ಗ್ರಾಮೀಣ ಪದವೀಧರ ನಿರುದ್ಯೋಗಿಗಳಿಗೆ ಎರಡು ದಿನಗಳ ಸ್ಪರ್ಧಾತ್ಮಕ ಪರೀಕ್ಷಾ ಕಾರ್ಯಾಗಾರ
ನ. 20 ಮತ್ತು 21ರಂದು ತುಮಕೂರು ವಿವಿಯಲ್ಲಿ ಕಾರ್ಯಾಗಾರ: ಮುರುಳೀಧರ ಹಾಲಪ್ಪ
Tumkurnews.in
ತುಮಕೂರು: ಗ್ರಾಮೀಣ ಭಾಗದ ಪದವೀಧರ ನಿರುದ್ಯೋಗಿ ಯುವಜನರಿಗೆ ಉದ್ಯೋಗಾವಕಾಶಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಸರಿಸಬೇಕಾದ ಕ್ರಮಗಳು ಹಾಗೂ ಸಿದ್ಧತೆಯ ಕುರಿತು ಮಾರ್ಗದರ್ಶನ ನೀಡುವ ಉದ್ದೇಶದಿಂದ ನವೆಂಬರ್ 20ರ ಶುಕ್ರವಾರ ಮತ್ತು 21ರ ಶನಿವಾರ ಹಾಲಪ್ಪ ಪ್ರತಿಷ್ಠಾನ ಹಾಗೂ ತುಮಕೂರು ವಿಶ್ವವಿದ್ಯಾಲಯದ ಆಂತರಿಕ ಗುಣಮಟ್ಟ ಭರವಸೆ ಕೋಶದ (ಐಕ್ಯೂಎಸಿ) ಸಹಯೋಗದಲ್ಲಿ ಎರಡು ದಿನಗಳ ಸ್ಪರ್ಧಾತ್ಮಕ ಪರೀಕ್ಷಾ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದರು.
ಕಾರ್ಯಾಗಾರಕ್ಕೆ ಸಂಬಂಧಿಸಿದಂತೆ ಖಾಸಗಿ ಹೋಟೆಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ತುಮಕೂರು ವಿಶ್ವವಿದ್ಯಾಲಯದ ಸರ್. ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಕಾರ್ಯಾಗಾರ ನಡೆಯಲಿದೆ. ಜಿಲ್ಲೆಯ ಡಿಪ್ಲೊಮಾ ಸೇರಿದಂತೆ ವಿವಿಧ ವಿಷಯಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದಿರುವ ನಿರುದ್ಯೋಗಿ ಯುವಜನರು ಇದರಲ್ಲಿ ಪಾಲ್ಗೊಂಡು ತಜ್ಞರಿಂದ ಅಗತ್ಯ ಮಾಹಿತಿ ಹಾಗೂ ಮಾರ್ಗದರ್ಶನ ಪಡೆಯಬಹುದು ಎಂದರು.
ಜಯನಗರದಲ್ಲಿರುವ ತಮ್ಮ ಗೃಹ ಕಚೇರಿಗೆ ಪ್ರತಿದಿನ ಹಲವು ಪದವೀಧರರು ಉದ್ಯೋಗದ ನಿರೀಕ್ಷೆಯಲ್ಲಿ ಶಿಫಾರಸು ಪತ್ರ ಕೋರಿ ಬರುತ್ತಾರೆ. ಅವರಲ್ಲಿ ಬಹುತೇಕ ಯುವಜನರಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಸೂಕ್ತ ಮಾಹಿತಿಯ ಕೊರತೆಯಿದೆ. ಯುಪಿಎಸ್ಸಿ, ಕೆಪಿಎಸ್ಸಿ, ಐಬಿಪಿಎಸ್, ರೈಲ್ವೆ, ಎನ್ಡಿಎ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಸಮರ್ಪಕ ತಿಳಿವಳಿಕೆ ಹೊಂದಿಲ್ಲ. ಈ ಹಿನ್ನೆಲೆಯಲ್ಲಿ ಹಾಲಪ್ಪ ಪ್ರತಿಷ್ಠಾನವು ತುಮಕೂರು ವಿಶ್ವವಿದ್ಯಾಲಯದ ಐಕ್ಯೂಎಸಿ ವಿಭಾಗದ ಸಹಯೋಗದಲ್ಲಿ ಎರಡು ದಿನಗಳ ಉದ್ಯೋಗ ಮಾರ್ಗದರ್ಶನ ಕಾರ್ಯಾಗಾರ ಆಯೋಜಿಸಲು ನಿರ್ಧರಿಸಿದೆ.
ಈಗಾಗಲೇ ತುಮಕೂರು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ಎಲ್ಲ ಪದವಿ ಕಾಲೇಜುಗಳು ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘಟನೆಗಳಿಗೆ ಕಾರ್ಯಾಗಾರದ ಕುರಿತು ಮಾಹಿತಿ ನೀಡಲಾಗಿದೆ. ಅರ್ಹ 700 ಯುವಜನರಿಗೆ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗುತ್ತಿದ್ದು, ಆಸಕ್ತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮುರುಳೀಧರ ಹಾಲಪ್ಪ ಮನವಿ ಮಾಡಿದರು.
ನವೆಂಬರ್ 20 ಮತ್ತು 21ರಂದು ನಡೆಯುವ ಕಾರ್ಯಾಗಾರದಲ್ಲಿ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್, ಪ್ರೇರಕರಾದ ವಿನಯಕುಮಾರ್ ಜಿ.ಬಿ., ಸಲಹೆಗಾರರಾದ ಶರಣಯ್ಯ ಬಂಡಾರಿಮಠ, ಮಾರ್ಗದರ್ಶಕರಾದ ಡಾ. ಗರಣಿ ಕೃಷ್ಣಮೂರ್ತಿ, ದಿಲೀಪ್ ಅಪ್ಪೇನಹಳ್ಳಿ, ಕೆಎಎಸ್ ಅಧಿಕಾರಿ ಕೃಷ್ಣಮೂರ್ತಿ ಸೇರಿದಂತೆ ಹಲವು ಐಎಎಸ್, ಐಪಿಎಸ್ ಹಾಗೂ ಕೆಎಎಸ್ ಅಧಿಕಾರಿಗಳು ಭಾಗವಹಿಸಿ ಮಾರ್ಗದರ್ಶನ ನೀಡಲಿದ್ದಾರೆ.
ಐಎಎಸ್, ಐಪಿಎಸ್, ಕೆಎಎಸ್, ಎಫ್ಡಿಎ, ಎಸ್ಡಿಎ, ಆರ್ಆರ್ಬಿ, ಕೆಇಎ ಹಾಗೂ ಎಸ್ಎಸ್ಸಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ, ಪರೀಕ್ಷೆಗಳ ಪಠ್ಯಕ್ರಮ, ಓದಿನ ಕ್ರಮ, ಅಭ್ಯಾಸದ ವಿಧಾನ ಹಾಗೂ ಪರೀಕ್ಷಾ ಸಿದ್ಧತೆಯ ಕುರಿತು ತಜ್ಞರು ಮಾಹಿತಿ ಮತ್ತು ಸಲಹೆ ನೀಡಲಿದ್ದಾರೆ. ಜಿಲ್ಲೆಯ ಗ್ರಾಮೀಣ ಭಾಗದ ಯುವಜನರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಹಿರಿಯರಾದ ಕೆಂಚಮಾರಯ್ಯ ಮಾತನಾಡಿ, ನಿರುದ್ಯೋಗಿ ಯುವಜನರಿಗೆ ಅವರ ಭವಿಷ್ಯದ ವೃತ್ತಿಜೀವನದ ಕುರಿತು ಸೂಕ್ತ ಮಾರ್ಗದರ್ಶನ ನೀಡುವುದು ಉತ್ತಮ ಕಾರ್ಯವಾಗಿದೆ. ಹಾಲಪ್ಪ ಪ್ರತಿಷ್ಠಾನದ ಮೂಲಕ ಮುರುಳೀಧರ ಹಾಲಪ್ಪ ಅವರು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ಯುವಜನರು ಈ ಅವಕಾಶವನ್ನು ಬಳಸಿಕೊಂಡು ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಿವೃತ್ತ ಪ್ರಾಂಶುಪಾಲರಾದ ಡಾ. ಲೀಲಾವತಿ ಮಾತನಾಡಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿದ್ದ ಸಂದರ್ಭದಲ್ಲಿ ಹಾಲಪ್ಪ ಪ್ರತಿಷ್ಠಾನದ ಸಹಯೋಗದಲ್ಲಿ ಇಂತಹ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ಇಂದಿನ ವಿದ್ಯಾರ್ಥಿಗಳಲ್ಲಿ ಮೊಬೈಲ್ ಬಳಕೆಯ ಆಸಕ್ತಿ ಹೆಚ್ಚಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳ ಅರ್ಜಿ ಸಲ್ಲಿಕೆಯಂತಹ ಮೂಲಭೂತ ಪ್ರಕ್ರಿಯೆಗಳ ಬಗ್ಗೆಯೂ ಕೆಲವರಿಗೆ ಅರಿವಿನ ಕೊರತೆಯಿದೆ. ಆದ್ದರಿಂದ ನವೆಂಬರ್ 20 ಮತ್ತು 21ರಂದು ನಡೆಯುವ ಕಾರ್ಯಾಗಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಪಾಲ್ಗೊಂಡು ಉದ್ಯೋಗಾವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿ ಕೆಂಚಣ್ಣ ಮಾತನಾಡಿ, ತಾನು ರೈತನ ಮಗನಾಗಿದ್ದು, ಇಂದಿಗೂ ಕೃಷಿಯನ್ನೇ ಅವಲಂಬಿಸಿ ಜೀವನ ನಡೆಸುತ್ತಿರುವ ಕುಟುಂಬದಿಂದ ಬಂದಿದ್ದೇನೆ. ಬಿ.ಕಾಂ ಪದವೀಧರನಾಗಿರುವ ತಾನು ಉದ್ಯೋಗ ಪಡೆಯುವ ಆಶಯದಿಂದ ಈ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಆಸಕ್ತ ಯುವಜನರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಂಜುನಾಥ್ ಹಾಗೂ ಕೆಲವು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
