ನಿರಾಮ್ ಪ್ಯಾಲಿಯೇಟಿವ್ ಕೇರ್ ಕೇಂದ್ರದಿಂದ ಮನೆಬಾಗಿಲಿಗೆ ಆರೋಗ್ಯ ಸೇವೆ
ಮನೆಮನೆಗೆ ತೆರಳಿ ಆರೋಗ್ಯ ಸೇವೆ ಒದಗಿಸುವ ಕಾರ್ಯ ಶ್ಲಾಘನೀಯ: ಶಿವಸಿದ್ಧೇಶ್ವರ ಸ್ವಾಮೀಜಿ
Tumkurnews.in
ತುಮಕೂರು: ವಯೋವೃದ್ಧರು, ಅಸಹಾಯಕರು ಹಾಗೂ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಮನೆಬಾಗಿಲಲ್ಲೇ ಆರೋಗ್ಯ ಸೇವೆ ಒದಗಿಸುವುದು ಉತ್ತಮ ಮಾನವೀಯ ಕಾರ್ಯವಾಗಿದೆ ಎಂದು ಸಿದ್ಧಗಂಗಾ ಮಠದ ಶಿವಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ನಗರದ ನಿರಾಮ್ ಪ್ಯಾಲಿಯೇಟಿವ್ ಕೇರ್ ಕೇಂದ್ರದಲ್ಲಿ ರೋಟರಿ ಬೆಂಗಳೂರು ಉದ್ಯೋಗ್ ಹಾಗೂ ರೋಟರಿ ಜಿಲ್ಲೆ 3192ರ ಸಹಯೋಗದೊಂದಿಗೆ ಆರಂಭಿಸಲಾದ ನೂತನ ಫಿಸಿಯೋಥೆರಪಿ ಘಟಕ ಮತ್ತು ಹೋಂ ಕೇರ್ (ಮನೆಬಾಗಿಲಿಗೆ ಆರೋಗ್ಯ ಸೇವೆ) ಸೌಲಭ್ಯಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಒತ್ತಡದ ಜೀವನದಲ್ಲಿ ಆರೋಗ್ಯವೇ ಅತ್ಯಂತ ಮುಖ್ಯವಾದ ಭಾಗ್ಯವಾಗಿದೆ. ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ರೋಟರಿಯಂತಹ ಸೇವಾ ಸಂಸ್ಥೆಗಳು ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಿ ಜನಪರ ಕಾರ್ಯಗಳನ್ನು ಕೈಗೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ನಿರಾಮ್ ಕೇಂದ್ರವು ರೋಟರಿ ಸಂಸ್ಥೆಯ ಸಹಯೋಗದೊಂದಿಗೆ ಫಿಸಿಯೋಥೆರಪಿ ಹಾಗೂ ಮನೆಬಾಗಿಲಿಗೆ ಆರೋಗ್ಯ ಸೇವೆ ಆರಂಭಿಸಿರುವುದು ಉತ್ತಮ ಬೆಳವಣಿಗೆ. ವಿಶೇಷವಾಗಿ ವಯೋವೃದ್ಧರು, ಒಂಟಿಯಾಗಿ ವಾಸಿಸುವವರು ಹಾಗೂ ಅಸಹಾಯಕರ ಮನೆಗೆ ತೆರಳಿ ಆರೋಗ್ಯ ಸೇವೆ ಒದಗಿಸುವ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ. ಇಂತಹ ಸೇವಾ ಚಟುವಟಿಕೆಗಳು ಮತ್ತಷ್ಟು ವಿಸ್ತಾರಗೊಳ್ಳಲಿ ಎಂದು ಆಶಿಸಿದರು.
ಶಾಸಕ ಜ್ಯೋತಿ ಗಣೇಶ್ ಮಾತನಾಡಿ, ಆರೋಗ್ಯ ಸೇವೆಗಳು ಆಸ್ಪತ್ರೆಗಳಿಗೆ ಮಾತ್ರ ಸೀಮಿತವಾಗದೆ ಅಗತ್ಯವಿರುವ ರೋಗಿಗಳ ಮನೆಬಾಗಿಲಿಗೆ ತಲುಪಬೇಕು. ಈ ನಿಟ್ಟಿನಲ್ಲಿ ನಿರಾಮ್ ಕೇಂದ್ರ ಮತ್ತು ರೋಟರಿ ಸಂಸ್ಥೆಗಳು ಕೈಗೊಂಡಿರುವ ಮಾನವೀಯ ಯೋಜನೆ ಶ್ಲಾಘನೀಯವಾಗಿದೆ ಎಂದರು.
ಯೋಜನೆಯ ನೇತೃತ್ವ ವಹಿಸಿರುವ ರೋಟರಿ ಜಿಲ್ಲೆ 3192ರ ಜಿಲ್ಲಾ ನಿಯೋಜಿತ ಗವರ್ನರ್ ರೊಟೇರಿಯನ್ ರೇಣುಕೇಶ್ವರಸ್ವಾಮಿ ಎಸ್.ಆರ್. ಮಾತನಾಡಿ, ರೋಟರಿಯ ಸೇವೆ ಕೇವಲ ಸೌಲಭ್ಯಗಳನ್ನು ಕಲ್ಪಿಸುವುದಕ್ಕೆ ಸೀಮಿತವಾಗಿಲ್ಲ. ಅಗತ್ಯವಿರುವವರ ಬದುಕಿನಲ್ಲಿ ಭರವಸೆ, ಆರೋಗ್ಯ ಮತ್ತು ಆತ್ಮವಿಶ್ವಾಸ ಮೂಡಿಸುವುದೇ ನಮ್ಮ ಉದ್ದೇಶ. ನಿರಾಮ್ ಕೇಂದ್ರದೊಂದಿಗೆ ಕೈಜೋಡಿಸಿರುವ ಈ ಯೋಜನೆಯು ಸಮಾಜಕ್ಕೆ ದೀರ್ಘಕಾಲದ ಪ್ರಯೋಜನ ನೀಡಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕ್ವೆಸ್ ಕಾರ್ಪ್ ಸಂಸ್ಥಾಪಕ ಅಧ್ಯಕ್ಷ ಅಜಿತ್ ಐಸಾಕ್ ಅತಿಥಿಯಾಗಿ ಭಾಗವಹಿಸಿದ್ದರು.
ಈ ಯೋಜನೆಯಡಿ ಆರಂಭಿಸಲಾದ ಫಿಸಿಯೋಥೆರಪಿ ಘಟಕವು ಶಸ್ತ್ರಚಿಕಿತ್ಸೆ, ಅಪಘಾತ, ಪಾರ್ಶ್ವವಾಯು ಹಾಗೂ ವಿವಿಧ ಕಾಯಿಲೆಗಳಿಂದ ಚೇತರಿಸಿಕೊಳ್ಳುತ್ತಿರುವವರಿಗೆ ಪುನರ್ವಸತಿ, ನೋವು ನಿವಾರಣೆ ಮತ್ತು ದೈಹಿಕ ಚಲನಶೀಲತೆ ಸುಧಾರಣೆಗೆ ಅಗತ್ಯವಾದ ಚಿಕಿತ್ಸಾ ಸೇವೆಗಳನ್ನು ಒದಗಿಸಲಿದೆ. ಹಿರಿಯ ನಾಗರಿಕರ ಆರೋಗ್ಯ ಸುಧಾರಣೆಗೂ ಈ ಘಟಕ ನೆರವಾಗಲಿದೆ.
ಇದರೊಂದಿಗೆ ಮನೆಬಾಗಿಲಿಗೆ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ವಿಶೇಷ ವಾಹನವನ್ನು ನಿರಾಮ್ ಕೇಂದ್ರಕ್ಕೆ ಹಸ್ತಾಂತರಿಸಲಾಯಿತು. ಈ ಸೌಲಭ್ಯದ ಮೂಲಕ ವಯೋವೃದ್ಧರು, ಹಾಸಿಗೆ ಹಿಡಿದಿರುವ ರೋಗಿಗಳು, ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು ಹಾಗೂ ಆಸ್ಪತ್ರೆಗೆ ತೆರಳಲು ಸಾಧ್ಯವಾಗದವರಿಗೆ ಮನೆಯಲ್ಲಿಯೇ ನರ್ಸಿಂಗ್ ಸೇವೆ, ಪ್ಯಾಲಿಯೇಟಿವ್ ಕೇರ್, ಫಿಸಿಯೋಥೆರಪಿ ಮತ್ತು ಅಗತ್ಯ ವೈದ್ಯಕೀಯ ನೆರವು ದೊರೆಯಲಿದೆ.
ರೋಟರಿ ಬೆಂಗಳೂರು ಉದ್ಯೋಗ್‌ನ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರ ಸಹಕಾರದಿಂದ ರೂಪುಗೊಂಡಿರುವ ಈ ಯೋಜನೆಯು ರೋಗಿಗಳಿಗೆ ಉತ್ತಮ ಆರೈಕೆ ಒದಗಿಸುವುದರ ಜೊತೆಗೆ ಕುಟುಂಬ ಸದಸ್ಯರಿಗೆ ಮಾನಸಿಕ ನೆಮ್ಮದಿ ನೀಡಲಿದೆ. ಸಮಾಜದ ದುರ್ಬಲ ವರ್ಗದವರಿಗೆ ಸುಲಭವಾಗಿ ಆರೋಗ್ಯ ಸೇವೆ ದೊರಕಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.
ಕಾರ್ಯಕ್ರಮದಲ್ಲಿ ರೋಟರಿ ಸದಸ್ಯರು, ವೈದ್ಯಕೀಯ ತಜ್ಞರು, ನಿರಾಮ್ ಕೇಂದ್ರದ ಸಿಬ್ಬಂದಿ ಹಾಗೂ ಗಣ್ಯರು ಉಪಸ್ಥಿತರಿದ್ದರು.
