ತುಮಕೂರು: 7 ಕೋಟಿ ವೆಚ್ಚದ ಡಿಜಿಟಲ್ ಡಿಸ್‌ಪ್ಲೇ ಬೋರ್ಡ್ ಅನಾವರಣ: ದೇಶದಲ್ಲೇ ಪ್ರಥಮ ಎಂದ ಪರಂ

ಜಿಲ್ಲಾ ಸುದ್ದಿ ತುಮಕೂರು ನಗರ ಪ್ರಮುಖ ಸುದ್ದಿ ರಾಜ್ಯ

7 ಕೋಟಿ ವೆಚ್ಚದ ತುಮಕೂರು ಸ್ಕ್ವೇರ್ ಡಿಜಿಟಲ್ ಡಿಸ್‌ಪ್ಲೇ ಬೋರ್ಡ್ ಅನಾವರಣ: ದೇಶದಲ್ಲೇ ಪ್ರಥಮ ಎಂದ ಪರಂ

ತುಮಕೂರು: ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ಹೆಸರಿನ ವೃತ್ತದಲ್ಲಿ ವಿನೂತನ ಎಲೆಕ್ಟ್ರಾನಿಕ್ ಡಿಸ್‌ಪ್ಲೇ ವ್ಯವಸ್ಥೆಯನ್ನು ನಿರ್ಮಿಸಿರುವುದು ಜನತೆಗೆ ನೀಡಿರುವ ಕೊಡುಗೆಯಾಗಿದೆ. ಇಂತಹ ಬೃಹತ್ ಡಿಜಿಟಲ್ ಡಿಸ್‌ಪ್ಲೇ ವ್ಯವಸ್ಥೆ ದೇಶದ ಯಾವುದೇ ಜಿಲ್ಲಾ ಕೇಂದ್ರದಲ್ಲಿ ಇಲ್ಲ. ಈ ಮೂಲಕ ತುಮಕೂರು ಹೊಸ ಇತಿಹಾಸ ಸೃಷ್ಟಿಸಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.
ನಗರದ ಎಸ್.ಎಸ್ ವೃತ್ತದಲ್ಲಿ ಶನಿವಾರ ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸಲಾದ ಎಲ್.ಇ.ಡಿ ಡಿಸ್ ಪ್ಲೇ ಬೋರ್ಡ್ ಅನಾವರಣಗೊಳಿಸಿ ಅವರು ಮಾತನಾಡಿದರು.
ವಿದೇಶಗಳೂ ಸೇರಿದಂತೆ ಅನೇಕ ರಾಷ್ಟ್ರಗಳ ನಗರಗಳಿಗೆ ಭೇಟಿ ನೀಡಿದಾಗ ಪ್ರತಿಯೊಂದು ನಗರದಲ್ಲಿಯೂ ಜನರನ್ನು ಆಕರ್ಷಿಸುವಂತಹ ಪ್ರಮುಖ ಕೇಂದ್ರವಿರುವುದನ್ನು ಗಮನಿಸಿದ್ದೇನೆ. ಆದರೆ, ತುಮಕೂರು ನಗರದಲ್ಲಿ ಅಂತಹ ಒಂದು ಆಕರ್ಷಣೆಯ ಕೇಂದ್ರ ಇರಬೇಕೆಂಬ ಆಶಯ ಬಹಳ ದಿನಗಳಿಂದ ಇತ್ತು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಆಯುಕ್ತರು ಡಿಜಿಟಲ್ ಡಿಸ್‌ಪ್ಲೇ ವ್ಯವಸ್ಥೆ ನಿರ್ಮಿಸುವ ಸಲಹೆ ನೀಡಿದರು. ಅದರಂತೆ ವೃತ್ತವನ್ನು ಪರಿಶೀಲಿಸಿ, ನಕ್ಷೆ ಸಿದ್ಧಪಡಿಸಿ ಯೋಜನೆ ರೂಪಿಸಲಾಯಿತು ಎಂದರು.
ಈ ಯೋಜನೆಯ ಅನುಷ್ಠಾನಕ್ಕೆ ಜಿಲ್ಲಾಧಿಕಾರಿಗಳು ಪ್ರತಿನಿತ್ಯ ಪರಿಶ್ರಮ ವಹಿಸಿದ್ದು, ಕಾಮಗಾರಿಯ ಪ್ರಗತಿಯ ಕುರಿತು ನಿರಂತರವಾಗಿ ಮಾಹಿತಿ ನೀಡುತ್ತಿದ್ದರು. ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಅವರ ತಂಡದ ಅಧಿಕಾರಿಗಳು ರಾತ್ರಿ 3, 4 ಗಂಟೆಯವರೆಗೂ ಸ್ಥಳದಲ್ಲಿಯೇ ಇದ್ದು ಕೆಲಸ ನಿರ್ವಹಿಸಿದ್ದಾರೆ. ವಿಶೇಷವಾಗಿ ಆಯುಕ್ತರು ಬೆಳಗಿನ ಜಾವ 3 ಗಂಟೆಗೂ ಕಾಮಗಾರಿಯ ಛಾಯಾಚಿತ್ರಗಳನ್ನು ಕಳುಹಿಸುತ್ತಿದ್ದರು. ಅವರೆಲ್ಲರ ಪರಿಶ್ರಮದಿಂದ ಇಂದು ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಅಧಿಕಾರಿಗಳನ್ನು ಶ್ಲಾಘಿಸಿದರು.
ಕನ್ನಡ ರಾಜ್ಯೋತ್ಸವದ ದಿನವೇ ಯೋಜನೆಯನ್ನು ಉದ್ಘಾಟಿಸಲು ಉದ್ದೇಶಿಸಲಾಗಿತ್ತು. ಆದರೆ, ಡಿಜಿಟಲ್ ಡಿಸ್‌ಪ್ಲೇ ಬೋರ್ಡ್‌ಗಳು ದೆಹಲಿಯಿಂದ ಬರಬೇಕಿದ್ದುದರಿಂದ ಹಾಗೂ ಅವುಗಳ ಜೋಡಣೆ, ತಾಂತ್ರಿಕ ಪ್ರಕ್ರಿಯೆ ಮತ್ತು ಸಂಚಾರ ನಿರ್ವಹಣೆಯ ಸವಾಲುಗಳಿಂದಾಗಿ ವಿಳಂಬವಾಯಿತು. ಆದರೂ ಕಾಮಗಾರಿಯನ್ನು ಮತ್ತಷ್ಟು ಮುಂದೂಡದೆ ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಲಾಯಿತು. ಅಂತಿಮವಾಗಿ ನವೆಂಬರ್ 14ರ ಮಕ್ಕಳ ದಿನಾಚರಣೆಯಂದು ಮಕ್ಕಳಿಗೆ ಈ ವ್ಯವಸ್ಥೆಯನ್ನು ಸಮರ್ಪಿಸುವ ನಿರ್ಧಾರ ಕೈಗೊಳ್ಳಲಾಯಿತು. ತಾಂತ್ರಿಕ ದೋಷಗಳನ್ನು ಸರಿಪಡಿಸಿ ಇಂದು ತುಮಕೂರಿನ ನಾಗರಿಕರಿಗೆ ಅರ್ಪಿಸಲಾಗಿದೆ ಎಂದರು.
ಈ ಕಾರ್ಯಕ್ರಮಕ್ಕೆ ಸಿದ್ಧಗಂಗಾ ಮಠದ ಶ್ರೀಗಳವರು ಆಗಮಿಸಿರುವುದು ವಿಶೇಷ ಸಂತೋಷ ತಂದಿದೆ. ಸಿದ್ಧಗಂಗಾ ಮಠವು ನಮ್ಮ ಕುಟುಂಬಕ್ಕೆ ಅವಿನಾಭಾವ ಸಂಬಂಧ ಹೊಂದಿರುವ ಸಂಸ್ಥೆಯಾಗಿದೆ. ಬಾಲ್ಯದಲ್ಲಿ, ಸುಮಾರು 10-12 ವರ್ಷದವನಿದ್ದಾಗ ಶ್ರೀ ಶಿವಕುಮಾರ ಮಹಾ ಸ್ವಾಮೀಜಿಗಳು ನಮ್ಮ ಊರಿಗೆ ಆಗಮಿಸಿ, ನಮ್ಮ ಶಾಲೆಯ ಕಾರ್ಯಕ್ರಮದಲ್ಲಿ ತಂದೆಯವರೊಂದಿಗೆ ನನಗೆ ಆಶೀರ್ವಾದ ಮಾಡಿದ್ದನ್ನು ಸ್ಮರಿಸಿಕೊಳ್ಳುತ್ತೇನೆ. ಅಂದಿನಿಂದ ನಮ್ಮ ಕುಟುಂಬ ಶ್ರೀಮಠದೊಂದಿಗೆ ಗೌರವ ಮತ್ತು ಭಕ್ತಿಯ ಸಂಬಂಧವನ್ನು ಹೊಂದಿದೆ. ಶ್ರೀಮಠದ ಆಶೀರ್ವಾದದಿಂದಲೇ ನಮ್ಮ ಕುಟುಂಬ ಹಾಗೂ ಶಿಕ್ಷಣ ಸಂಸ್ಥೆಗಳು ಬೆಳೆದಿವೆ. ನಮ್ಮ ಅಣ್ಣ ಡಾ. ಶಿವಪ್ರಸಾದ್ ಅವರು ಸಿದ್ಧಗಂಗಾ ಹೈಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡಿದವರು. ಹೀಗಾಗಿ ಶ್ರೀಮಠದ ಬಗ್ಗೆ ನಮ್ಮ ಕುಟುಂಬಕ್ಕಿರುವ ಗೌರವ ಮತ್ತು ನಂಟಿನ ಕುರಿತು ಯಾವುದೇ ತಪ್ಪು ಕಲ್ಪನೆಗಳಿಗೆ ಅವಕಾಶವಿಲ್ಲ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ವೃತ್ತದಲ್ಲಿ ಈ ಡಿಜಿಟಲ್ ಡಿಸ್‌ಪ್ಲೇ ವ್ಯವಸ್ಥೆ ನಿರ್ಮಿಸಿರುವುದು ಆ ವೃತ್ತಕ್ಕೂ, ಪೂಜ್ಯ ಸ್ವಾಮೀಜಿಗಳಿಗೂ ಸಲ್ಲಿಸಿದ ಗೌರವವೆಂದು ಭಾವಿಸುತ್ತೇನೆ ಎಂದು ಅಭಿಪ್ರಾಯಿಸಿದರು.
ನಾನು ಗೃಹ ಸಚಿವನಾಗಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಲ್ಲಿ ಹಲವು ಬದಲಾವಣೆಗಳನ್ನು ತಂದಿದ್ದೇನೆ. ಪೊಲೀಸರ ಸಾಂಪ್ರದಾಯಿಕ ದೊಡ್ಡ ಗಾತ್ರದ ಕ್ಯಾಪ್ ಮಳೆಯಲ್ಲಿ ನೆನೆದಾಗ ಭಾರವಾಗುತ್ತಿತ್ತು ಎಂಬ ಸಿಬ್ಬಂದಿಯ ಮನವಿಯ ಮೇರೆಗೆ ಅದನ್ನು ಬದಲಾಯಿಸಿ, ಆಧುನಿಕ ಹಾಗೂ ಅನುಕೂಲಕರ ಕ್ಯಾಪ್‌ಗಳನ್ನು ಪರಿಚಯಿಸಲಾಗಿದೆ. ಇದರಿಂದ ಪೊಲೀಸರು ಹೆಚ್ಚು ಸ್ಮಾರ್ಟ್ ಆಗಿ ಕಾಣಿಸುತ್ತಿದ್ದಾರೆ. ಯಾವುದೇ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಾಗಲೂ ಅಭಿವೃದ್ಧಿಯ ದೃಷ್ಟಿಯಿಂದ ಬದಲಾವಣೆಗಳನ್ನು ತರಲು ಪ್ರಯತ್ನಿಸಿದ್ದೇನೆ ಎಂದರು. ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ವಸಂತನರಸಾಪುರದಲ್ಲಿ ಸುಮಾರು 20 ಸಾವಿರ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಏಷ್ಯಾ ಖಂಡದಲ್ಲೇ ಅತಿದೊಡ್ಡ ಕೈಗಾರಿಕಾ ಹಬ್ ನಿರ್ಮಿಸುವ ಪ್ರಯತ್ನ ನಡೆಯುತ್ತಿದೆ. ಈಗಾಗಲೇ 200ಕ್ಕೂ ಹೆಚ್ಚು ಕೈಗಾರಿಕೆಗಳು ಜಿಲ್ಲೆಗೆ ಬಂದಿವೆ. ಇತ್ತೀಚೆಗೆ ಗ್ರೀನ್ ಹೈಡ್ರೋಜನ್ ಘಟಕ ಹಾಗೂ ಡೇಟಾ ಸೆಂಟರ್ ಸ್ಥಾಪನೆಗೆ ಸಂಬಂಧಿಸಿದಂತೆ ಸುಮಾರು 80 ಸಾವಿರ ಕೋಟಿ ರೂ. ಹೂಡಿಕೆ ಮಾಡುವ ಪ್ರಸ್ತಾವನೆ ಬಂದಿದೆ. ತುಮಕೂರಿನಲ್ಲಿ ಸುಮಾರು ಒಂದು ಸಾವಿರ ಎಕರೆ ಭೂಮಿ ಒದಗಿಸಿದರೆ 30 ಸಾವಿರ ಜನರಿಗೆ ಉದ್ಯೋಗ ನೀಡುವ ಉದ್ದೇಶವನ್ನು ಹೂಡಿಕೆದಾರರು ಹೊಂದಿದ್ದಾರೆ. ಇಂತಹ ಕೈಗಾರಿಕಾ ಬೆಳವಣಿಗೆಗಳಿಂದ ಜಿಲ್ಲೆಯ ಅಭಿವೃದ್ಧಿಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತುಮಕೂರು ಇನ್ನು ಮುಂದೆ ಸಣ್ಣ ನಗರ ಎಂಬ ಭಾವನೆ ಯಾರಲ್ಲಿಯೂ ಇರಬಾರದು. ತುಮಕೂರು ಬೆಂಗಳೂರಿನ ಒಂದು ಭಾಗವಾಗಿ ಬೆಳೆಯುತ್ತಿದೆ. ಈಗಾಗಲೇ ರಸ್ತೆ ಸಂಪರ್ಕದ ಮೂಲಕ ಬೆಂಗಳೂರು ಮತ್ತು ತುಮಕೂರು ನಗರಗಳು ಹತ್ತಿರವಾಗಿವೆ. ಬೆಂಗಳೂರು ನಗರದಲ್ಲಿ ರಸ್ತೆ ಬದಿಯ ಒಂದು ಎಕರೆ ಜಮೀನು ಸಿಗುವುದೂ ಕಷ್ಟವಾಗಿದ್ದು, ಸಿಕ್ಕರೂ 5-10 ಕೋಟಿ ಬೆಲೆ ಇದೆ. ಮುಂದಿನ ದಿನಗಳಲ್ಲಿ ತುಮಕೂರು ಮತ್ತು ಬೆಂಗಳೂರು ನಡುವಿನ ಸಂಪರ್ಕ ಇನ್ನಷ್ಟು ಸುಧಾರಿಸಲಿದೆ. ಜಿಲ್ಲೆಯ ಯುವಜನರಿಗೆ, ಮಕ್ಕಳಿಗೆ ಕೈಗಾರಿಕೆ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಹೆಚ್ಚಿನ ಅವಕಾಶಗಳು ದೊರೆಯಬೇಕು ಎಂಬುದು ನಮ್ಮ ಆಶಯವಾಗಿದೆ ಎಂದರು.
ಜಿಲ್ಲಾಧಿಕಾರಿಗಳು ಯಾವುದೇ ಜವಾಬ್ದಾರಿ ನೀಡಿದರೂ ಪ್ರಾಮಾಣಿಕವಾಗಿ ತಮ್ಮ ಸಂಪೂರ್ಣ ಪ್ರಯತ್ನವನ್ನು ಮಾಡುತ್ತಾರೆ. ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನು ಮೂರು ಬಾರಿ ತುಮಕೂರಿಗೆ ಕರೆತಂದು, ಲಕ್ಷಾಂತರ ಜನರು ಭಾಗವಹಿಸಿದ ಬೃಹತ್ ಕಾರ್ಯಕ್ರಮಗಳನ್ನು ಆಯೋಜಿಸಿ, ಸರ್ಕಾರದ ವಿವಿಧ ಯೋಜನೆಗಳ ಲಕ್ಷಾಂತರ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ. ಈ ಕಾರ್ಯಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ತುಮಕೂರು ದಸರಾವನ್ನು ಮತ್ತಷ್ಟು ವಿಸ್ತೃತವಾಗಿ ಆಚರಿಸಬೇಕೆಂಬ ಉದ್ದೇಶದಿಂದ ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ದಸರಾ ಮಹೋತ್ಸವವನ್ನು ಆಯೋಜಿಸಲಾಗುತ್ತಿದೆ. ಹಿಂದೆ ಸ್ಥಳೀಯವಾಗಿ ಸಣ್ಣ ಪ್ರಮಾಣದಲ್ಲಿ ನಡೆಯುತ್ತಿದ್ದ ಊರ ಹಬ್ಬವನ್ನು ಎಲ್ಲರ ಸಹಕಾರದೊಂದಿಗೆ ವಿಸ್ತರಿಸಿ, ಸಾರ್ವಜನಿಕರು ಮತ್ತು ಅಧಿಕಾರಿಗಳನ್ನು ಒಳಗೊಂಡು ದೊಡ್ಡ ಮಟ್ಟದಲ್ಲಿ ಆಚರಿಸಲಾಗುತ್ತಿದೆ. ಈ ಬಾರಿಯ ತುಮಕೂರು ದಸರಾವನ್ನು ಒಂಬತ್ತು-ಹತ್ತು ದಿನಗಳ ಅವಧಿಯಲ್ಲಿ ಸುಮಾರು 20 ಲಕ್ಷ ಜನರು ವೀಕ್ಷಿಸಿದ್ದಾರೆ ಎಂಬ ಅಂದಾಜಿದೆ. ಈ ಯಶಸ್ಸಿಗೆ ಕೈಜೋಡಿಸಿದ ಸಾರ್ವಜನಿಕರು, ಅಧಿಕಾರಿಗಳು ಹಾಗೂ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಈ‌ ಸಂದರ್ಭದಲ್ಲಿ ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ‌ ಸಿದ್ಧಲಿಂಗ ಸ್ವಾಮಿ,
ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಕನ್ನಿಕಾ ಪರಮೇಶ್ವರ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *