ನವೆಂಬರ್ 18ರಂದು ಕರ್ನಾಟಕ ನೌಕರರ ರಾಷ್ಟ್ರವ್ಯಾಪಿ ಮುಷ್ಕರ
ಹೊರಗುತ್ತಿಗೆ ನೇಮಕಾತಿ ರದ್ದು, ಬಡ್ತಿ ಒಪ್ಪಂದ ಮರುಸ್ಥಾಪನೆ ಸೇರಿದಂತೆ ಹತ್ತಕ್ಕೂ ಹೆಚ್ಚು ಬೇಡಿಕೆಗಳ ಈಡೇರಿಕೆಗೆ ಆಗ್ರಹ
Tumkurnews.in
ತುಮಕೂರು: ಎಲ್ಲಾ ಹಂತದ ನೌಕರರ ಹೊರಗುತ್ತಿಗೆ ನೇಮಕಾತಿ ರದ್ದುಪಡಿಸುವುದು, ಏಕಪಕ್ಷೀಯವಾಗಿ ರದ್ದುಗೊಳಿಸಿರುವ ಬಡ್ತಿ ಒಪ್ಪಂದವನ್ನು ಮರುಸ್ಥಾಪಿಸುವುದು, ವಾರ್ಷಿಕ ಕಡ್ಡಾಯ ರಜೆಯನ್ನು ವಿಶೇಷ ರಜೆ ಎಂದು ಪರಿಗಣಿಸುವುದು ಸೇರಿದಂತೆ ಹತ್ತಕ್ಕೂ ಹೆಚ್ಚು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನವೆಂಬರ್ 18ರಂದು ಅಖಿಲ ಭಾರತ ಕರ್ನಾಟಕ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಷನ್ (AIKBEA) ಮತ್ತು ಕರ್ನಾಟಕ ಬ್ಯಾಂಕ್ ಆಫೀಸರ್ಸ್ ಆರ್ಗನೈಸೇಷನ್ (KBOO) ವತಿಯಿಂದ ಒಂದು ದಿನದ ರಾಷ್ಟ್ರವ್ಯಾಪಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಗಳ ಮುಖಂಡರಾದ ಫಣೀಂದ್ರ ಕೆ.ಬಿ. ಮತ್ತು ಸುರೇಶ್ ಹೆಗಡೆ ತಿಳಿಸಿದರು.
ನಗರದ ಸದಾಶಿವನಗರದಲ್ಲಿರುವ ಕರ್ನಾಟಕ ಬ್ಯಾಂಕ್ ಪ್ರಾದೇಶಿಕ ಕಚೇರಿ ಆವರಣದಲ್ಲಿ ಮುಷ್ಕರದ ಪೂರ್ವಭಾವಿ ಸಭೆ ನಡೆಸಿ, ಮುಷ್ಕರದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ನೌಕರರಿಗೆ ಪಾನೀಯ ವಿತರಿಸಿದರು.
ಕರ್ನಾಟಕ ಬ್ಯಾಂಕ್ ಆಡಳಿತ ಮಂಡಳಿಗೆ ಅಖಿಲ ಭಾರತ ಕರ್ನಾಟಕ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಷನ್ ಮತ್ತು ಕರ್ನಾಟಕ ಬ್ಯಾಂಕ್ ಆಫೀಸರ್ಸ್ ಆರ್ಗನೈಸೇಷನ್ ಸಲ್ಲಿಸಿರುವ ಬೇಡಿಕೆಗಳು ನೌಕರರ ಹಿತದೃಷ್ಟಿಯಿಂದ ರೂಪಿಸಿರುವ ನ್ಯಾಯಯುತ ಬೇಡಿಕೆಗಳಾಗಿವೆ. ಹೀಗಾಗಿ ಆಡಳಿತ ಮಂಡಳಿಯ ಯಾವುದೇ ಸುತ್ತೋಲೆಗಳಿಗೆ ಮಣಿಯದೆ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದರು.
ಕಾರ್ಮಿಕ ಕಾಯ್ದೆಯ ನಿಯಮದಂತೆ ಬ್ಯಾಂಕ್ ಆಡಳಿತ ಮಂಡಳಿಗೆ 45 ದಿನಗಳ ಮುಂಚಿತವಾಗಿಯೇ ಮುಷ್ಕರದ ನೋಟಿಸ್ ನೀಡಲಾಗಿದೆ. ಆದರೆ, ಆಡಳಿತ ಮಂಡಳಿ ಈ ಕುರಿತು ನಿರ್ಲಕ್ಷ್ಯ ವಹಿಸಿದೆ. ಮಾತುಕತೆಗೆ ಆಹ್ವಾನಿಸಿದ ಸಂದರ್ಭದಲ್ಲಿಯೂ ತನ್ನ ತಪ್ಪುಗಳನ್ನು ಒಪ್ಪಿಕೊಳ್ಳದೆ, ಅವುಗಳನ್ನೇ ಸಮರ್ಥಿಸಿಕೊಂಡು ಜಾರಿಗೆ ತರುವ ಪ್ರಸ್ತಾಪ ಮುಂದಿಟ್ಟಿದೆ. ಹೀಗಾಗಿ ಮುಷ್ಕರ ಅನಿವಾರ್ಯವಾಗಿದೆ.
ನಮ್ಮ ಸಂಘಟನೆ ಸ್ಥಾಪನೆಯಾಗಿ 60 ವರ್ಷಗಳು ಕಳೆದಿದ್ದರೂ ಈವರೆಗೆ ಒಂದೇ ಒಂದು ಮುಷ್ಕರ ನಡೆಸಿರಲಿಲ್ಲ. ಆದರೆ, ಆಡಳಿತ ಮಂಡಳಿ ತೆಗೆದುಕೊಳ್ಳುತ್ತಿರುವ ಏಕಪಕ್ಷೀಯ ನಿರ್ಧಾರಗಳು ನೌಕರರ ಹಿತಕ್ಕೆ ವಿರುದ್ಧವಾಗಿರುವುದರಿಂದ ಹೋರಾಟಕ್ಕೆ ಮುಂದಾಗಬೇಕಾಗಿದೆ. ಕಳೆದ ಹತ್ತು ತಿಂಗಳಿಂದ ನಿರಂತರವಾಗಿ ಬೇಡಿಕೆಗಳನ್ನು ಮಂಡಿಸುತ್ತಿದ್ದರೂ ಆಡಳಿತ ಮಂಡಳಿ ಯಾವುದೇ ಸ್ಪಂದನೆ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಮಿಕರು ಮತ್ತು ಆಡಳಿತ ಮಂಡಳಿಯ ನಡುವೆ ಬಡ್ತಿ ಒಪ್ಪಂದವು ದ್ವಿಪಕ್ಷೀಯ ಒಪ್ಪಂದದ ರೂಪದಲ್ಲಿ ಜಾರಿಯಲ್ಲಿದೆ. ಆದರೆ, ಯಾವುದೇ ಹೊಸ ಒಪ್ಪಂದ ಮಾಡಿಕೊಳ್ಳದೆ ಏಕಾಏಕಿ ಹಳೆಯ ಒಪ್ಪಂದವನ್ನು ರದ್ದುಗೊಳಿಸಿ ಆಡಳಿತ ಮಂಡಳಿ ಸುತ್ತೋಲೆ ಹೊರಡಿಸಿದೆ. ಕಾರ್ಮಿಕ ಕಾಯ್ದೆಯ ಪ್ರಕಾರ ದ್ವಿಪಕ್ಷೀಯ ಒಪ್ಪಂದವನ್ನು ಹೊಸ ಒಪ್ಪಂದಕ್ಕೆ ಸಹಿ ಹಾಕಿದಾಗ ಮಾತ್ರ ರದ್ದುಗೊಳಿಸಲು ಸಾಧ್ಯವೇ ಹೊರತು, ಒಪ್ಪಂದದ ಅವಧಿ ಮುಗಿದಿದೆ ಎಂಬ ಕಾರಣಕ್ಕೆ ರದ್ದುಗೊಳಿಸಲು ಸಾಧ್ಯವಿಲ್ಲ. ಈ ಕುರಿತು ಸುಪ್ರೀಂ ಕೋರ್ಟ್ನ ಹಲವು ತೀರ್ಪುಗಳೂ ಇವೆ ಎಂದು ಮುಖಂಡರು ತಿಳಿಸಿದರು.
ನೌಕರರು ಒಂದು ದಿನದ ವೇತನ ಕಡಿತವಾಗುತ್ತದೆ ಎಂಬ ಕಾರಣಕ್ಕೆ ಮುಷ್ಕರದಿಂದ ಹಿಂದೆ ಸರಿದರೆ, ಮುಂದಿನ ದಿನಗಳಲ್ಲಿ ಉದ್ಯೋಗವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು. ಈ ಬಗ್ಗೆ ಪ್ರತಿಯೊಬ್ಬ ನೌಕರರೂ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ಬ್ಯಾಂಕ್ನ ದಿನಗೂಲಿ ನೌಕರರ ಶೋಷಣೆ ಮಿತಿ ಮೀರಿದೆ. ಕಳೆದ 10ರಿಂದ 12 ವರ್ಷಗಳಿಂದ ಹಗಲಿರುಳು ದುಡಿಯುತ್ತಿರುವ ದಿನಗೂಲಿ ನೌಕರರು, ತಮ್ಮ ಸೇವೆ ಖಾಯಂ ಆಗಬಹುದು ಎಂಬ ನಿರೀಕ್ಷೆಯಲ್ಲಿ ಆಡಳಿತ ಮಂಡಳಿ ವಹಿಸಿದ ಎಲ್ಲ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಆದರೆ, ಕಳೆದ 12 ವರ್ಷಗಳಿಂದ ಅವರ ಮನವಿಗಳಿಗೆ ಆಡಳಿತ ಮಂಡಳಿ ಸ್ಪಂದಿಸಿಲ್ಲ. ಕೆಲವು ಶಾಖೆಗಳಲ್ಲಿ ದಿನಗೂಲಿ ನೌಕರರೇ ಇಲ್ಲದಿದ್ದರೂ ಹೊಸ ನೇಮಕಾತಿಯನ್ನೂ ಮಾಡಿಲ್ಲ ಎಂದು ಆರೋಪಿಸಿದರು.
ಈ ಹಿಂದೆ ಕೇಂದ್ರಿಕೃತವಾಗಿದ್ದ ನೌಕರರ ವರ್ಗಾವಣೆ ವ್ಯವಸ್ಥೆಯನ್ನು ಪ್ರಾದೇಶಿಕ ಮಟ್ಟಕ್ಕೆ ಬದಲಾಯಿಸಿರುವುದರಿಂದ ನೌಕರರು ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಹೊಸ ವರ್ಗಾವಣೆ ನೀತಿಯನ್ನು ಕೂಡಲೇ ರದ್ದುಗೊಳಿಸಬೇಕು. ಶಿಕ್ಷೆಯ ರೂಪದಲ್ಲಿ ವಿಧಿಸಲಾಗುತ್ತಿರುವ ಕಡ್ಡಾಯ ರಜೆಯನ್ನು ವಿಶೇಷ ರಜೆ ಎಂದು ಪರಿಗಣಿಸಿ ನೌಕರರ ಹಿತ ಕಾಪಾಡಬೇಕು. ನಿಗದಿತ ಗುರಿ ತಲುಪಿಲ್ಲ ಎಂಬ ಕಾರಣಕ್ಕೆ ವರ್ಗಾವಣೆ ಮಾಡುವುದರಿಂದ ಕೆಲಸದ ಪ್ರಗತಿ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಬ್ಯಾಂಕ್ ಆಡಳಿತ ಮಂಡಳಿ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ನವೆಂಬರ್ 18ರಂದು ಮುಷ್ಕರ ನಡೆಸಲಾಗುತ್ತಿದ್ದು, ಎಲ್ಲ ನೌಕರರು ತಮ್ಮ ವ್ಯಾಪ್ತಿಯ ಪ್ರಾದೇಶಿಕ ಕಚೇರಿಗಳ ಮುಂದೆ ಕೆಲಸ ಸ್ಥಗಿತಗೊಳಿಸಿ ಮುಷ್ಕರದಲ್ಲಿ ಪಾಲ್ಗೊಳ್ಳಬೇಕು ಎಂದು ಫಣೀಂದ್ರ ಕೆ.ಬಿ. ಮತ್ತು ಸುರೇಶ್ ಹೆಗಡೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ಕರ್ನಾಟಕ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಷನ್ ಮತ್ತು ಕರ್ನಾಟಕ ಬ್ಯಾಂಕ್ ಆಫೀಸರ್ಸ್ ಆರ್ಗನೈಸೇಷನ್ನ ಕೇಂದ್ರ ಸಮಿತಿ ಸದಸ್ಯರಾದ ಅಜಯ್ ಬಿ.ಜಿ., ಸಂದೀಪ್ ಪಿ.ಆರ್., ಎಐಕೆಬಿಇಎ ಉಪಾಧ್ಯಕ್ಷ ಸುಧೀಂದ್ರ ಎಂ., ಕೇಂದ್ರ ಸಮಿತಿ ಸದಸ್ಯ ನಾರಾಯಣರಾವ್ ಜಿ.ವಿ. ಸೇರಿದಂತೆ ನೂರಾರು ನೌಕರರು ಪಾಲ್ಗೊಂಡಿದ್ದರು.
