ಶನದ ಮೇರೆಗೆ ಊರಿನಲ್ಲಿಯೇ ಉಳಿದುಕೊಳ್ಳಬೇಕಾಯಿತು.
ನಂತರ ರಾಜಕೀಯ ಪ್ರವೇಶಿಸುವ ಸಂದರ್ಭ ಎದುರಾಗಿ, 1989ರಲ್ಲಿ ಮಧುಗಿರಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದೆ. ಅಲ್ಲಿಂದ ಇಲ್ಲಿಯವರೆಗೆ ಹಲವು ಬಾರಿ ಸಚಿವರಾಗಿ ವಿವಿಧ ಖಾತೆಗಳನ್ನು ಕಾರ್ಯನಿರ್ವಹಿಸಿದ್ದು, ಪ್ರಸ್ತುತ ಎರಡನೇ ಬಾರಿ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ.
ನಾನು ಚಿಕ್ಕವನಿದ್ದಾಗ ತಂದೆಯವರು ಸಿದ್ಧಗಂಗಾ ಮಠಕ್ಕೆ ಕರೆದುಕೊಂಡು ಹೋಗಿ ಪರಮಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳವರ ಆಶೀರ್ವಾದ ಪಡೆಯುವಂತೆ ಮಾಡಿದ್ದರು. ಅಂದು ಪಡೆದ ಶ್ರೀಗಳ ಆಶೀರ್ವಾದವು ನನ್ನ ಜೀವನದ ಬೆಳವಣಿಗೆಗೆ ಪ್ರೇರಣೆಯಾಗಿದೆ. ಪೂಜ್ಯ ಶ್ರೀಗಳ ಆಶೀರ್ವಾದದಿಂದಲೇ ಇಂದು ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಜನರ ಮುಂದೆ ನಿಲ್ಲಲು ಸಾಧ್ಯವಾಗಿದೆ.
ಅಧಿಕಾರ ಶಾಶ್ವತವಲ್ಲ. ಅಧಿಕಾರದಲ್ಲಿರುವ ಸಂದರ್ಭದಲ್ಲಿ ಜನರಿಗೆ ಮತ್ತು ನಾಡಿಗೆ ಸಾಧ್ಯವಾದಷ್ಟು ಉತ್ತಮ ಕೆಲಸಗಳನ್ನು ಮಾಡಬೇಕು. ತುಮಕೂರನ್ನು ರಾಜ್ಯದ ಪ್ರತಿಷ್ಠಿತ ಜಿಲ್ಲೆಗಳಲ್ಲಿ ಒಂದಾಗಿ ಬೆಳೆಸಬೇಕು ಎಂಬುದು ನನ್ನ ಆಶಯವಾಗಿದೆ.
ತುಮಕೂರಿನಲ್ಲಿ ಈಗಾಗಲೇ ಇಂಜಿನಿಯರಿಂಗ್ ಕಾಲೇಜುಗಳಿರುವುದರಿಂದ ಮತ್ತೊಂದು ಕಾಲೇಜು ನೀಡುವುದರಿಂದ ಇತರ ಸಂಸ್ಥೆಗಳಿಗೆ ಸ್ಪರ್ಧೆ ಎದುರಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ, ಮತ್ತೊಂದು ಕಾಲೇಜು ಸ್ಥಾಪನೆಯಾದರೆ ಹೆಚ್ಚುವರಿಯಾಗಿ 500 ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯುವ ಅವಕಾಶ ದೊರೆಯುತ್ತದೆ. ಶಿಕ್ಷಣ ಸಂಸ್ಥೆಗಳ ಸಂಖ್ಯೆಯನ್ನು ಹೆಚ್ಚಿಸುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳು ಲಭ್ಯವಾಗುತ್ತವೆ ಎಂಬ ದೃಷ್ಟಿಕೋನವನ್ನು ಹೊಂದಿದ್ದೆ.
ಈ ನಿಟ್ಟಿನಲ್ಲಿ ಜೆ.ಎಸ್. ಬಸವರಾಜು ಅವರ ಸಹಕಾರದೊಂದಿಗೆ ಪ್ರಯತ್ನಗಳನ್ನು ಕೈಗೊಂಡು, ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಕಾಲೇಜನ್ನು ಉದ್ಘಾಟಿಸಿದ್ದರು ಎಂದು ತಿಳಿಸಿದರು.
