ಕನ್ನಡ ರಾಜ್ಯೋತ್ಸವ ಎಲ್ಲರನ್ನೂ ಒಂದುಗೂಡಿಸಲಿ: ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ

ಜಿಲ್ಲಾ ಸುದ್ದಿ ತಾಲ್ಲೂಕು ತುಮಕೂರು ನಗರ ಪ್ರಮುಖ ಸುದ್ದಿ

ಕನ್ನಡ ರಾಜ್ಯೋತ್ಸವ ಎಲ್ಲರನ್ನೂ ಒಂದುಗೂಡಿಸಲಿ: ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ

Tumkurnews.in

ತುಮಕೂರು: ಕನ್ನಡ ಭಾಷೆ ಈ ನಾಡಿನ ಹೆಮ್ಮೆಯಾಗಿದ್ದು, ಕನ್ನಡ ರಾಜ್ಯೋತ್ಸವವು ಜಾತಿ, ಧರ್ಮಗಳ ಭೇದವಿಲ್ಲದೆ ಎಲ್ಲರನ್ನೂ ಒಂದುಗೂಡಿಸುವ ಹಬ್ಬವಾಗಿದೆ. ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಪ್ರೀತಿಸಿ, ಉಳಿಸಿ ಬೆಳೆಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಕುಣಿಗಲ್ ವೃತ್ತದಲ್ಲಿ ಬುಧವಾರ ಕರ್ನಾಟಕ ಸರ್ವಜನಾಂಗ ಸಂರಕ್ಷಣಾ ವೇದಿಕೆ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ, ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಅಭಿಮಾನದ ಸಂಗತಿ. ಮಾತೃಭಾಷೆ ಯಾವುದೇ ಇರಲಿ, ನಾಡಿನ ಭಾಷೆಯನ್ನು ಮಾತನಾಡುವ, ಪ್ರೀತಿಸುವ ಹಾಗೂ ಬೆಳೆಸುವ ಮನಸ್ಥಿತಿ ಎಲ್ಲರಲ್ಲೂ ಇರಬೇಕು ಎಂದರು.

ತುಮಕೂರು ತನ್ನದೇ ಆದ ಚರಿತ್ರೆ ಮತ್ತು ಇತಿಹಾಸ ಹೊಂದಿರುವ ಜಿಲ್ಲೆ. ಧಾರ್ಮಿಕ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಡಾ. ಶಿವಕುಮಾರ ಸ್ವಾಮೀಜಿ ಹಾಗೂ ಕಲಾಕ್ಷೇತ್ರದಲ್ಲಿ ಖ್ಯಾತಿ ಪಡೆದ ಗುಬ್ಬಿ ವೀರಣ್ಣನವರಂತಹ ಮಹನೀಯರು ಈ ನಾಡಿನ ಹೆಮ್ಮೆ. ಗುಬ್ಬಿ ವೀರಣ್ಣನವರ ಮೂಲಕ ರಾಜ್‌ಕುಮಾರ್, ನರಸಿಂಹರಾಜು, ಬಾಲಕೃಷ್ಣ, ಮಂಜುಳಾ ಸೇರಿದಂತೆ ಅನೇಕ ಕಲಾವಿದರು ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಿದ್ದಾರೆ. ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ತುಮಕೂರು ತನ್ನದೇ ಆದ ವಿಶಿಷ್ಟ ಸ್ಥಾನ ಹೊಂದಿದೆ ಎಂದು ತಿಳಿಸಿದರು.

ಇಂದು ತುಮಕೂರು ನಗರ ವೇಗವಾಗಿ ಬೆಳೆಯುತ್ತಿದ್ದು, ಜನಸಂಖ್ಯೆ ಹಾಗೂ ಆರ್ಥಿಕ ಚಟುವಟಿಕೆಗಳು ಹೆಚ್ಚುತ್ತಿವೆ. ಉದ್ಯೋಗಾವಕಾಶಗಳೂ ವಿಸ್ತರಿಸುತ್ತಿವೆ. ತುಮಕೂರು ದಾಸೋಹ ಮತ್ತು ಭಾವೈಕ್ಯತೆಗೆ ಹೆಸರುವಾಸಿಯಾಗಿದೆ. ಡಾ. ಶಿವಕುಮಾರ ಸ್ವಾಮೀಜಿಗಳು ಶಿವೈಕ್ಯರಾದ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದವರು ದಾಸೋಹ ವ್ಯವಸ್ಥೆ ಮಾಡುವ ಮೂಲಕ ಗೌರವ ಸಲ್ಲಿಸಿದ್ದರು. ಕೊರೊನಾ ಸಂದರ್ಭದಲ್ಲಿ ಜಾತಿ, ಧರ್ಮದ ಭೇದವಿಲ್ಲದೆ ಅನೇಕ ಮುಸ್ಲಿಂ ಬಾಂಧವರು ಅಂತ್ಯಸಂಸ್ಕಾರ ಕಾರ್ಯಗಳಿಗೆ ನೆರವಾಗಿದ್ದರು. ಇಂತಹ ಸಾಮರಸ್ಯದ ವಾತಾವರಣ ತುಮಕೂರಿನ ವಿಶೇಷತೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹ್ಮದ್ ಮಾತನಾಡಿ, ಕವಿ ಕೆ.ಎಸ್. ನಿಸಾರ್ ಅಹಮದ್ ಅವರ ಆಶಯದಂತೆ ಕನ್ನಡ ರಾಜ್ಯೋತ್ಸವ ನಿತ್ಯೋತ್ಸವವಾಗಬೇಕು. ರಾಜ್ಯೋತ್ಸವ ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗದೆ ಕನ್ನಡ ಪ್ರತಿಯೊಬ್ಬರ ನಿತ್ಯಜೀವನದ ಭಾಗವಾಗಬೇಕು. ಮನೆಮನೆಗಳಲ್ಲೂ ಕನ್ನಡದ ವಾತಾವರಣ ನಿರ್ಮಾಣವಾಗಬೇಕು ಎಂದರು.

ಕನ್ನಡ ಶಾಲೆಗಳು ಮುಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸರ್ಕಾರ ಕನ್ನಡ ಶಾಲೆಗಳ ಪುನಶ್ಚೇತನಕ್ಕೆ ಆದ್ಯತೆ ನೀಡಬೇಕು. ಪೋಷಕರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೇರಿಸುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಕನ್ನಡ ಭಾಷೆಯ ಬೆಳವಣಿಗೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ವಜನಾಂಗ ಸಂರಕ್ಷಣಾ ವೇದಿಕೆ ಅಧ್ಯಕ್ಷ ಕನ್ನಡ ಬಾಬು, ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ, ನಗರಪಾಲಿಕೆ ಮಾಜಿ ಸದಸ್ಯ ನಯಾಜ್ ಅಹ್ಮದ್, ಮುಖಂಡರಾದ ಮೆಹಬೂಬ್ ಪಾಷಾ, ಸುಬ್ರಹ್ಮಣ್ಯ, ಅಕ್ರಮ್ ಉಲ್ಲಾ, ಕನ್ನಡ ಪ್ರಕಾಶ್, ಉಪ್ಪಾರಹಳ್ಳಿ ಕುಮಾರ್, ಹೊಸಕೋಟೆ ನಟರಾಜ್, ಎಂ. ಗೋಪಿ, ಅಲ್ತಾಫ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ರಾಜ್ಯೋತ್ಸವದ ಅಂಗವಾಗಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

Leave a Reply

Your email address will not be published. Required fields are marked *